More

    ಯೆಸ್ ಬ್ಯಾಂಕ್​ಗೆ ಗ್ರಾಹಕರ ಲಗ್ಗೆ

    ಧಾರವಾಡ/ಹುಬ್ಬಳ್ಳಿ: ಯೆಸ್ ಬ್ಯಾಂಕ್ ಸುಸ್ತಿ ಸಾಲದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಆರ್​ಬಿಐ, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್​ಸೀಡ್ ಮಾಡಿದೆ. ಈ ವಿಷಯ ತಿಳಿದ ಹುಬ್ಬಳ್ಳಿ- ಧಾರವಾಡದ ಗ್ರಾಹಕರು ಬ್ಯಾಂಕ್ ಶಾಖೆಗೆ ಶುಕ್ರವಾರ ಬೆಳಗ್ಗೆಯಿಂದಲೇ ಲಗ್ಗೆ ಹಾಕಿದ್ದರು.

    ಧಾರವಾಡ ಎನ್​ಟಿಟಿಎಫ್ ಬಳಿ ಮತ್ತು ಹುಬ್ಬಳ್ಳಿ ಕ್ಲಬ್ ರಸ್ತೆಯಲ್ಲಿಯ ಯೆಸ್ ಬ್ಯಾಂಕ್ ಶಾಖೆಗಳಿಗೆ ಧಾವಿಸಿ ಬಂದ ಗ್ರಾಹಕರು ತಾವು ಎಫ್​ಡಿ ಇಟ್ಟಿದ್ದ ಹಾಗೂ ಖಾತೆಯಲ್ಲಿ ಕೂಡಿಟ್ಟ ಹಣದ ಬಗ್ಗೆ ಮಾಹಿತಿ ಪಡೆದರು. ಬ್ಯಾಂಕ್​ನಲ್ಲೇ ಇರುವ ಎಟಿಎಂನಲ್ಲಿ ಹಣ ಸಿಗದಿರುವುದರಿಂದ ಚಿಂತಾಕ್ರಾಂತರಾಗಿದ್ದರು.

    ಯೆಸ್ ಬ್ಯಾಂಕ್ ಕಾರ್ಡ್​ನಿಂದ ಬೇರೆ ಬ್ಯಾಂಕ್​ಗಳ ಎಟಿಎಂಗಳಲ್ಲೂ ಹಣ ಸಿಗದಿರುವುದು, ಗೂಗಲ್ ಪೇ ಹಾಗೂ ಪೇಟಿಎಂಗಳಿಂದಲೂ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ ಎಂದು ಗ್ರಾಹಕ ಬಿ.ವಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆ ಎದುರು ಅಳಲು ತೋಡಿಕೊಂಡರು.

    ಗ್ರಾಹಕರು ಗರಿಷ್ಠ 50 ಸಾವಿರ ರೂ. ಪಡೆಯಲು ಅವಕಾಶ ಇದ್ದುದರಿಂದ ಅವಸರದಲ್ಲಿ ಚೆಕ್ ಅಥವಾ ವಿಥ್​ಡ್ರಾ ಸ್ಲಿಪ್ ಬರೆದುಕೊಟ್ಟು ಹಣ ಪಡೆದುಕೊಂಡು ಹೋದರು. ಬ್ಯಾಂಕ್ ವಹಿವಾಟು ಎಂದಿನಂತೆ ನಡೆದಿದ್ದು, ಎಟಿಎಂ ಬಂದ್ ಆಗಿದೆ. ಪ್ರತಿದಿನ ಎಟಿಎಂಗೆ 15 ಲಕ್ಷ ರೂ. ಜಮಾ ಮಾಡಲಾಗಿರುತ್ತಿತ್ತು. ಆದರೆ, ಗುರುವಾರ ರಾತ್ರಿಯೇ ಎಟಿಎಂನಲ್ಲಿನ ಹಣವೆಲ್ಲ ಖಾಲಿಯಾಗಿದೆ. ಬ್ಯಾಂಕ್ ಗ್ರಾಹಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದ್ದು, ಪ್ರತಿ ತಿಂಗಳು 50,000 ರೂ. ಪಡೆಯಲು ತೊಂದರೆ ಇಲ್ಲ ಎಂದು ಧಾರವಾಡ ಶಾಖೆ ಮ್ಯಾನೇಜರ್ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು. ಹುಬ್ಬಳ್ಳಿ ಶಾಖೆ ಬಳಿ ಜಮಾಯಿಸಿದ್ದ ಗ್ರಾಹಕರಲ್ಲಿ ಕೆಲವರು, ಮಾರ್ಚ್ ತಿಂಗಳು ಆರ್ಥಿಕ ವರ್ಷಾಂತ್ಯವಾಗಿದ್ದರಿಂದ ಹೆಚ್ಚಿನ ಹಣ ವಾಪಸ್ ಪಡೆಯುವ ಅವಶ್ಯಕತೆ ಇತ್ತು. ಆದರೆ, 50 ಸಾವಿರ ರೂ. ಮಿತಿ ಹಾಕಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಕಳವಳದಿಂದ ಹೇಳಿದರು. ಬ್ಯಾಂಕ್ ಸಿಬ್ಬಂದಿ ಎಷ್ಟೇ ವಿವರಿಸಿದರೂ ಗ್ರಾಹಕರಿಗೆ ಸಮಾಧಾನವಾದಂತೆ ಕಂಡುಬರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts