More

    ಯುಟ್ಯೂಬ್​ನಲ್ಲಿ ತಾಳಮದ್ದಲೆ ಪ್ರಸಾರ

    ಸಾಗರ: ತಾಲೂಕಿನ ಉತ್ಸಾಹಿ ಬಳಗದ ಕಲಾವಿದರು ತಾಳಮದ್ದಲೆಯಲ್ಲಿ ವಿನೂತನ ಪ್ರಯೋಗಕ್ಕೆ ಲಾಕ್​ಡೌನ್ ಕಾಲದಲ್ಲಿ ಮುಂದಾಗಿದ್ದಾರೆ. ಮೊದಲ ಯತ್ನದ ತಾಳಮದ್ದಲೆ ಯೂಟ್ಯೂಬ್​ನಲ್ಲಿ ಶುಕ್ರವಾರ ಸಂಜೆ ಬಿತ್ತರಗೊಂಡಿತು.

    ತಾಳಮದ್ದಲೆಯಲ್ಲಿ ಒಂದೊಂದು ಪಾತ್ರದ ಪದ್ಯಗಳನ್ನು ಬೇರೆ ಬೇರೆ ಭಾಗವತರು ಪ್ರಸ್ತುತಪಡಿಸಿದ ಪ್ರಯೋಗಗಳು ಈ ಹಿಂದೆ ನಡೆದಿವೆ. ಆದರೆ ಗಾನಾರ್ಥ ಸಂಪ್ರತಿ ಪ್ರಯೋಗದಲ್ಲಿ ತಾಲೂಕಿನ ಮೂವರು ಭಾಗವತರು ಸ್ವತಃ ತಾವು ನಿರ್ವಹಿಸುವ ಪಾತ್ರಗಳ ಪದ್ಯಗಳನ್ನು ತಾವೇ ಹಾಡಿದ್ದಾರೆ. ಪದ್ಯದ ಗಾಯನದ ನಂತರ ಭಾಗವತರೇ ಆಯಾ ಪಾತ್ರದ ಅರ್ಥ ಹೇಳಿದ್ದಾರೆ.

    ಗಾನಾರ್ಥ ಸಂಪ್ರತಿ ಎಂಬ ಸರಣಿ ಕಾರ್ಯಕ್ರಮ ಮಾಡುವ ಉದ್ದೇಶ ಈ ತಂಡಕ್ಕೆ ಇದೆ. ಪ್ರತಿ ತಿಂಗಳು ಆಯ್ದ ಪ್ರಸಂಗದ ತಾಳಮದ್ದಲೆ ಪ್ರಸ್ತುತಿಯನ್ನು ಮುಂದಿನ ದಿನಗಳಲ್ಲಿ ಈ ತಂಡ ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಲಿದೆ.

    ಪಾರ್ಥ ಸಾರಥ್ಯ ತಾಳಮದ್ದಲೆಯಲ್ಲಿ ದುರ್ಯೋಧನ ಪಾತ್ರ ನಿರ್ವಹಣೆ ಹಾಗೂ ಆ ಪಾತ್ರದ ಪದ್ಯಗಳನ್ನು ಹಿರಿಯ ಭಾಗವತ ಯಜ್ಞೇಶ್ವರ ಅಂಬರಗೋಡ್ಲು ನಿರ್ವಹಿಸಿದ್ದಾರೆ. ಪ್ರಶಾಂತ್ ಮಧ್ಯಸ್ಥ ಕೃಷ್ಣ ಪಾತ್ರದ ಪದ್ಯಗಳನ್ನು ಹೇಳಿಕೊಂಡು ಅರ್ಥಗಾರಿಕೆ ನಿರ್ವಹಿಸಿದ್ದಾರೆ. ಭಾರ್ಗವ ಹೆಗ್ಗೋಡು ಅರ್ಜುನ ಪಾತ್ರದ ಪದ್ಯಗಳನ್ನು ಹಾಡುವ ಜತೆ ಅರ್ಥ ಹೇಳಿದ್ದಾರೆ.

    ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ ಮತ್ತು ಚಿನ್ಮಯ ಅಂಬರಗೊಡ್ಲು ಪಾಲ್ಗೊಂಡಿದ್ದರು. ತಾಂತ್ರಿಕ ವಿಭಾಗದ ನಿರ್ವಹಣೆಯನ್ನು ಯುವಕರ ತಂಡ ಮಾಡಿದ್ದು ಪ್ರಶಾಂತ್ ಮಧ್ಯಸ್ಥ ಅವರ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಚ್.ಎಸ್.ದರ್ಶನ್ ಧ್ವನಿ ಮುದ್ರಣದಲ್ಲಿ ಛಾಯಾಗ್ರಹಣದಲ್ಲಿ ಗೋಕುಲ್ ಸಾಗರ, ಈಶಾನ್ಯ ಶರ್ಮ ಹಾಗೂ ಕೌಂಡಿನ್ಯ ಶರ್ಮ ಸಹಕಾರ ನೀಡಿದ್ದಾರೆ. ಗೌರಿ ಕಾಕಡೆ ನಿರೂಪಿಸಿದ್ದಾರೆ. ಯಜ್ಞೇಶ್ವರ ಅಂಬರಗೊಡ್ಲು, ಪ್ರಶಾಂತ್ ಮಧ್ಯಸ್ಥ ಪ್ರಸಂಗ ನಿರ್ದೇಶನ ಮಾಡಿದ್ದು ಭಾರ್ಗವ ಹೆಗ್ಗೋಡು ಅವರ ಪರಿಕಲ್ಪನೆಯಲ್ಲಿ ತಾಳಮದ್ದಲೆ ಮೂಡಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts