More

    ಮೋದಿ ಸ್ವಾಗತಕ್ಕೆ ದಾವಣಗೆರೆಗೆ ಕೇಸರಿ ಶೃಂಗಾರ-ಎಲ್ಲೆಡೆ ರಾರಾಜಿಸುತ್ತಿರುವ ಫ್ಲೆಕ್ಸ್-ಬಾವುಟಗಳು

    ದಾವಣಗೆರೆ: ಯುಗಾದಿ ಹಬ್ಬದ ದಿನವೇ ಇಡೀ ದಾವಣಗೆರೆ ನಗರ ಕೇಸರಿ ರಂಗಿಗೆ ಜಾರಿದೆ. ಯಾವ ರಸ್ತೆ, ವೃತ್ತದಲ್ಲಿ ಕಣ್ಣು ಹಾಯಿಸಿದಷ್ಟೂ ಬಿಜೆಪಿ ಬಾವುಟ-ಫ್ಲೆಕ್ಸ್‌ಗಳದ್ದೇ ಚಿತ್ತಾರ. ರಸ್ತೆ ವಿಭಜಕದಲ್ಲಿನ ಅಲಂಕಾರಿಕ ವಿದ್ದುದ್ದೀಪಗಳ ಬಾಗಿದ ಇಕ್ಕೆಲದ ಕಮಾನುಗಳಿಗೂ ಕೇಸರಿ ಬಟ್ಟೆಗಳದ್ದೇ ಶೃಂಗಾರ!
    ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ನಗರ ಸಿಂಗಾರಗೊಂಡ ಪರಿ ಇದು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮಕ್ಕಾಗಿ ಬರುವ ಜನರು, ಅಭಿಮಾನಿಗಳ ಆಕರ್ಷಣೆಗೆ ಕಳೆದೆರಡು ದಿನದಿಂದ ಎಲ್ಲೆಡೆ ಭರ್ಜರಿ ಸಿದ್ಧತೆ ನಡೆದಿವೆ. ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತ, ಹದಡಿ ರಸ್ತೆ, ಪಿ.ಬಿ.ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ವರ್ತುಲ ರಸ್ತೆ ಎಲ್ಲ ರಸ್ತೆಗಳೂ ಕೇಸರಿಮಯ.
    ಗುರುವಾರ ಚಂದಿರನನ್ನು ನೋಡಲು ಜನರಿಗೆ ಪ್ರಮುಖ ರಸ್ತೆಗಳಲ್ಲಿ ಸಿಲ್ಕ್ ಬಟ್ಟೆಯ ಕಮಲದ ಬಾವುಟಗಳೇ ಕಣ್ಣಿಗೆ ರಾಚಿದವು. ಅಲ್ಲಲ್ಲಿ ವೃತ್ತಾಕಾರದ ಬ್ಯಾನರ್‌ಗಳು ರಾರಾಜಿಸುತ್ತಿವೆ. ಪ್ರಧಾನಿ ಮೋದಿ ಕೈಮುಗಿದ ಭಂಗಿಯಲ್ಲಿದ್ದ ಚಿತ್ರಗಳನ್ನು ಬೆನ್ನಿಗೆ ತಗುಲಿಸಿಕೊಂಡಿದ್ದ 10 ಆಟೋರಿಕ್ಷಾಗಳು ಬಿಜೆಪಿ ಪರ ರ‌್ಯಾಪ್ ಗೀತೆಗಳನ್ನು ರಸ್ತೆಗಳುದ್ದಕ್ಕೂ ಪ್ರಸಾರ ಮಾಡಿದವು.
    ಪ್ರಮುಖ ವೃತ್ತಗಳಲ್ಲಿ ಪ್ರಧಾನಿಗೆ ಸ್ವಾಗತ ಕೋರಿದ 35 ಬೃಹತ್ ಹೋರ್ಡಿಂಗ್‌ಗಳು ತಲೆ ಎತ್ತಿವೆ. ರಸ್ತೆ ವಿಭಜಕ, ಮರಗಳು, ವಿದ್ಯುತ್‌ಕಂಬ, ಸಿಗ್ನಲ್ ಕಂಬಗಳನ್ನೂ ಬಿಡದೆ 15 ಸಾವಿರಕ್ಕೂ ಹೆಚ್ಚಿನ ಬಿಜೆಪಿ ಬಾವುಟಗಳು ಹಾರಾಡುತ್ತಿವೆ.
    ಎಲ್ಲೆಂದರಲ್ಲಿ ಪ್ರಧಾನಿ ಆಗಮನಕ್ಕೆ ಶುಭ ಕೋರುವ ಮುಖಂಡರು, ಅಭಿಮಾನಿಗಳ ಸುಮಾರು 1500ಕ್ಕೂ ಹೆಚ್ಚಿನ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸುಮಾರು 100 ಕಿ.ಮೀ ವ್ಯಾಪ್ತಿ ಕ್ರಮಿಸುವ ಬಂಟಿಂಗ್ಸ್‌ಗಳಿಂದ ಹೊರ ನಗರಗಳನ್ನು ಸಿಂಗರಿಸಿರುವ ಪ್ರಯತ್ನ ನಡೆಯುತ್ತಿದೆ. ಕೂಲಿಕಾರರು ಹಗಲು ರಾತ್ರಿ ಎನ್ನದೆ ಎಲ್ಲ ಪ್ರಚಾರ ಸಾಮಗ್ರಿ ಕಟ್ಟುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಪ್ರಚಾರ ಸಾಮಗ್ರಿಗೆ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ!
    * 25 ಮಳಿಗೆಗಳಲ್ಲಿ ನೀರು-ಮಜ್ಜಿಗೆ
    ಕಾರ್ಯಕ್ರಮ ನಡೆಯಲಿರುವ ಜಿಎಂಐಟಿ ವೇದಿಕೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಾಗುವ ಮಾರ್ಗದಲ್ಲಿ 25 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಪ್ರತಿ ಮಳಿಗೆಯಲ್ಲೂ 50 ಸಾವಿರ ನೀರಿನ ಬಾಟಲು, ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಬಿಸ್ಕತ್ತು, ಚಾಕಲೇಟ್, 5 ಟನ್ ಬಾಳೆಹಣ್ಣು, ನೀಡಲು ಅಭಿಮಾನಿಗಳೂ ಕೈ ಜೋಡಿಸಿದ್ದಾರೆ.
    ಕಾರ್ಯಕ್ರಮದ ವೇದಿಕೆಯಲ್ಲೂ 200 ಮಿ.ಲೀ.ನ ಆರು ಲಕ್ಷ ನೀರಿನ ಪೌಚ್, 2 ಲಕ್ಷ ಜ್ಯೂಸ್ ಬಾಟಲು, 10 ಲಕ್ಷ ಮಜ್ಜಿಗೆ ಪೌಚ್‌ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕುಡಿವ ನೀರಿಗಾಗಿ ತಲಾ 2 ಸಾವಿರ ಲೀ. ಸಂಗ್ರಹ ಸಾಮರ್ಥ್ಯದ 10 ಸಿಂಟೆಕ್ಸ್‌ಗಳನ್ನು ಇರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ವಿವರಿಸಿದರು.
    * ಬೀಸಣಿಕೆ- ಟೊಪ್ಪಿಗೆ ಆಕರ್ಷಣೆ
    ಈ ಬಾರಿ ಬಿಸಿಲಿನ ಧಗೆ ಇರುವ ಕಾರಣಕ್ಕೆ ಅಭಿಮಾನಿಗಳು, ಕಾರ್ಯಕರ್ತರಿಗಾಗಿ ಐದು ಲಕ್ಷ ಬೀಸಣಿಕೆ ಹಾಗೂ ಟೊಪ್ಪಿಗೆ, ಕೇಸರಿ ಶಾಲು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ದೆಹಲಿಯ ವಿಶೇಷ 500 ಪೇಟಾಗಳು ನಗರಕ್ಕೆ ಕಾಲಿಟ್ಟಿವೆ. 1 ಲಕ್ಷ ಟಿ ಶರ್ಟ್‌ಗಳು ಸಿದ್ಧವಾಗಿವೆ. ಪ್ರಧಾನಿ ಮೋದಿ ಅವರ ಹೋಲಿಕೆಯ 2 ಲಕ್ಷ ಮುಖವಾಡಗಳನ್ನು ಕೊಡುವ ಪ್ರಯತ್ನ ನಡೆದಿದೆ.
    * 2 ಸಾವಿರ ಪ್ರಬಂಧಕರು
    ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ವಿವಿಧ ರಾಜ್ಯಗಳ 2 ಸಾವಿರ ಪ್ರಬಂಧಕರನ್ನು ನಿಯೋಜಿಸಲಾಗಿದೆ. ಅವರಿಗೆ ತಂಗಲು ನಗರದ ನಾಲ್ಕು ಕಲ್ಯಾಣಮಂಟಪವಲ್ಲದೆ ಇತರೆ 150 ರೂಂ. ನಿಗದಿಪಡಿಸಲಾಗಿದೆ.
    * 1800 ಬಾಣಸಿಗರು
    ಲಕ್ಷಾಂತರ ಜನರಿಗೆ ಊಟ-ತಿಂಡಿ ಸಿದ್ಧಪಡಿಸಲು ಬೆಂಗಳೂರಿನಿಂದ 1800 ಬಾಣಸಿಗರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಊಟ ಬಡಿಸಲು 2ಸಾವಿರ ಕಾರ್ಯಕರ್ತರ ಪಡೆ ಸಜ್ಜಾಗಿದೆ. ಬೆಳಗ್ಗೆ ಉಪ್ಪಿಟ್ಟು-ಕೇಸರಿಬಾತ್ ಇರಲಿದೆ. ಪಾಯಸ ಮತ್ತು ಪಲಾವ್ ಮಧ್ಯಾಹ್ನ ಊಟದ ಮೆನು ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts