More

    ಯುಟಿಪಿ ಪರಿಹಾರ ವಿಳಂಬ ದುರದೃಷ್ಟಕರ

    ರಟ್ಟಿಹಳ್ಳಿ: ಶಿಕಾರಿಪುರ ತಾಲೂಕಿನ ಉಡುಗಣಿ-ತಾಳಗುಂದ- ಹೊಸರು ಮತ್ತು ಹಿರೇಕೆರೂರು ತಾಲೂಕಿನ ಕೆಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೈತರ ಭೂಸ್ವಾಧೀನ ಹೊರತುಪಡಿಸಿ ಸರ್ಕಾರ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಇಲ್ಲಿಯವರೆಗೆ ವಿತರಣೆಯಾಗದೇ ಇರುವುದು ದುರದೃಷ್ಟಕರ ಎಂದು ತಿಪ್ಪಾಯಿಕೊಪ್ಪ ಗ್ರಾಮದ ಶ್ರೀ ಮೂಕಪ್ಪ ಶಿವಯೋಗಿ ಮಠದ ಮಹಾಂತ ದೇವರು ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ಭಗತ್​ಸಿಂಗ್ ವೃತ್ತದಲ್ಲಿ ನೀರಾವರಿ ಯೋಜನೆಗೆ ವಿರೋಧಿಸಿ 4ನೇ ದಿನಕ್ಕೆ ಕಾಲಿಟ್ಟಿರುವ ಹಿರಿಯ ವಕೀಲ ಬಿ.ಡಿ. ಹಿರೇಮಠ ನೇತೃತ್ವದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭಾನುವಾರ ಸಂಜೆ ಹಾನಗಲ್ಲ ತಾಲೂಕಿನ ಕೂಡಲ ಗ್ರಾಮದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರೊಂದಿಗೆ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿ ಅವರು ಮಾತನಾಡಿದರು.

    ರೈತರ ಕೂಗು ಸರ್ಕಾರಕ್ಕೆ ಕೇಳದೆ ಇರುವುದು ವಿಪರ್ಯಾಸ. ಸರ್ಕಾರ ಈ ಯೋಜನೆಗಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದನ್ನು ಬಿಟ್ಟು ಬರಡು ಭೂಮಿ ಅಥವಾ ರಸ್ತೆಯ ಬದಿಯಲ್ಲಿ ಯೋಜನೆ ರೂಪಿಸಿಕೊಳ್ಳಬೇಕು. ಈಗಾಗಲೇ ಕೆಲವು ರೈತರು ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡು ಪರಿಹಾರವು ಸಿಗದೇ ಸಂಕಷ್ಟದಲ್ಲಿ ಇದ್ದಾರೆ. ಇದರಿಂದ ರೈತರು ಆತ್ಮಹತ್ಯೆಯ ಪರಿಸ್ಥಿತಿಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸರ್ಕಾರ ಕೂಡಲೇ ಈ ಯೋಜನೆಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

    ಹಿರಿಯ ವಕೀಲ ಬಿ.ಡಿ. ಹಿರೇಮಠ ಮಾತನಾಡಿ, ಸರ್ಕಾರ ರೈತರಿಗೆ ವಿಷ ನೀಡಲು ಹೊರಟಿದೆ. ಈ ಹೋರಾಟ ನಮ್ಮ ಮರಣದ ಹಂತಕ್ಕೆ ತಲುಪುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಜೀವ ಹೋದರೂ ಈ ಯೋಜನೆ ಕಾರ್ಯಗತ ಆಗಲು ಬಿಡುವುದಿಲ್ಲ. ತುಂಗಾ ಮೇಲ್ದಂಡೆ ಯೋಜನೆಯ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಮಾಧ್ಯಮಗಳ ಮೂಲಕ ತಿಳಿಸಿದ ಕೂಡಲೇ ನಮ್ಮ ಪ್ರತಿಭಟನೆ ನಿಲ್ಲುತ್ತದೆ ಎಂದರು. ಹೋರಾಟ ಸಮಿತಿ ಅಧ್ಯಕ್ಷ ರಂಗಪ್ಪ ಬಡಪ್ಪಳವರ, ಎಸ್.ಡಿ. ಹಿರೇಮಠ, ರಾಜಶೇಖರ ಪಾಟೀಲ, ಭೀಮಪ್ಪ ವೆಂಕಣ್ಣನವರ, ಉಜಿನೆಪ್ಪ ಕೋಡಿಹಳ್ಳಿ, ಮಾಲತೇಶಯ್ಯ ಪಾಟೀಲ, ಹರೀಶ ಇಂಗಳಗೊಂದಿ, ವಿನಯ ಪಾಟೀಲ ಇದ್ದರು.

    ಅಧಿಕಾರಿಗೆ ಎಚ್ಚರಿಕೆ

    ಉನ್ನತ ಅಧಿಕಾರಿಯೊಬ್ಬರು ಬಿ.ಡಿ. ಹಿರೇಮಠ ಹಣದ ಆಮಿಷಕ್ಕಾಗಿ ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಹೇಳಿದ್ದಾರೆ. ಅವರ ಹೋರಾಟ ಏನು ಎಂಬುದು ರೈತರಿಗೆ ತಿಳಿದಿದೆ. ಆ ಅಧಿಕಾರಿ ತಿಂಗಳಿಗೆ ತನಗೆ ಎಷ್ಟು ವೇತನ ಬರುತ್ತದೆ ಮತ್ತು ಅವರ ಆಸ್ತಿ ಈಗ ಎಷ್ಟಾಗಿದೆ ಎಂದು ತಿಳಿಸಲಿ. ಯಾರು ಪ್ರಾಮಾಣಿಕರು ಎಂಬುದು ತಿಳಿಯುತ್ತದೆ. ಅಧಿಕಾರಿ ಕ್ಷಮೆಯಾಚಿಸಬೇಕು ಅಥವಾ ಅವರ ಹೇಳಿಕೆಗೆ ಸ್ಪಷ್ಟ ದಾಖಲಾತಿ ನೀಡಬೇಕು ಎಂದು ರೈತರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts