More

    ಯಶವಂತಪುರ- ವಾಸ್ಕೋ ಹೊಸ ರೈಲು ಸಂಚಾರ

    ಕಾರವಾರ: ಸಂಜೆ ರೈಲು ಹತ್ತಿ ಬೆಳಗಿನ ಹೊತ್ತಿಗೆ ಬೆಂಗಳೂರು ತಲುಪುವ ಕಾರವಾರಿಗರ ದಶಕಗಳ ಕನಸು ಸಾಕಾರಗೊಳ್ಳುತ್ತಿದೆ. ಯಶವಂತಪುರ-ಹಾಸನ-ಪಡೀಲ್- ಕಾರವಾರ-ವಾಸ್ಕೋ-ಡಿ-ಗಾಮಾ ನಡುವೆ ರಾತ್ರಿ ರೈಲು (16595/16596) ಓಡಾಟ ಮಾ.7 ರಿಂದ ಪ್ರಾರಂಭವಾಗಲಿದೆ. ಹಾಲಿ ಇರುವ ಬೆಂಗಳೂರು-ಮಂಗಳೂರು -ಕಾರವಾರ ರೈಲು ರದ್ದಾಗಲಿದೆ.

    ಮಾ. 7ರಂದು ಬೆಳಗ್ಗೆ 9 ಗಂಟೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲಿಗೆ ಚಾಲನೆ ನೀಡುವರು. ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಇತರರು ಇರುವರು. ರೈಲು ರಾತ್ರಿ ಕಾರವಾರದೆಡೆಗೆ ಸಂಚರಿಸಿ ಮಾ.8 ರಂದು ಗೋವಾದ ವಾಸ್ಕೋ ತಲುಪಲಿದೆ.

    ವೇಳಾ ಪಟ್ಟಿ: ಸದ್ಯದ ವೇಳಾಪಟ್ಟಿಯ ಪ್ರಕಾರ ಹೊಸ ರೈಲು (16595)ಪ್ರತಿ ದಿನ ಸಾಯಂಕಾಲ 6.45ಕ್ಕೆ ಯಶವಂತಪುರ ಜಂಕ್ಷನ್ ಬಿಡಲಿದ್ದು 9.55ಕ್ಕೆ ಹಾಸನ ತಲುಪಲಿದೆ. ಮರುದಿನ ಬೆಳಗಿನಜಾವ 3.30ಕ್ಕೆ ಪಡೀಲ್, 8.25ಕ್ಕೆ ಕಾರವಾರ ತಲುಪಲಿದೆ. 8.30ಕ್ಕೆ ಕಾರವಾರದಿಂದ ಹೊರಟು 10.30ಕ್ಕೆ ವಾಸ್ಕೋ ತಲುಪಲಿದೆ. ಇನ್ನೊಂದು ರೈಲು(16596) ಪ್ರತಿ ದಿನ ಸಾಯಂಕಾಲ 3.20ಕ್ಕೆ ವಾಸ್ಕೋ ಬಿಡಲಿದ್ದು, 5.45ಕ್ಕೆ ಕಾರವಾರಕ್ಕೆ ಬರಲಿದೆ. 6 ಗಂಟೆಗೆ ಕಾರವಾರ ಬಿಟ್ಟು 11.05 ಕ್ಕೆ ಪಡೀಲ್, ಮರುದಿನ ಬೆಳಗಿನಜಾವ 4.40 ಕ್ಕೆ ಹಾಸನ, ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ. ರೈಲು ಒಟ್ಟು 14 ಬೋಗಿಗಳನ್ನು ಹೊಂದಿದೆ. ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಾಣಿಯೂರು, ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕರು, ಕುಂದಾಪುರ, ಮೂಕಾಂಬಿಕಾ ರೋಡ್, ಭಟ್ಕಳ, ಮುರ್ಡೆಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾಗಳಲ್ಲಿ ನಿಲುಗಡೆ ಇದೆ. ಹಳೇ ರೈಲು ರದ್ದು: ಕಾರವಾರ-ಮಂಗಳೂರು ಬೆಂಗಳೂರು ನಡುವೆ ಸಂಚರಿಸುತ್ತಿದ್ದ 16513/16514, 16523/16524 ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ ಎಂದು ರೈಲ್ವೆ ಬೋರ್ಡ್​ನ ನಿರ್ದೇಶಕ ವಿವೇಕ ಕುಮಾರ ಸಿಂಗ್ ತಿಳಿಸಿದ್ದಾರೆ. ಅಲ್ಲದೆ, ಪ್ರತಿ ದಿನ ಬೆಳಗ್ಗೆ ಓಡಾಡುತ್ತಿದ್ದ ಪೆರ್ನೆಂ-ಕಾರವಾರ(70103/70104)ಡೆಮು ರೈಲುಗಳನ್ನು ಕಾರವಾರ-ಮಡಗಾಂವ ನಡುವೆ ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts