More

    ರಂಗೇರತೊಡಗಿದೆ ಹಳ್ಳಿ ಫೈಟ್

    ಹಾವೇರಿ: ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾದ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಹೀಗಾಗಿ, ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.

    ಕರೊನಾ ಲಗ್ಗೆ ಹಾಕದಿದ್ದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿಯೇ ಚುನಾವಣೆ ನಡೆದು ಹೊಸ ಅಧ್ಯಕ್ಷ, ಉಪಾಧ್ಯಕ್ಷರು ಪಂಚಾಯಿತಿಗಳಲ್ಲಿ ಅಧಿಕಾರಕ್ಕೇರುತ್ತಿದ್ದರು. ಆದರೆ, ಕರೊನಾ ವೈರಸ್​ನಿಂದಾಗಿ ಲಾಕ್​ಡೌನ್ ಘೊಷಣೆಯಾಗಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಈಗ ಆಯೋಗ ಹಲವು ಮುಂಜಾಗ್ರತೆ ಕ್ರಮಗಳೊಂದಿಗೆ ಚುನಾವಣೆಗೆ ಹಸಿರು ನಿಶಾನೆ ತೋರಿದೆ. ಹಳ್ಳಿ ಫೈಟ್​ಗೆ ಕಾರ್ಯಕರ್ತರು ಸಜ್ಜಾಗುತ್ತಿದ್ದು, ಚುನಾವಣೆಯ ಕಾವು ರಂಗೇರತೊಡಗಿದೆ.

    ಜಿಲ್ಲೆಯ 223 ಗ್ರಾಪಂಗಳ ವಿವಿಧ ವಾರ್ಡ್​ಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಮತದಾರರ ಅಂತಿಮ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅಲ್ಲದೆ, ಯಾವ ರೀತಿ ಚುನಾವಣೆ ನಡೆಸಬೇಕು ಎಂಬುದಕ್ಕೆ ಗ್ರಾಪಂ ಅನುಸರಿಸಬೇಕಾದ ಪ್ರಾಮಾಣಿಕ ಕಾರ್ಯನಿರ್ವಹಣಾ ಪದ್ಧತಿ (ಎಸ್​ಒಪಿ) ಕರಡು ಪ್ರತಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಚುನಾವಣೆಗೆ ಮುಹೂರ್ತ ನಿಗದಿಯಾಗುವುದೊಂದೆ ಬಾಕಿ ಉಳಿದಿದೆ.

    ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 16 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ (ಇನ್ನು ಅಧಿಕಾರವಧಿ ಮುಗಿಯದ ಕಾರಣ) ಉಳಿದೆಲ್ಲ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಬ್ಯಾಡಗಿ ತಾಲೂಕಿನ 21, ರಾಣೆಬೆನ್ನೂರಿನ 40, ರಟ್ಟಿಹಳ್ಳಿಯ 19, ಸವಣೂರಿನ 21, ಶಿಗ್ಗಾಂವಿಯ 28, ಹಾವೇರಿಯ 33, ಹಿರೇಕೆರೂರ 19, ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿದೆ.

    ಮತದಾರರ ಅಂತಿಮ ಪಟ್ಟಿ ಪ್ರಕಟ: ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು. ಅರ್ಹತೆ ಇರುವ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಸ್ವೀಕೃತವಾದ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಪರಿಶೀಲಿಸಿ ಪಟ್ಟಿ ಪರಿಷ್ಕರಿಸುತ್ತಾರೆ.

    ಹಳ್ಳಿಗಳಲ್ಲಿ ಚುನಾವಣೆಯ ಅಖಾಡ ರಂಗೇರತೊಡಗಿದೆ. ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳು ಈಗಿನಿಂದಲೇ ಮತದಾರರ ಮನವೊಲಿಕೆ ಹಾಗೂ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ. ಚುನಾವಣೆಗಳು ರಾಜಕೀಯ ಪಕ್ಷದ ಚಿಹ್ನೆಗಳಡಿಯಲ್ಲಿ ನಡೆಯದೇ ಇದ್ದರೂ ಆಯಾ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವವರೇ ಅಖಾಡಕ್ಕಿಳಿಯುವುದು ಸಾಮಾನ್ಯ. ಹೀಗಾಗಿ, ಪಕ್ಷದ ತಾಲೂಕು ಅಧ್ಯಕ್ಷರು, ಆಯಾ ಕ್ಷೇತ್ರದ ಶಾಸಕರ ಮನೆಬಾಗಿಲಿಗೂ ಆಕಾಂಕ್ಷಿಗಳು ದಾಂಗುಡಿಯಿಡುತ್ತಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಕೆಲವೆಡೆ ಆಕಾಂಕ್ಷಿಗಳು ದೇವಸ್ಥಾನಗಳ ಜೀಣೋದ್ಧಾರಕ್ಕೆ ಇಂತಿಷ್ಟು ದೇಣಿಗೆ ನೀಡುತ್ತೇವೆ. ನಮ್ಮನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಎಂಬ ಭರವಸೆಗಳನ್ನು ನೀಡುತ್ತಿದ್ದಾರೆ.

    ಎಸ್​ಒಪಿ ಪಾಲಿಸಲು ಸೂಚನೆ

    ಗ್ರಾಪಂ ಚುನಾವಣೆ ನಡೆಸುವ ಬಗ್ಗೆ ಅನುಸರಿಸಬೇಕಾದ ಎಸ್​ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಕರಡು ಪ್ರತಿಯನ್ನು ರಾಜ್ಯ ಚುನಾವಣಾ ಆಯೋಗ ಸೆ. 3ರಂದು ಬಿಡುಗಡೆಗೊಳಿಸಿದೆ. ಈ ಪ್ರಕಾರ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಥರ್ಮಲ್ ಸ್ಕ್ಯಾನರ್​ನಿಂದ ಪರೀಕ್ಷೆ ನಡೆಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಚುನಾವಣೆ ಕಾರ್ಯಗಳನ್ನು ಸಾಧ್ಯವಾದಷ್ಟು ವಿಶಾಲವಾದ ಕೊಠಡಿಗಳಲ್ಲಿ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಕರೊನಾ ಸೋಂಕಿತ ವ್ಯಕ್ತಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದು, ಇಂತಹ ಅಭ್ಯರ್ಥಿಯು ಸೂಚಕರ ಮೂಲಕ ನಾಮಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಚುನಾವಣೆ ಪ್ರಚಾರಕ್ಕೆ ಈ ಬಾರಿ ಗರಿಷ್ಠ 5 ಜನ ಸೇರಿ ಪರಸ್ಪರ ಅಂತರ ಕಾಯ್ದುಕೊಂಡು ಮನೆಮನೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.. ಹಳ್ಳಿ ಫೈಟ್​ಗೆ ಆಯೋಗ ಅನೇಕ ಮಾರ್ಗಸೂಚಿಗಳನ್ನು ನೀಡಿದ್ದು, ಅದರನ್ವಯ ಚುನಾವಣೆ ನಡೆಸಲು ಜಿಲ್ಲಾಡಳಿತವೂ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts