More

    ರಥಕ್ಕೆ ಮರ ಕಡಿಯಲು ಜಿಲ್ಲಾ ನ್ಯಾಯಾಧೀಶರಿಂದ ತಡೆ

    ಶಿರಸಿ: ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಪೂರ್ವ ಮರ ಕಡಿಯುವ ವ್ಯವಸ್ಥೆಗೆ ನ್ಯಾಯಾಂಗ ತಡೆ ನೀಡಿದ್ದು, ಯಾವುದೇ ರೀತಿಯಲ್ಲಿ ಮರ ಕಟಾವು ಆಗಬಾರದು ಎಂದು ಶಿರಸಿ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

    ನಗರದ ಮಾರಿಕಾಂಬಾ ದೇವಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮಾರಿಕಾಂಬಾ ದೇವಿ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

    ಸಂಪ್ರದಾಯದ ಪ್ರಕಾರ ಜಾತ್ರೆಗೆ ಹಸಿ ಮರ ಕಟಾವಿಗೆ ಜಿಲ್ಲಾ ನ್ಯಾಯಾಧೀಶರು ವಿರೋಧಿಸಿದ್ದು, ಈ ವರ್ಷದ ಜಾತ್ರೆಯಿಂದ ಮರ ಕಟಾವು ಸ್ಥಗಿತ ಮಾಡುವಂತೆ ಆದೇಶಿಸಿದ್ದಾರೆ. ಒಂದೊಮ್ಮೆ ಆದೇಶ ಉಲ್ಲಂಘಿಸಿ ಮರ ಕಡಿದರೆ ಮುಂದಿನ ಕ್ರಮಗಳಿಗೆ ಮರ ಕಡಿದವರೇ ನೇರ ಹೊಣೆಗಾರಾಗುತ್ತಾರೆ ಎಂದು ಹೇಳಿದರು.

    ನಗರದ ಎಲ್ಲೆಡೆ ಸಿಸಿಟಿವಿ ಕ್ಯಾಮರಾ ದುರಸ್ತಿ ಮಾಡಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಶ್ರಮಿಸಲಾಗುವುದು. ಮಕ್ಕಳ ಭಿಕ್ಷಾಟನೆಗೂ ತಡೆ ಒಡ್ಡಲಾಗುವುದು ಎಂದು ಹೇಳಿದರು.

    ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಜಿಲ್ಲಾ ನ್ಯಾಯಾಧೀಶರಿಂದ ನೇಮಕವಾದ ಧರ್ಮದರ್ಶಿಗಳಿಗೆ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿಲ್ಲ. ಹಾಗಾಗಿ ದೇವಾಲಯದ ವಿಚಾರದಲ್ಲಿ ನ್ಯಾಯಾಧೀಶರ ನಿರ್ದೇಶನದಂತೆ ನಡೆಯಲಾಗುವುದು. ಮರ ಕಡಿಯದಂತೆ ನ್ಯಾಯಾಧೀಶರು ನಿರ್ದೇಶಿಸಿದ್ದು, ಆಡಳಿತ ಮಂಡಳಿ ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಹಾಗಾಗಿ ಹಸಿ ಮರ ಕಡಿದರೆ ಕಾನೂನು ಕ್ರಮ ಎದುರಿಸುವುದು ಅನಿವಾರ್ಯ ಎಂದು ಹೇಳಿದರು.

    ಈ ಮೊದಲು ದೇವಾಲಯದಲ್ಲಿ ಕೋಣನ ಬಲಿ ಸಂಪ್ರದಾಯ ನಿಲ್ಲಿಸಲಾಗಿದೆ. ದೇವಿಯ ಮೂಲ ಬಣ್ಣ ಬದಲಿಸಲಾಗಿದೆ. ದೇವಿಯ ಮುಖದಲ್ಲಿನ ಹಲ್ಲುಗಳು ಮಾಯವಾಗಿವೆ. ಇವೆಲ್ಲ ಸಂಪ್ರದಾಯ ನಿಂತ ಮೇಲೆ ಮರ ಕಡಿಯುವ ಸಂಪ್ರದಾಯ ಸ್ಥಗಿತಗೊಂಡರೆ ವಿಶೇಷವಿಲ್ಲ ಎಂದ ಅವರು, ಈ ಹಿಂದಿನ ಜಾತ್ರೆಗಳಲ್ಲಿ ಮರ ಕಡಿದದ್ದು ಕೆಲವೇ ಪ್ರಮಾಣದಲ್ಲಿ ದೇವಾಲಯಕ್ಕೆ ಬಳಸಲಾಗಿದೆ. ಉಳಿದದ್ದು ಎಲ್ಲೆಲ್ಲಿ ಸೇರಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

    ಡಿವೈಎಸ್ಪಿ ಜಿ.ಟಿ. ನಾಯಕ ಮಾತನಾಡಿ, ಮಾರಿ ಜಾತ್ರೆ ಸುಗಮವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗುವುದು ಎಂದರು.

    ಬಾಬುದಾರ ಪ್ರಮುಖ ಜಗದೀಶ ಗೌಡ, ಮರ ಕಡಿಯುವ ಸಂಪ್ರದಾಯ ಮುಂದುವರಿಯುತ್ತದೆ. ಅರಣ್ಯ ಇಲಾಖೆ ಅನುಮತಿ ಪಡೆದು ನಿರ್ದಿಷ್ಟ ಜಾತಿಯ ಕೆಲ ಮರ ಮಾತ್ರ ಕಡಿಯಲಾಗುವುದು ಎಂದು ಸಭೆಯಲ್ಲಿ ಹೇಳಿದರು.

    ಅರಣ್ಯ ಇಲಾಖೆಯ ಅಧಿಕಾರಿ ಡಿ. ರಘು, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಪೌರಾಯುಕ್ತ ರಮೇಶ ನಾಯಕ, ಪ್ರಮುಖರಾದ ರಮೇಶ ದಬ್ಬೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಶಾಂತಾರಾಮ ಹೆಗಡೆ, ಸಾಮಾಜಿಕ ಕಾರ್ಯಕರ್ತ ರಾಮು ಕಿಣಿ, ಮಂಜು ಮೊಗೇರ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ , ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅನಿತಾ ಪರ್ವತಿಕರ್ ಇತರರಿದ್ದರು. ದೇವಾಲಯದ ವ್ಯವಸ್ಥಾಪಕ ನರೇಂದ್ರ ಜಾಧವ ನಿರೂಪಿಸಿದರು.

    ಯಾವುದಕ್ಕೆ ಮರ ಬಳಕೆ?: ಮೂರುವರೆ ಶತಮಾನದ ಇತಿಹಾಸವಿರುವ ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಜಾತ್ರೆ ವೇಳೆ ದೇವಿ ಸಾಗುವ ರಥಕ್ಕೆ ಮರ ಬಳಸಲಾಗುತ್ತಿತ್ತು. ರಥದ ಗಾಲಿ, ಸನ್ನೆ, ಅಟ್ಟಣಿಕೆ ಸೇರಿದಂತೆ ಇಡೀ ರಥಕ್ಕೆ ವಿವಿಧ ಜಾತಿಯ 7 ಹಸಿಯಾದ ಬೃಹತ್ ಮರಗಳನ್ನು ಹತ್ತಿರದ ನರೇಬೈಲಿನ ಅರಣ್ಯ ಪ್ರದೇಶದಿಂದ ಕಡಿದು ತರಲಾಗುತ್ತಿತ್ತು. ಕಾಲ ಕಳೆದಂತೆ ಮರದ ಕೆಲವು ಭಾಗಗಳನ್ನು ಮಾತ್ರ ರಥಕ್ಕೆ ಬಳಸಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

    ದೇವಾಲಯದಲ್ಲಿನ ಕಾವಿ ಕಲೆಗಳ ರಕ್ಷಣೆ ಆಗಬೇಕು. ರಥಬೀದಿ ವಿಸ್ತರಿಸಬೇಕು. ಯಾತ್ರಿ ನಿವಾಸವನ್ನು ಸುಪರ್ದಿಗೆ ಪಡೆದು ಸೌಲಭ್ಯ ಕಲ್ಪಿಸಬೇಕು. | ಪರಮಾನಂದ ಹೆಗಡೆ ಶಿರಸಿ ನಿವಾಸಿ

    ಜಾತ್ರೆಗೆ ಬರುವ ಭಕ್ತರಿಗೆ ಅನ್ನದಾನ ಮಾಡಬೇಕು. ಸಾರಿಗೆ ವ್ಯವಸ್ಥೆ ಸುಗಮವಾಗಬೇಕು. ಜಾತ್ರಾ ಶುಲ್ಕ ಎಂದು ಬಸ್ ದರ ಹೆಚ್ಚಿಸಬಾರದು. | ವಿಶ್ವನಾಥ ಶರ್ಮ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts