More

    ಯೋಜನೆಗಳು ಗ್ಯಾರಂಟಿ, ಅಪಪ್ರಚಾರಕ್ಕೆ ಕಿವಿಗೊಡದಿರಿ-ಮಾಜಿ ಶಾಸಕ ಎಸ್.ರಾಮಪ್ಪ

    ದಾವಣಗೆರೆ: ಕಾಂಗ್ರೆಸ್, ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಗ್ಯಾರಂಟಿಗಳನ್ನು ಜೂನ್ 15ರೊಳಗೆ ಈಡೇರಿಸಲಿದೆ. ವಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುವುದನ್ನು ಕೈಬಿಡಬೇಕು ಎಂದು ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.
    ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಕುಟುಂಬದ ಒಬ್ಬ ಗೃಹಿಣಿಗೆ 2 ಸಾವಿರ ರೂ. ನೆರವು, ಸ್ತ್ರೀಯರಿಗೆ ಉಚಿತ ಬಸ್‌ಪಾಸ್, ಉದ್ಯೋಗ ವಂಚಿತರಿಗೆ ನಿರುದ್ಯೋಗ ಭತ್ಯೆ ಈ ಎಲ್ಲ ಗ್ಯಾರಂಟಿಗಳನ್ನು ಆರ್ಥಿಕ ಸಾಧಕ-ಬಾಧಕ ಗಮನಿಸಿ ಸರ್ಕಾರ ಜಾರಿಗೆ ತರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮೊದಲ ಸಚಿವ ಸಂಪುಟದಲ್ಲೇ ಗ್ಯಾರಂಟಿ ಯೋಜನೆಗಳ ಜಾರಿಗೆ ಒಪ್ಪಿಗೆ ನೀಡಲಾಗಿದೆ. ಜಾರಿಗೆ ಸ್ವಲ್ಪ ಸಮಯ ಆಗಲಿದೆ. ಆದರೆ ಜನರು ಕರೆಂಟ್ ಬಿಲ್ ಕಟ್ಟಬೇಡಿ, ಬಸ್‌ಗಳಲ್ಲಿ ಟಿಕೆಟ್ ಪಡೆಯಬೇಡಿ ಎಂಬುದಾಗಿ ಬಿಜೆಪಿ-ಜೆಡಿಎಸ್ ಮುಖಂಡರು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುವುದನ್ನು ಕೈಬಿಡಬೇಕು ಎಂದು ಹೇಳಿದರು.
    ಸೋಲಿನ ಹತಾಷೆಯಿಂದಾಗಿ ಪ್ರತಿಪಕ್ಷ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಷ್ಟ್ರದ ಪ್ರತಿ ಪ್ರಜೆಯ ಖಾತೆಗೆ 15 ಲಕ್ಷ ರೂ. ಹಾಕುವ, ಪ್ರತಿ ವರ್ಷ 2 ಲಕ್ಷ ನೀಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ. ಹಾಗಾಗಿ ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಲಿದೆ ಎಂದರು.
    ಕೆಲವೆ ದಿನಗಳಲ್ಲಿ ಭರವಸೆಗಳು ಜಾರಿಯಾಗಲಿವೆ. ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ವಕ್ತಾರ ಎಂ. ನಾಗೇಂದ್ರಪ್ಪ, ಮುರುಗೇಶಪ್ಪ, ಜಿ. ಕೃಷ್ಣಮೂರ್ತಿ, ಶಶಿರೆಡ್ಡಿ, ರೆಹಮಾನ್‌ಖಾನ್ ಇತರರಿದ್ದರು.

    ಟಿಕೆಟ್ ತಪ್ಪಲು ಕೆಲವರ ಕೈವಾಡ
    ಹರಿಹರ ಕ್ಷೇತ್ರದಿಂದ ನನಗೆ ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಪಕ್ಷ ನಡೆಸಿದ ಸಮೀಕ್ಷೆಯಲ್ಲೂ ನನ್ನ ಹೆಸರು ಮುಂದಿತ್ತು. ಆದರೆ ಕಾಣದ ಕೈಗಳ ಕೈವಾಡದಿಂದಾಗಿ ಬೇರೊಬ್ಬರಿಗೆ ಟಿಕೆಟ್ ನೀಡಲಾಯಿತು ಎಂದು ರಾಮಪ್ಪ ಮತ್ತೊಮ್ಮೆ ನೋವು ತೋಡಿಕೊಂಡರು.
    ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. 70ರಿಂದ 80 ಕೋಟಿ ರೂ.ಗಳ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ. ನಾನು ಶಾಸಕನಲ್ಲದಿದ್ದರೂ ಅಭಿವೃದ್ಧಿ ಕೆಲಸಗಳ ಬಗ್ಗೆ ನಿಗಾ ವಹಿಸಿದ್ದೇನೆ.
    ಸ್ವಾಮೀಜಿಗಳ ಜತೆ ಉತ್ತಮ ಒಡನಾಟ ಇರಿಸಿಕೊಂಡಿದ್ದೇನೆ. ಆದರೂ ಬೇರೊಬ್ಬರಿಗೆ ಟಿಕೆಟ್ ನೀಡುವಂತೆ ಪಂಚಮಸಾಲಿ, ವಾಲ್ಮೀಕಿ, ಕಾಗಿನೆಲೆ ಸ್ವಾಮೀಜಿಗಳು ಹೈಕಮಾಂಡ್‌ಗೆ ಪತ್ರ ಬರೆದಿರಲೂ ಬಹುದು. ನನ್ನ ವಿಚಾರದಲ್ಲಿ ಹೈಕಮಾಂಡ್ ಮೈಮರೆತಿರಬಹುದು ಎಂದು ಹೇಳಿದರು.
    ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡದಿದ್ದಾಗ ಉತ್ತಮ ಸ್ಥಾನಮಾನ ನೀಡುವುದಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಅದರಂತೆ ಎಂಎಲ್ಸಿ ಹುದ್ದೆಗೆ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಟ್ಟರೂ ನಿಭಾಯಿಸಲಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts