More

    ಗಿಡಗಳಿಗೆ ನೀರುಣಿಸುವ ನಿಸ್ವಾರ್ಥಿ

    ಶ್ರೀರಂಗಪಟ್ಟಣ: ಅಬ್ಬಬ್ಬಾ…! ಸಾಕಪ್ಪ ಸಾಕು.. ಈ ತಾಪ ತಾಳಲಾಗುತ್ತಿಲ್ಲ…ದಯಮಾಡಿ ನಿನ್ನ ಪ್ರತಾಪ ತಗ್ಗಿಸು ಸೂರ್ಯದೇವ..!

    ಅರೆ ಏನಿದು ಅಂತೀರಾ..? ಇಳೆಗೆ ಮಳೆ ಸುರಿಸಿ ತಣಿಸದೆ ಕೈ ಕೊಟ್ಟ ವರುಣ..,ಬಿಟ್ಟು ಬಿಡದೆ ಕಾಡುತ್ತಿರುವ ಸುಡು ಬಿಸಿಲು… ಕಾಡಿ ಧಣಿವರಿಸುತ್ತಿರುವ ಸೂರ್ಯನ ತಾಪಕ್ಕೆ ಜನರ ಬಾಯಲ್ಲಿ ಕೇಳಿಬರುವ ಹಾಗೂ ಕೆಲವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸಾಮಾನ್ಯ ಸಂದೇಶ.

    ಹೌದು…ಮಳೆ ಕೊರತೆಯಿಂದ ಭೀಕರ ಬರಗಾಲ ಹಾಗೂ ಬೇಸಿಗೆಯ ತೀವ್ರತೆ ಹೆಚ್ಚಾಗಿ ಎಲ್ಲೆಲ್ಲೂ ಬಿಸಿಗಾಳಿ ಬೀಸುತ್ತಿದೆ. ಸಾಕಷ್ಟು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ವಾಹನಗಳನ್ನು ಸೂರ್ಯನ ಬಿಸಿಲ ಶಾಖದಿಂದ ತಪ್ಪಿಸಲು ಗಿಡ-ಮರಗಳ ನೆರಳನ್ನು ಆಶ್ರಯಿಸುತ್ತಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ವ್ಯಕ್ತಿ ನಿರಂತರವಾಗಿ ಗಿಡ-ಮರಗಳ ಪೋಷಣೆಗೆ ಮುಂದಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ದ್ವೀಪನಗರಿ ಶ್ರೀರಂಗಪಟ್ಟಣದಲ್ಲೂ ಬಿರುಬೇಸಿಗೆಯ ತಾಪಕ್ಕೆ ಜನರು ಬಸವಳಿದಿದ್ದಾರೆ. ಹಲವು ಪರಿಸರ ಪ್ರೇಮಿಗಳು ಕೆಲ ವರ್ಷಗಳ ಹಿಂದೆ ತಮ್ಮ ಕೈಲಾದ ಮಟ್ಟಿಗೆ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ವಹಿಸಿದ್ದರು. ಇಂತಹ ಸಸಿಗಳಿಗೆ ಪಟ್ಟಣದ ರಂಗನಾಥನಗರದ ನಿವಾಸಿ ನಾರಾಯಣಗೌಡ ಎಂಬುವರು ಅಗತ್ಯ ಗೊಬ್ಬರ ಹಾಕಿ ಪೋಷಣೆ ಮಾಡುವ ಜತೆಗೆ ಎರಡು ವರ್ಷಗಳಿಂದ ನಿರಂತರವಾಗಿ ಖುದ್ದು ತಮ್ಮ ದ್ವಿಚಕ್ರ ವಾಹನದಲ್ಲಿ ಬಿಂದಿಗೆಗಳ ಮೂಲಕ ನೀರು ಕೊಂಡೊಯ್ದು ನೀರುಣಿಸಿ ಸಸಿಗಳ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ.

    ನಿವೃತ್ತಿ ಬಳಿಕ ಪ್ರಕೃತಿ ಉಳಿವಿಗೆ ಕಾಳಜಿ: ಮೈಸೂರಿನ ಕೈಗಾರಿಕಾ ವಲಯದಲ್ಲಿರುವ ಖಾಸಗಿ ಕಂಪನಿಯಲ್ಲಿ ಮೆಕಾನಿಕ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಜೀವನ ಕಳೆಯುತ್ತಿರುವ ನಾರಾಯಣಗೌಡ ಅವರಿಗೆ ಹಸಿರು ಹಾಗೂ ಸಸಿಗಳ ಪೋಷಣೆ ಎಂದರೆ ಎಲ್ಲಿಲ್ಲದ ಕಾಳಜಿ. ವೃತ್ತಿಯಲ್ಲಿ ಇರುವಾಗಲೇ ತಮಗೆ ಸಿಕ್ಕ ಕಡಿಮೆ ಸಮಯ ಹಾಗೂ ರಜೆಯ ದಿನಗಳಲ್ಲಿ ತಮ್ಮ ಮನೆಯಲ್ಲಿ ಪುಟ್ಟ ಕೈತೋಟ ಹಾಗೂ ತಮ್ಮ ಮನೆಯ ಬೀದಿಯುದ್ದಕ್ಕೂ ಹಲವು ಸಸಿಗಳನ್ನು ನೆಟ್ಟು ನೀರುಣಿಸುತ್ತಿದ್ದಾರೆ.

    ಶ್ರೀರಂಗನಾಥಸ್ವಾಮಿ ದೇವಾಲಯ ಸುತ್ತ, ಬೃಹತ್ ಮೈದಾನ, ವಿವಿಧೆಡೆ ಶಾಲೆಗಳ ವಿದ್ಯಾರ್ಥಿಗಳು ನೆಟ್ಟಿದ್ದ, ಹಸಿರು ಸೈನ್ಯ ಮಕ್ಕಳ ತಂಡ, ಪರಿಸರ ಪ್ರೇಮಿಗಳು ಕಾಳಜಿಯಿಂದ ನೆಟ್ಟಿದ್ದ ಸಸಿಗಳನ್ನು ಗುರುತಿಸಿ ಅವುಗಳ ಸುತ್ತ ಬೇಲಿ ಹಾಕುವ ಜತೆಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ.

    ವಾರದಲ್ಲಿ 3 ದಿನ ನೀರು: ಶ್ರೀರಂಗನಾಥಸ್ವಾಮಿ ದೇಗುಲದ ಸುತ್ತಮುತ್ತಲಿನ ಪ್ರದೇಶ, ಶ್ರೀರಂಗನ ಬೃಹತ್ ಮೈದಾನದಲ್ಲಿ ಆಲ, ಅರಳಿ, ಬೇವು, ಮತ್ತಿ, ಹೊಂಗೆ, ಟಬೂಬಿಯಾ, ರೋಸಿಯಾ, ರೇನ್‌ಟ್ರೀ, ಪಕ್ಷಿಗಳಿಗಾಗಿ ನೇರಳೆ ಮತ್ತು ಹಲಸು ಸಸಿಗಳನ್ನು ಒಳಗೊಂಡಂತೆ ಪ್ರಸ್ತುತ 120ಕ್ಕೂ ಹೆಚ್ಚು ವಿವಿಧ ಸಸಿಗಳನ್ನು ಪರಿಸರ ಪ್ರೇಮಿಗಳು ನೆಟ್ಟಿದ್ದಾರೆ. ಇವುಗಳಿಗೆ 2 ವರ್ಷಗಳಿಂದ ನಾರಾಯಣಗೌಡ ತಮ್ಮ ದ್ವಿಚಕ್ರ ವಾಹನದಲ್ಲೇ ಮುಂಜಾನೆ 6 ರಿಂದ 8ರವರೆಗೆ ಬಿಂದಿಗೆಗಳ ಮೂಲಕ ನೀರನ್ನು ಹಾಕುತ್ತಿದ್ದಾರೆ. ಭಾನುವಾರದಂದು ಎಲ್ಲ ಸಸಿಗಳಿಗೂ ನೀರುಣಿಸುವ ಇವರು ವಾರದ 3 ದಿನಗಳಲ್ಲಿ ಅಗತ್ಯ ಇರುವ ಕೆಲವು ಸಸಿಗಳಿಗೆ ನೀರುಣಿಸಿ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ.

    ಪರಿಸರ ಕಾಳಜಿಗೆ ಜತೆಯಾದ ಪುರಜನರು: ಮುಂಜಾನೆ ವೇಳೆ ನಾರಾಯಣಗೌಡ ತಮ್ಮ ದ್ವಿಚಕ್ರವಾಹನದಲ್ಲಿ ನೀರು ಕೊಂಡೊಯ್ದು ಸಸಿಗಳಿಗೆ ಹಾಕುವುದನ್ನು ಗಮನಿಸಿದ ಕೆಲ ಪುರಜನರು ಇದೀಗ ಅವರೊಂದಿಗೆ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ನ್ಯಾಯಾಲಯದಲ್ಲಿ ವಕೀಲರಾಗಿರುವ ಪರಮೇಶ್ ನಿತ್ಯ ನಾರಾಯಣಗೌಡರ ನೀರುಣಿಸುವ ಕಾಯಕಕ್ಕೆ ಜತೆಯಾಗಿದ್ದಾರೆ. ಇತ್ತೀಚೆಗೆ ಪುರಸಭಾ ಸದಸ್ಯ ದಯಾನಂದ್, ಮುಖಂಡರಾದ ಉಮೇಶ್ ಕುಮಾರ್ ನೆರವಾಗಿದ್ದಾರೆ.

    ಮಾಜಿ ಪುರಸಭಾ ಸದಸ್ಯೆ ವಿದ್ಯಾ ಉಮೇಶ್, ಪರಿಸರ ಪ್ರೇಮಿ ರಮೇಶ್, ನಿವೃತ್ತ ಸರ್ಕಾರಿ ನೌಕರ ಪುಟ್ಟಸ್ವಾಮಿ, ಉದ್ಯಮಿಗಳಾದ ಸತೀಶ್ ಮತ್ತು ರಾಜು ಸ್ನೇಹಿತರ ತಂಡ, ಪುರ ನಿವಾಸಿಗಳಾದ ಅಣ್ಣಪ್ಪ, ಕುದುರೆ ರಾಘು, ಸನತ್, ಶಂಕರ್, ರಾಜೀವ್ ಸೇರಿದಂತೆ ಹಲವರು ಈ ಕಾರ್ಯಕ್ಕೆ ಸಹಕಾರ ನೀಡಿದ್ದು, ವಾರದಲ್ಲಿ 3 ದಿನ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರು ಹಾಕಲು ಕೈಜೋಡಿಸಿದ್ದಾರೆ.

    ಮಳೆ ಕೊರತೆ, ಬರಗಾಲ, ಬಿಸಿಲ ತಾಪ, ನದಿಗಳು ಬತ್ತುವಿಕೆ ಇವೆಲ್ಲವೂ ಪ್ರಳಯದ ಒಂದು ಭಾಗ. ಭೂಮಿಯು ಸಕಲ ಜೀವರಾಶಿಗಳಿಗೆ ಕೇಳದೆಯೇ ಸಾಕಷ್ಟು ಸಂಪನ್ಮೂಲ ಹಾಗೂ ಬದುಕಲು ಅವಕಾಶ ನೀಡಿದೆ. ಇವೆಲ್ಲವನ್ನೂ ಬಳಸಿಕೊಂಡಿರುವ ನಾವ್ಯಾರೂ ಇಲ್ಲಿ ಶಾಶ್ವತವಲ್ಲ. ಪ್ರಕೃತಿ ಈಗ ನೀಡುತ್ತಿರುವ ಕಟು ಸಂದೇಶಗಳಿಂದ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ನಿರ್ನಾಮವಾಗಲಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂಬ ಕಾರಣಕ್ಕೆ ನನ್ನ ಕೈಲಾದ ಕಾಳಜಿ ತೋರಿದ್ದೇನೆಯೇ ಹೊರತು ಪ್ರಚಾರಕ್ಕಲ್ಲ.
    ನಾರಾಯಣಗೌಡ ಪರಿಸರ ಪ್ರೇಮಿ

    ನಾರಾಯಣಗೌಡರ ಕಾರ್ಯ ನನ್ನಲ್ಲಿನ ಜವಾಬ್ದಾರಿ ನೆನಪಿಸಿತು. ನಿತ್ಯ ಒಬ್ಬೊಬ್ಬರು ತಮ್ಮ ಸುತ್ತಲಿನ ಪ್ರದೇಶದಲ್ಲಿ ಸಸಿ ನೆಟ್ಟು ನೀರುಣಿಸಿ ಪೋಷಣೆ ಮಾಡಲಿ. ಅರಣ್ಯ ನಾಶ, ಮರಗಳ ಹನನ ಹಾಗೂ ಫಲವತ್ತಾದ ಹಸಿರ ಕೃಷಿ ಭೂಮಿ ಕಣ್ಮರೆಯಾಗುತ್ತಿರುವ ಕಾರಣ ಜಾಗತಿಕ ತಾಪಮಾನ ಹೆಚ್ಚಳವಾಗಿದೆ. ಪರಿಸರ ಸಮತೋಲನಕ್ಕೆ ಪ್ರತಿಯೊಬ್ಬರೂ ಪರಿಸರ ರಕ್ಷಕರಾಗಲೇಬೇಕಿದೆ. ಈ ನಿಟ್ಟಿನಲ್ಲಿ ನಾನೂ ಅವರೊಂದಿಗೆ ಪರಿಸರ ಕಾಳಜಿಗೆ ಕೈಜೋಡಿಸಿದ್ದೇನೆ.
    ಮುರುಕನಹಳ್ಳಿ ಪರಮೇಶ್ ವಕೀಲ ಶ್ರೀರಂಗಪಟ್ಟಣ

    ಕಾವೇರಿ, ಲೋಕಪಾವನಿ, ಹೇಮಾವತಿಯಂತಹ ಸಾಕಷ್ಟು ಪುಣ್ಯ ನದಿಗಳು ಮಾನವನ ದೌರ್ಜನ್ಯಗಳಿಂದ ಮಲಿನಗೊಳ್ಳುತ್ತಿವೆ. ಎಲ್ಲೆಂದರಲ್ಲಿ ಕಸದ ತ್ಯಾಜ್ಯ ಎಸೆದು ಮರಗಳನ್ನು ಕಡಿದು ಪರಿಸರ ಹಾಳುಮಾಡುತ್ತಿರುವ ನಾವುಗಳು ನಮ್ಮ ನಡೆ ಬದಲಿಸಿಕೊಳ್ಳಬೇಕಿದೆ. ಕೆಲವು ಯುವ ಮಿತ್ರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳು ಪರಿಸರ ಕಾಳಜಿಗೆ ಮುಂದಾಗುತ್ತಿರುವುದು ಶ್ಲಾಘನೀಯ.
    ಉಮೇಶ್‌ಕುಮಾರ್, ಆರ್‌ಎಸ್‌ಎಸ್ ಸ್ವಯಂಸೇವಕ, ಶ್ರೀರಂಗಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts