More

    ರಸ್ತೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಚಾಲನೆ

    ಶ್ರೀರಂಗಪಟ್ಟಣ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುತ್ತಿದ್ದು, ಗ್ರಾಮೀಣ ಜನರ ಬಳಕೆಗೆ ಗುಣಮಟ್ಟದ ರಸ್ತೆಯನ್ನು ಕೊಡುವಲ್ಲಿ ನಾನು ಶ್ರಮಿಸುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

    ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಗುರುವಾರ ಮೊಳ್ಳೆನಹಳ್ಳಿಕೊಪ್ಪಲು ಹಾಗೂ ಆಲಗೂಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    ತಾಲೂಕಿನ ಕೊಡಿಯಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೊಳ್ಳೆನಹಳ್ಳಿ ಹಾಗೂ ಆಲಗೂಡಿನ ರಸ್ತೆ ಜಲ್ಲಿಕಲ್ಲುಗಳು ಕಿತ್ತುಬಂದು ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಲು ಹಾಗೂ ಶಾಲಾ ವಿದ್ಯಾರ್ಥಿಗಳು ನಡೆದಾಡಲು ಸಾಧ್ಯವಾಗದಂತೆ ಕೆಟ್ಟದಾಗಿತ್ತು. ಇದರೊಂದಿಗೆ ಮೂರ‌್ನಾಲ್ಕು ತಿಂಗಳ ಹಿಂದೆ ಸುರಿದ ಮಳೆಯಿಂದ ಇನ್ನಷ್ಟು ಹಾನಿಯಾಗಿತ್ತು ಎಂದರು.

    ಜಿಪಂ ಮಾಜಿ ಸದಸ್ಯ ಅರಕೆರೆ ಮರೀಗೌಡ , ಕೊಡಿಯಾಲ ಗ್ರಾಪಂ ಸದಸ್ಯರಾದ ಹೇಮಂತ್ ಕುಮಾರ್, ಪ್ರಶಾಂತ್, ರಾಜಪ್ಪ, ಗ್ರಾಮದ ಮುಖಂಡ ರೈಸ್‌ಮಿಲ್ ದೇವೇಗೌಡ, ಪಿಡಿಒ ಮಹೇಶ್, ಮಾಜಿ ಸದಸ್ಯೆ ತೇಜಸ್ವಿನಿ, ಲೋಕೋಪಯೋಗಿ ಇಲಾಖೆ ಎಇಇ ಮಹೇಶ್, ಎಇ ರೇವಣ್ಣ ಕೃಷಿಕೂಲಿಕಾರ ಕಾರ್ಮಿಕ ಮುಖಂಡ ಶಂಕರಪ್ಪ ಇತರರು ಉಪಸ್ಥಿತರಿದ್ದರು.

    ಡಿಡಿಪಿಯು ತರಾಟೆಗೆ: ತಾಲೂಕಿನ ಕೊಡಿಯಾಲ ಗ್ರಾಮದ ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಖಾಲಿ ಇದ್ದ ಉಪನ್ಯಾಸಕರ ಹುದ್ದೆ ನೇಮಕಕ್ಕೆ ರಮ್ಯಾ ಎಂಬ ಅತಿಥಿ ಉಪನ್ಯಾಸಕಿಯನ್ನು ನೇಮಕ ಮಾಡುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಶಿಫಾರಸು ಪತ್ರ ನೀಡಿ ಕೆಲದಿನಗಳ ಹಿಂದೆ ಕಳುಹಿಸಿದ್ದರು. ಆದರೆ ಈ ಸಂಬಂಧ ಡಿಡಿಪಿಯು ಉಮೇಶ್ ಎಂಬುವರು ಶಿಫಾರಸು ಪತ್ರದೊಂದಿಗೆ ತೆರಳಿದ್ದ ರಮ್ಯಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಕಚೇರಿಯಿಂದ ಹೊರಹೋಗುವಂತೆ ದೂಡಿದ್ದಾರೆ ಎಂದು ಆರೋಪಿಸಿ ಆಕೆಯ ತಾಯಿ ಕೊಡಿಯಾಲ ಗ್ರಾಮದಲ್ಲಿ ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು.

    ಮಹಿಳೆಯ ಕಣ್ಣೀರಿಗೆ ಕೆರಳಿ ಕೆಂಡವಾದ ಶಾಸಕ ರವೀಂದ್ರ ಶ್ರೀಕಂಠಯ್ಯ ಅಧಿಕಾರಿಗೆ ಸ್ಥಳದಿಂದ ಕರೆ ಮಾಡಿ ದೂರವಾಣಿಯಲ್ಲಿಯೇ ತರಾಟೆಗೆ ತೆಗೆದುಕೊಂಡು ಜಿಲ್ಲೆಯ ಜನರೊಂದಿಗೆ ಸಂಯಮ ಹಾಗೂ ರೀತಿ ನೀತಿಯಿಂದ ನಡೆದುಕೊಳ್ಳಬೇಕು. ಇಲ್ಲವಾದರೆ ಜಿಲ್ಲೆಯಿಂದಲೇ ಹೊರಕಳುಹಿಸುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts