More

    ಯಾಣಕ್ಕೆ ಜೀವ ವೈವಿಧ್ಯ ಸಂರಕ್ಷಿತ ಪ್ರದೇಶ ಮಾನ್ಯತೆ ನೀಡುವ ಯತ್ನ

    ಕಾರವಾರ: ಕುಮಟಾ ತಾಲೂಕಿನ ಯಾಣಕ್ಕೆ ಜೀವ ವೈವಿಧ್ಯ ಸಂರಕ್ಷಿತ ಪ್ರದೇಶ ಎಂಬ ಮಾನ್ಯತೆ ನೀಡುವ ಬಗ್ಗೆ ಪ್ರಯತ್ನ ನಡೆಸಲಾಗಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಶುಕ್ರವಾರ ಅವರು ಮಾತನಾಡಿದರು. ಯಾಣ ನಮ್ಮ ಜಿಲ್ಲೆಯ ಒಂದು ಅದ್ಭುತ ತಾಣ. ಅದರ ಸುತ್ತಲಿನ ಪರಿಸರ ರಕ್ಷಣೆಗೆ ಸೂಕ್ತ ಕ್ರಮವಾಗಬೇಕಿದೆ ಆ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ರ್ಚಚಿಸಿ ಪ್ರಾಥಮಿಕ ಹೆಜ್ಜೆ ಇಟ್ಟಿದ್ದೇವೆ ಎಂದರು.

    ಗೋಕರ್ಣ ಸಾಣಿಕಟ್ಟಾದ ಉಪ್ಪು ಉತ್ಪಾದನಾ ಘಟಕಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಪರಿಸರದ ಮಹತ್ವವೂ ಇದೆ. ಶತಮಾನಗಳಿಂದ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಈ ಉಪ್ಪಿನ ಉತ್ಪಾದನೆಗೆ ವಿಶೇಷ ಮಾನ್ಯತೆ ನೀಡುವ ಬಗ್ಗೆ ಕ್ರಮವಾಗಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

    ಕಾರವಾರ ಅಂಕೋಲಾ ನಡುವಿನ ಗುಡ್ಡವನ್ನು ಹಸಿರುವ ವಲಯ ಎಂದು ಘೊಷಿಸಿ, ಇದ್ದ ಪರಿಸರವನ್ನು ಕಾಪಾಡುವ ಕುರಿತು ಕ್ರಮವಾಗಬೇಕಿದೆ. ಮಲೆನಾಡಿನ ರೈತರ ತೋಟಗಳಿಗೆ ಮಂಗನ ಹಾವಳಿಯಿಂದ ಉಂಟಾಗುವ ನಷ್ಟ ಭರಿಸಲು ಸರ್ಕಾರದ ಹಂತದಲ್ಲಿ ಕ್ರಮವಾಗಬೇಕಿದೆ. ಗದ್ದೆ ಹಾಗೂ ತೋಟಗಳಿಗೆ ನಿಷೇಧಿತ ಕ್ರಿಮಿನಾಶಕ ಹಾಗೂ ರಸಗೊಬ್ಬರ ಬಳಕೆ ತಡೆಯಲು ಕೃಷಿ ಇಲಾಖೆ ಮುಂದಾಗಬೇಕಿದೆ. ಗ್ರಾಪಂ ಹಂತದಲ್ಲಿ ಜೀವ ವೈವಿಧ್ಯತಾ ಸಮಿತಿ ಇನ್ನಷ್ಟು ಬಲಗೊಳಿಸಬೇಕು. ಶಹರ ಪ್ರದೇಶಗಳಲ್ಲಿ ಜೀವ ವೈವಿಧ್ಯ ದಾಖಲೀಕರಣವನ್ನು ಶೀಘ್ರ ಮುಗಿಸುವ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಕುಮಟಾದ ಕಗ್ಗ ಭತ್ತಕ್ಕೆ ಜಿಯೋ ಟ್ಯಾಗಿಂಗ್ ನೀಡುವ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಶೀಘ್ರದಲ್ಲಿ ಅದು ದೊರೆಯುವ ವಿಶ್ವಾಸವಿದೆ ಎಂದರು.

    ಮಂಡಳಿಯ ಸದಸ್ಯ ಪ್ರಕಾಶ ಮೇಸ್ತ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಸಾಮಾಜಿಕ ಅರಣ್ಯ ವಿಭಾಗದ ಡಿಎಫ್​ಒ ಉದಯ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts