More

    ಮೋರಟಗಿಯಲ್ಲಿ ವೃತ್ತ ನಿರ್ಮಾಣಕ್ಕಾಗಿ ಪೈಪೋಟಿ

    ಮೋರಟಗಿ: ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗ್ರಾಮದ ಒಳಗಡೆ ಪ್ರವೇಶ ಮಾಡುವ ಮುಖ್ಯರಸ್ತೆ ಮಧ್ಯದಲ್ಲಿ ಶನಿವಾರ ತಡರಾತ್ರಿ ದಲಿತ ಯುವಕರು ಡಾ.ಅಂಬೇಡ್ಕರ್ ಅವರ ವೃತ್ತ ನಿರ್ಮಿಸುವ ಸಲುವಾಗಿ ಬ್ಯಾರಲ್ ಒಳಗಡೆ ಮಣ್ಣು ಹಾಕಿ ನೀಲಿ ಧ್ವಜ ಕಟ್ಟಿ ನಿಲ್ಲಿಸಿದ್ದು ಭಾನುವಾರ ಬೆಳಗಿನ ಜಾವ ಕಂಡು ಬಂದಿತು.

    ಇದನ್ನು ಗಮನಿಸಿದ ಮುಸ್ಲಿಂ ಸಮುದಾಯದ ಯುವಕರು ಕೂಡ ಅದರ ಪಕ್ಕದಲ್ಲೇ ಟಿಪ್ಪು ಸುಲ್ತಾನ ವೃತ್ತ ನಿರ್ಮಿಸಲು ಬ್ಯಾರಲ್ ಒಳಗಡೆ ಮಣ್ಣು ತುಂಬಿ ಟಿಪ್ಪು ಭಾವಚಿತ್ರದ ಬಾವುಟ ಕಟ್ಟಿದ್ದರು.

    ಸುದ್ದಿ ಹರಡುತಿದ್ದಂತೆ ಸಿಪಿಐ ಡಿ.ಹುಲಗೆಲ್ಲ, ಆಲಮೇಲ ಪಿಎಸ್‌ಐ ಹಾಗೂ 20ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಆಗಮಿಸಿ ಸಂಧಾನಕ್ಕೆ ಮುಂದಾದರು.

    ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ ಹತ್ತಿರ ಇರುವುದರಿಂದ ಇದೇ ಸ್ಥಳದಲ್ಲಿ ಅಂದಾಜು ಹತ್ತು ವರ್ಷಗಳ ಹಿಂದೆ ಮುಸ್ಲಿಂ ಯುವಕರು ಟಿಪ್ಪು ಸರ್ಕಲ್ ನಿರ್ಮಾಣಕ್ಕೆ ಮುಂದಾದಾಗ ಹಿರಿಯರಾದ ಮೈಬೂಬಸಾಬ ಕಣ್ಣಿ ಎಂಬುವವರು, ಈ ರಸ್ತೆ ಗ್ರಾಮಸ್ಥರಿಗೆ ಪ್ರಮುಖ ರಸ್ತೆಯಾಗಿದೆ. ಅನವಶ್ಯಕವಾಗಿ ಬೇರೆಯವರಿಗೆ ತೊಂದರೆ ಕೊಡುವುದು ಬೇಡ ಎಂದು ಯುವಕರಿಗೆ ಸಲಹೆ ನೀಡಿ ವೃತ್ತ ನಿರ್ಮಾಣ ನಿಲ್ಲಿಸಿದ್ದರು ಎನ್ನಲಾಗಿದೆ.

    ಇದನ್ನೆಲ್ಲ ಪರಿಶೀಲಿಸಿ ಮಾಹಿತಿ ಪಡೆದ ಸಿಪಿಐ ಡಿ.ಹುಲಗೆಪ್ಪ ಹಾಗೂ ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ ಅವರು ದಲಿತ ಹಾಗೂ ಮುಸ್ಲಿಂ ಹಿರಿಯರನ್ನು ಕರೆಸಿ ಕಾನೂನು ಬಾಹಿರವಾಗಿ ವೃತ್ತ ನಿರ್ಮಾಣ ಮಾಡಿ ದೇಶದ ಮಹಾನ್ ವ್ಯಕ್ತಿಗಳ ಹೆಸರಿಗೆ ಧಕ್ಕೆ ತರುವಂತ ಕೆಲಸ ಆಗಬಾರದು ಎಂದು ತಿಳಿ ಹೇಳಿ ಸಂಧಾನ ಮಾಡಿದರು. ಸಂಧಾನಕ್ಕೆ ಒಪ್ಪಿದ ಎರಡು ಸಮುದಾಯದ ಯುವಕರು ವೃತ್ತ ನಿರ್ಮಿಸಲು ಇಟ್ಟಿದ್ದ ಸಾಮಗ್ರಿಯನ್ನು ಸ್ವಯಂ ಪ್ರೇರಿತವಾಗಿ ತೆರವು ಮಾಡಿದರು.

    ಪಿಎಸ್‌ಐ ಕುಮಾರ ಹಾಡಕರ, ಕ್ರೈಂ ಪಿಎಸ್‌ಐ ಎನ್.ಜಿ.ಅಪನಾಯಕರ, ಎಎಸ್‌ಐ ಎಸ್.ಬಿ.ಉಕ್ಕಲಿ, ನಿಂಗಪ್ಪ ಪೂಜಾರಿ, ಭೀಮು ನಾಯಕ, ಮೈಬೂಬಸಾಬ ಕಣ್ಣಿ, ಮುತ್ತಪ್ಪ ಸಿಂಗೆ, ರವಿಕಾಂತ ನಡುವಿನಕೇರಿ, ನಬಿಸಾಬ ಬಾಸಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts