More

    ಮೌಲ್ಯಯುತ ಬರಹಗಳು ಹೊರಹೊಮ್ಮಲಿ

    ಚಳ್ಳಕೆರೆ: ನೆಲದ ಸಂಸ್ಕೃತಿಯ ಪರಂಪರೆ ಮೇಳೈಸಿಕೊಂಡಾಗ ಮಾತ್ರ ಮೌಲ್ಯಯುತ ಬರಹ ಸಮಾಜಕ್ಕೆ ದಾಖಲು ಮಾಡಲು ಸಾಧ್ಯ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ರವೀಂದ್ರನಾಥ್ ಹೇಳಿದರು.

    ತಾಲೂಕು ಕಸಾಪ, ವರ್ಷಿತ ಪ್ರಕಾಶನ ಸಹಯೋಗದಲ್ಲಿ ಪಟ್ಟಣದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಎ.ಎಂ.ಜಗದೀಶ್ವರಿ ಅವರ ಮಾತನಾಡುವ ಮನಸುಗಳು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

    ಕಥಾ ಪ್ರಕಾರದಲ್ಲಿ ಹಾವ-ಭಾವ ವಿಶ್ಲೇಷಣೆ ಓದುಗರ ಮನಸ್ಸನ್ನು ತನ್ನೆಡೆಗೆ ಸೆಳೆಯುತ್ತದೆ. ಆದರೆ, ಕಾವ್ಯ ರಚನೆಯಲ್ಲಿ ರಸಾನುಭವವೇ ಸಾಹಿತ್ಯದ ಸಿರಿವಂತಿಕೆಯಾಗಿ ಮನಸ್ಸನ್ನು ಸೆಳೆಯುತ್ತದೆ. ಕಾವ್ಯ ಸಾಹಿತ್ಯವನ್ನು ಓದಿಕೊಳ್ಳುವುದರಿಂದ ಮನಸ್ಸಿನ ಶುದ್ಧತೆ ಮತ್ತು ಸಮಾಜ ಬದುಕಿನ ಆಂತರ್ಯವನ್ನು ಅರ್ಥೈಸುತ್ತದೆ ಎಂದರು.

    12ನೇ ಶತಮಾನದ ಶಿವಶರಣರು ಕಾಯಕ ಮತ್ತು ಕೈಲಾಸವನ್ನು ತಮ್ಮ ದಾಸೋಹ ಧರ್ಮದಲ್ಲಿ ಸಮಾಜಕ್ಕೆ ತಿಳಿಸಿದ್ದಾರೆ. ಪ್ರಗತಿಪರ ಚಿಂತಕರಿಂದ ವರ್ಗಭೇದ, ಬಡವ-ಶ್ರೀಮಂತ ಎನ್ನದೆ ಸಮಾನತೆ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ. ಧರ್ಮ ಪೂಜಿಸುವ ಗುಡಿ ಗುಂಡಾರದಲ್ಲಿಲ್ಲ. ಮಾಡುವ ಕಾಯಕದಲ್ಲಿ ಧರ್ಮವನ್ನು ತಿಳಿಯಬೇಕು ಎನ್ನುವ ಸತ್ಯದ ಮಾರ್ಗವನ್ನು ಶರಣರು ಸಮಾಜಕ್ಕೆ ತಿಳಿಸಿದ್ದಾರೆ. ಸಾಹಿತ್ಯ ರಚನಕಾರರಲ್ಲಿ ಸಮಾಜವನ್ನು ಎಚ್ಚರಗೊಳಿಸುವ ಮತ್ತು ನೆಲಮೂಲದ ಸಂಸ್ಕೃತಿಯನ್ನು ಪೋಷಿಸುವ ಜವಾಬ್ದಾರಿ ಇರಬೇಕು ಎಂದು ಹೇಳಿದರು.

    ಕವನ ಸಂಕಲನ ಕುರಿತು ಮಾತನಾಡಿದ ಪ್ರೊ.ಡಿ.ಅಂಜಿನಪ್ಪ, ಕಾವ್ಯಕ್ಕೆ ಮನುಷ್ಯನ ಬದುಕಿನ ನಿಜ ಸ್ಥಿತಿ ಕುರಿತು ಸಮಾಜದೊಂದಿಗೆ ಮಾತನಾಡುವ ಶಕ್ತಿ ಇದೆ. ಜಂಜಾಟದ ಬದುಕಿನ ಸಂಕೋಲೆ ಬಿಡಿಸಿಕೊಳ್ಳಲು ಕ್ರಿಯಾಶೀಲತೆ ರೂಪಿಸಿಕೊಳ್ಳಬೇಕು ಎಂದರು.

    ಬದುಕಿನ ಏಳು-ಬೀಳುಗಳಲ್ಲಿ ಸಮಾಜ ಕೊಟ್ಟ ಅನುಭವದಲ್ಲಿ ಮಾನವೀಯ ಸಂಬಂಧದ ದೃಷ್ಟಿಕೋನ ಇರಿಸಿಕೊಂಡು ಸ್ತ್ರೀ ಸಂವೇದನೆಯ ಭಾವದಲ್ಲಿ ರಚಿತವಾಗಿರುವ ಪ್ರತಿಯೊಂದು ಕವಿತೆಗಳು ಓದುಗರ ಮನ ಮಿಡಿಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರಾಚಾರ್ಯ ಆರ್.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕಾಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಪ್ರಾಧ್ಯಾಪಕ ಡಾ.ಗೋವಿಂದ, ಬಿ.ಯು.ನರಸಿಂಹಮೂರ್ತಿ, ಡಾ.ಕೆ.ಚಿತ್ತಯ್ಯ, ಡಾ.ಜಿ.ವಿ.ರಾಜಣ್ಣ, ಪ್ರೊ.ಡಿ.ಎನ್.ರಘುನಾಥ್, ಪ್ರೊ.ರಮೇಶ್‌ಭಟ್, ಎನ್.ಜಗನ್ನಾಥ್ ಮತ್ತಿತರರು ಇದ್ದರು.

    ಕನ್ನಡ ಭಾಷೆಗೆ ಬಹುವರ್ಷಗಳ ಇತಿಹಾಸವಿದೆ. ಇದೊಂದು ಸೂಕ್ಷ್ಮ ಮತ್ತು ಸಂಕೀರ್ಣ ನೆಲೆಯಾಗಿ ಬೆಳೆಯುತ್ತಿದೆ. ನಿತ್ಯ ಬದುಕಿನಲ್ಲಿ ಕನ್ನಡ ಭಾಷೆಯನ್ನು ಪ್ರೀತಿಸುವ ಮತ್ತು ಬಳಸುವ ಮನೋಭಾವದಲ್ಲಿ ಸಾಹಿತ್ಯ ಮೌಲ್ಯವನ್ನು ಕಾಪಾಡಿಕೊಳ್ಳಬೇಕಿದೆ.
    ಕೆ.ಎಂ.ಶಿವಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts