More

    ರಂಗಭೂಮಿಗೆ ಸಾಗರದ ಕೊಡುಗೆ ಅಪಾರ

    ಸಾಗರ: ರಂಗಭೂಮಿಗೆ ಆಶ್ರಯ ನೀಡಿದ ಸಾಗರ ಅದು ಕಲಾಸಾಗರ. ಇಡೀ ಕರ್ನಾಟಕದಲ್ಲಿ ಸಾಗರಕ್ಕೆ ತನ್ನದೇ ಆದ ಮಹತ್ವವಿದೆ. ವೃತ್ತಿ ರಂಗಭೂಮಿಯನ್ನು ಜೀವಂತವಾಗಿಡುವಲ್ಲಿ ಸಾಗರದ ಕೊಡುಗೆ ಅಪಾರ ಎಂದು ಚಿತ್ರನಟ ಶಿವರಾಮ್ ಹೇಳಿದರು.

    ನಗರದ ಅಶೋಕ ರಸ್ತೆಯಲ್ಲಿ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಆಯೋಜಿಸಿದ್ದ ಸಾಂಸ್ಕೃತಿಕ ಕಲಾಸಿರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಐತಿಹಾಸಿಕ , ಪ್ರಾಕೃತಿಕ, ಸಾಹಿತ್ಯ, ಸಾಂಸ್ಕೃತಿಕವಾಗಿ ವೈಶಿಷ್ಠ್ಯೆ ಹೊಂದಿರುವ ಸಾಗರ ಎಲ್ಲ ಕ್ಷೇತ್ರಗಳಿಗೂ ಸಾಧಕರನ್ನು ಕೊಡುಗೆ ನೀಡಿದೆ ಎಂದರು.

    ಯಾವುದೇ ಕ್ಷೇತ್ರ ಗಮನಿಸಿದರೂ ಅಲ್ಲಿ ಸಾಗರದ ಪ್ರತಿಭಾವಂತ ಜನರು ಇರುತ್ತಾರೆ. ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೂ ಸಾಗರದ ಕೊಡುಗೆ ಅಪಾರ. ಇಂತಹ ಪುಣ್ಯಸ್ಥಳದಲ್ಲಿ ಗೌರವ ದೊರೆತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

    ಸಾಗರದ ಜತೆಗಿನ ಓಡನಾಟ ದಶಕಗಳ ಹಳೆಯದ್ದು. ಕಾಲೇಜಿನ ದಿನಗಳಲ್ಲಿ ಕಾಗೋಡು ತಿಮ್ಮಪ್ಪ ಅವರ ಜತೆ ಕೆಲ ಕ್ಷಣಗಳನ್ನು ಕಳೆದಿದ್ದೇನೆ. ಸಾಹಿತಿ ಡಾ. ನಾ.ಡಿಸೋಜ ಅವರು ರಚಿಸಿರುವ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕಾಲೇಜು ದಿನಗಳಲ್ಲಿ ಸಾಮಾಜಿಕ ಸೇವೆ ಕ್ಯಾಂಪ್​ನಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

    58ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಈವರೆಗೂ ನಟ, ನಿರ್ದೇಶನ, ನಿರ್ಮಾಣ ಸೇರಿ ವಿವಿಧ ವಿಭಾಗಗಳಲ್ಲಿ ಕನ್ನಡ ನಾಡಿನ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರೇಕ್ಷಕರು ಪ್ರೋತ್ಸಾಹಿಸಿ ಬೆಳೆಸಿದ ಪರಿಣಾಮ ದಶಕಗಳ ಕಾಲ ಅಭಿನಯಿಸಲು ಸಾಧ್ಯವಾಗಿದೆ. ಕಲಾಭಿಮಾನಿಗಳ ಪ್ರೋತ್ಸಾಹ ಎಲ್ಲ ಕಲಾವಿದರ ಮೇಲೂ ನಿರಂತರವಾಗಿರಬೇಕೆಂದರು.

    ಸಾಹಿತಿ ಡಾ. ನಾ.ಡಿಸೋಜಾ ಮಾತನಾಡಿ, ಸಾಗರದ ಅಧಿದೇವತೆಯಾಗಿ ಮಾರಿಕಾಂಬೆಯ ಉತ್ಸವ ತನ್ನ ವೈಶಿಷ್ಟ್ಯೆಗಳಿಂದಲೇ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ಎಲ್ಲ ಜಾತಿ ಸಮುದಾಯದವರು ಒಟ್ಟುಗೂಡಿ ಆಚರಿಸುವ ಮಾರಿಕಾಂಬೆಯ ಐತಿಹಾಸಿಕ ಹಿನ್ನೆಲೆ ವಿಶೇಷವಾಗಿದೆ ಎಂದು ಹೇಳಿದರು.

    ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶ್ರೀ ಮಾರಿಕಾಂಬಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎಸಿ ಡಾ. ಎಲ್.ನಾಗರಾಜ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಭಾವನಾ ಸಂತೋಷ್, ಲಲಿತಮ್ಮ, ತುಕಾರಾಂ, ಗಣೇಶ್ ಪ್ರಸಾದ್, ಜಾತ್ರಾ ಸಮಿತಿ ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಕಾರ್ಯದರ್ಶಿ ಬಿ.ಗಿರಿಧರರಾವ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ಎಸ್.ವಿ.ಕೃಷ್ಣಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್​ಕುಮಾರ್ ಗುಡಿಗಾರ್, ರಾಮಚಂದ್ರ ಇದ್ದರು. ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.

    ಶ್ರೀ ಮಾರಿಕಾಂಬಾ ಕಲಾವೇದಿಕಯಲ್ಲಿ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, ವಿಶಾಲ ಹರಿಕಿರಣ್ ಅವರಿಂದ ಕೂಚುಪುಡಿ, ಸಾಯಿ ಗ್ರೂಪ್ ಡ್ಯಾನ್ಸ್ ಸಾಗರ ತಂಡದಿಂದ ನೃತ್ಯ, ಎಚ್.ಎಲ್.ರಾಘವೇಂದ್ರ ವೃಂದದಿಂದ ರಸಮಂಜರಿ, ಉಡುಪಿಯ ಡಾ. ಅಭಿಷೇಕ್ ಕರೋಡ್ಕಲ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts