More

    ಯುವ ದಸರಾ, ಶಾರದಾಂಬ ಮಂಟಪಗಳಿಗೆ ಪ್ರಶಸ್ತಿ

    ಗೋಣಿಕೊಪ್ಪ : 44ನೇ ವರ್ಷದ ಗೋಣಿಕೊಪ್ಪ ದಸರಾ ಶೋಭಾಯಾತ್ರೆಯಲ್ಲಿ ಭಗವತಿ, ಯುವ ದಸರಾ ಮತ್ತು ಶಾರದಾಂಬ ಮಂಟಪಗಳು ಅತ್ಯುತ್ತಮ ಮಂಟಪ ಪ್ರಶಸ್ತಿಗೆ ಭಾಜನವಾದವು.


    ಗುರುವಾರ ಮುಂಜಾನೆವರೆಗೂ ನಡೆದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳು ಬೆಳಕಿನ ಚಿತ್ತಾರ ಮೂಡಿಸಿ ಕಣ್ಮನ ಸೆಳೆದವು. ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಸೀಗೆತೋಡಿನಲ್ಲಿ ವಿಸರ್ಜಿಸಿ ದಸರಾಕ್ಕೆ ತೆರೆ ಎಳೆಯಲಾಯಿತು. 10 ದಿನಗಳ ಕಾರ್ಯಕ್ರಮದಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಆಚರಿಸಿದ ಸಮಿತಿಗೆ ಮೆಚ್ಚುಗೆ ವ್ಯಕ್ತವಾಯಿತು.


    ಕಿಕ್ಕಿರಿದ ಜನಸ್ತೋಮ ದಸರಾಕ್ಕೆ ವಿಶೇಷ ಮೆರುಗು ನೀಡಿತು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಪಟ್ಟಣ, ಅಲ್ಲಲ್ಲಿ ಆಟಿಕೆ, ಸಿಹಿ ತಿಂಡಿಗಳ ವ್ಯಾಪಾರ ಜೋರಾಗಿತ್ತು. ಮಕ್ಕಳು, ಹಿರಿಯರು ಕಿರಿಯರು ಭಾಗವಹಿಸಿ ಕುಣಿದು ಕುಪ್ಪಳಿಸಿದರು. ಮಂಟಪಗಳ ಜತೆ ಹಾಡು, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಮನಸ್ಸು ಹಗುರವಾಗಿಸಿಕೊಂಡರು. ಜಲಪ್ರಳಯ, ಕರೊನಾದಿಂದ 3-4 ವರ್ಷಗಳ ನಂತರ ದಸರಾ ಆಚರಣೆಯಲ್ಲಿ ಪಾಲ್ಗೊಂಡು ನೋವು ಮರೆತರು.


    ಬೆಸ್ಟ್ ತ್ರೀ ; ಕೈಕೇರಿ ಭಗವತಿ, ಯುವ ದಸರಾ ಸಮಿತಿ ಮತ್ತು ಮೈಸೂರಮ್ಮ ನಗರದ ಶಾರದಾಂಬ ಸಮಿತಿಯ ಮಂಟಪ ಬೆಸ್ಟ್ ತ್ರೀ ಪ್ರಶಸ್ತಿ ಪಡೆದುಕೊಂಡವು. ಕೈಕೇರಿ ಭಗವತಿ ದಸರಾ ಸಮಿತಿಯು ಚಾಮುಂಡೇಶ್ವರಿಯಿಂದ ಮಹಿಷಾಸುರನ ವಧೆ ಕಥಾನಕಕ್ಕೆ ಜೀವ ತುಂಬಿದರು. ಮಹಿಷಾಸುರನ ವಿರುದ್ಧ ಮೊದಲು ಸೋಲು ನಡೆದ ನಂತರ, ಮತ್ತಷ್ಟು ಶಕ್ತಿಗಾಗಿ ಪ್ರಾರ್ಥಿಸಿದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಶಕ್ತಿ ಪಡೆದುಕೊಂಡು ಚಾಮುಂಡೇಶ್ವರಿ ಸಂಹಾರ ಮಾಡುವ ಕಥಾನಕ ಪ್ರಶಸ್ತಿ ಮುತ್ತಿಕ್ಕುವಲ್ಲಿ ಸಫಲವಾಯಿತು. 2 ಜೆಸಿಬಿ, 1 ಟ್ಯಾಕ್ಟರ್, ಹಿಟಾಚಿ ಬಳಸಲಾಗಿತ್ತು.


    ಯುವ ದಸರಾ ಸಮಿತಿಯಿಂದ ವಿಷ್ಣು ಪುರಾಣದ ಕಥೆಯಲ್ಲಿ ಅಯಗ್ರೀವನಿಂದಲೇ ವಿಷ್ಣು ಅವತಾರದಲ್ಲಿ ಸಂಹಾರ ನಡೆಯುವ ಕಥೆ ಮೂಡಿಬಂತು. 1 ಜೆಸಿಬಿ, ಕ್ರೇನ್, 2 ಟ್ರ್ಯಾಕ್ಟರ್, ಆರ್ಟ್ ಇತ್ತು. ಮೈಸೂರಮ್ಮ ನಗರದ ಶಾರದಾಂಬ ದಸರಾ ಸಮಿತಿಯು ವಿಷ್ಣು ಪುರಾಣದ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಿತು. ಭಕ್ತ ಪ್ರಹ್ಲಾದನ ಬೇಡಿಕೆಗೆ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶ್ಯಪನ ವಧೆ ಕಥೆಗೆ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು.12ಕ್ಕೂ ಹೆಚ್ಚು ಕಲಾಕೃತಿಗಳೊಂದಿಗೆ ಟ್ರಾೃಕ್ಟರ್, ಕ್ರೇನ್, ಲಾರಿ ಸೇರಿದಂತೆ 6 ವಾಹನಗಳನ್ನು ಶೋಭಾಯಾತ್ರೆಗೆ ಬಳಸಲಾಗಿತ್ತು.


    ಮತ್ತಷ್ಟು ಸ್ಪರ್ಧೆ ನೀಡಿದ ಮಂಟಪಗಳು:
    ವಾಡಿಕೆಯಂತೆ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿ ಹೊತ್ತ ತೇರು ಮುಂದೆ ಸಾಗಿ ಬಂತು. ಅದರ ಹಿಂದೆ ನವಮಂಟಪಗಳು ಹಿಂಬಾಲಿಸಿದವು. ಉಳಿದ ಮಂಟಪಗಳು ಕೂಡ ತಮ್ಮದೇ ಚಿಂತನೆಯ ಪ್ರದರ್ಶನ ನೀಡಿದವು. ಸರ್ವರ ದಸರಾ ಸಮಿತಿಯಿಂದ ಆದಿ ಪರಾಶಕ್ತಿಯಿಂದ ಶುಂಭ, ನಿಶುಂಭನ ಸಂಹಾರದ ಕಥೆ ಮೂಡಿಬಂತು. ಕ್ರೇನ್ 3, 1 ಟ್ರ್ಯಾಕ್ಟರ್, ಬಳಸಲಾಗಿತ್ತು. ನವಚೇತನ ದಸರಾ ಸಮಿತಿ ವತಿಯಿಂದ ದೇವಿ ಚಿತ್ರಣ, ನಾಡಹಬ್ಬ ದಸರಾ ಸಮಿತಿ ಭಾರತಾಂಭೆ ಚಿತ್ರ ಪ್ರಸ್ತುತಪಡಿಸಿದವು. ಅರುವತ್ತೊಕ್ಲು ಕಾಡ್ಲಯ್ಯಪ್ಪ ಸಮಿತಿ ಗಣಪತಿಯಿಂದ ಗಜಾಸುರನ ವಧೆ ಕಥೆಯನ್ನು ಬಿಂಬಿಸಿತು. ಕಲಾಕೃತಿ ನಿರ್ಮಿಸಿ 4 ಟ್ರಾಕ್ಟರ್, 1 ಹಿಟಾಚಿ, 1 ಕ್ರೇನ್ ಬಳಸಿ ಗಮನ ಸೆಳೆಯಿತು.

    ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ನರಸಿಂಹನ ಅವತಾರದಲ್ಲಿ ಹಿರಣ್ಯ ಕಶ್ಯಪುವಿನ ಅಂತ್ಯ ಕಥೆಯೊಂದಿಗೆ ಕಲಾಕೃತಿ ಅನಾವರಣಗೊಳಿಸಿತು. 3 ಟ್ರಾೃಕ್ಟರ್, 1 ಜೆಸಿಬಿ ಬಳಸಿಕೊಂಡು ಸಾಂಪ್ರದಾಯಿಕ ವಾಲಗದೊಂದಿಗೆ ವಿಶೇಷವಾಗಿ ಗಮನ ಸೆಳೆಯಿತು. ಸ್ನೇಹಿತರ ಬಳಗವು ಗಣಪತಿಯಿಂದ ಕಾಳಾಸುರನ ಗರ್ವಭಂಗ ಕಥೆಗೆ ಜೀವ ತುಂಬಿತು. 2 ಟ್ರಾೃಕ್ಟರ್, 1 ಹಿಟಾಚಿ, ಇನ್ನಿತರ ವಾಹನಗಳನ್ನು ಬಳಸಿ 15ಕ್ಕೂ ಹೆಚ್ಚು ಕಲಾಕೃತಿಗಳೊಂದಿಗೆ ಜನಮೆಚ್ಚುಗೆ ಪಡೆಯಿತು.


    25-30 ಸಾವಿರ ಜನ: ಜಲಪ್ರಳಯ, ಕರೊನಾದಿಂದ 3-4 ವರ್ಷಗಳಿಂದ ವಿಜೃಂಭಣೆಯಿಂದ ದಸರಾ ನಡೆಯದ ಕಾರಣ, ಕಿಕ್ಕಿರಿದ ಜನಸ್ತೋಮ ಕಂಡುಬಂತು. ಸ್ತಬ್ಧಚಿತ್ರ ಮೆರವಣಿಗೆ, ಶೋಭಾಯಾತ್ರೆ ವೀಕ್ಷಿಸಲು 25-30 ಸಾವಿರ ಕಲಾಭಿಮಾನಿಗಳು ಸೇರಿದ್ದರು. ಗುಂಪು ಗುಂಪಾಗಿ ಆಗಮಿಸಿ ಬೆಳಕಿನ ಚಿತ್ತಾರವನ್ನು ಆನಂದಿಸಿದರು.


    ಇದೇ ಮೊದಲ ಬಾರಿಗೆ ಪಟ್ಟಣದ ಮುಖ್ಯರಸ್ತೆ, ಕಾವೇರಿ ಕಲಾವೇದಿಕೆ ರಸ್ತೆಯಲ್ಲಿ ರಂಗು ರಂಗಿನ ಸೀರಿಯಲ್ ಲೈಟ್‌ಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಕಟ್ಟಡ, ಅಂಗಡಿ, ಮಳಿಗೆಗಳಿಗೆ ದೀಪಾಲಂಕಾರ ಸ್ಪರ್ಧೆ ಇದ್ದ ಕಾರಣ, ಪಟ್ಟಣವಿಡೀ ದೀಪಗಳಿಂದ ಶೃಂಗಾರಗೊಂಡಂತಿತ್ತು. ಶೋಭಾಯಾತ್ರೆಯಲ್ಲಿ ಬೆಳಕಿನ ಚಿತ್ತಾರ, ರಾಕ್ಷಸರ ಅರ್ಭಟ, ದೈವಗಳ ಸಂಹಾರ ವಿಜಯದ ನಗು ಮೂಡಿಸಿತು.


    ಪೊಲೀಸ್ ಕಣ್ಗಾವಲು: ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಪೊಲೀಸ್ ಕಣ್ಗಾವಲು ಕೇಂದ್ರ ಸ್ಥಾಪಿಸಿ ಮುಂಜಾಗ್ರತೆ ತೆಗೆದುಕೊಳ್ಳಲಾಗಿತ್ತು. 5 ಕಡೆಗಳಲ್ಲಿ 10 ಅಡಿ ಎತ್ತರದಲ್ಲಿ ಪೊಲೀಸರು ನಿಂತು ಪಹರೆ ನಡೆಸುತ್ತಿದ್ದರು. ಪೊಲೀಸ್ ಸಹಾಯ ಕೇಂದ್ರವನ್ನು 3-4 ಕಡೆಗಳಲ್ಲಿ ತೆರೆಯಲಾಗಿತ್ತು. ಹೆಚ್ಚು ಜನ ಬಂದು ಸೇರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿತ್ತು. ಸಿಬ್ಬಂದಿ ಒಂದು ಕಡೆ ಕುಳಿತು ಕ್ಯಾಮರಾ ಮಾನಿಟರಿಂಗ್ ಮಾಡಿ ಭದ್ರತೆಗೆ ವಿಶೇಷ ಯೋಜನೆ ರೂಪಿಸಲಾಗಿತ್ತು. 400ಕ್ಕೂ ಹೆಚ್ಚು ಪೊಲೀಸರು, ಕೆಎಸ್‌ಆರ್‌ಪಿ, ಹೋಂಗಾರ್ಡ್ಸ್ ಭದ್ರತೆಯಲ್ಲಿ ಪಾಲ್ಗೊಂಡಿದ್ದರು.


    ಗೊಂದಲಮುಕ್ತ:
    ಶೋಭಾಯಾತ್ರೆಯ ಮಂಟಪಗಳಿಗೆ ನೀಡುತ್ತಿದ್ದ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ರದ್ದುಪಡಿಸಿ ಬೆಸ್ಟ್ ತ್ರೀ ಬಹುಮಾನ ನೀಡಲಾಯಿತು. ಇದರಿಂದ ಗೆದ್ದ ತಂಡಗಳು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು, ಅನವಶ್ಯಕ ಗೊಂದಲಕ್ಕೆ ಕಡಿವಾಣ ಬಿತ್ತು.


    ಭಾ ಕಾರ್ಯಕ್ರಮ: ಶೋಭಾಯಾತ್ರೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಹಿಂದುತ್ವದ ಉಳಿವಿಗೆ ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಗಣಪತಿ ಆಚರಣೆಯಂತೆ ರಾಜ ಪರಂಪರೆಯಿಂದ ಬಂದ ದಸರಾ ಆಚರಣೆಯೂ ಒಂದು. ನಂಬಿಕೆ ಆಧಾರದಲ್ಲಿ ಕಟ್ಟಿದ ಸಮಾಜವನ್ನು ದುಷ್ಟರು ಕೆಡುವುತ್ತಿದ್ದಾರೆ. ದಸರಾದಲ್ಲಿ ದೇವಿ ರಾಕ್ಷಸರನ್ನು ಸಂಹಾರ ಮಾಡುವಂತೆ ದುಷ್ಟರನ್ನು ಸಮಾಜದಿಂದ ದೂರ ಇಡಬೇಕಾಗಿದೆ. ಹಿಂದು ಸಮಾಜವನ್ನು ಒಡೆದು ಹಾಕುವ ಹುನ್ನಾರದ ಬಗ್ಗೆ ಪ್ರತಿಯೊಬ್ಬ ಹಿಂದು ಜಾಗೃತರಾಗಬೇಕು ಎಂದು ಕರೆ ನೀಡಿದರು.


    ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ಮಾತನಾಡಿದರು. ಕಾರ್ಯಾಧ್ಯಕ್ಷ ಸಿ.ಕೆ.ಬೋಪಣ್ಣ, ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ, ಮಡಿಕೇರಿ ಶಾಸಕ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ಚೈತ್ರಾ ಬಿ.ಚೇತನ್, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts