More

    ಮೊದಲ ಬಾರಿ ಮಲೆನಾಡು ಸಂಪೂರ್ಣ ಸ್ತಬ್ಧ

    ಶಿವಮೊಗ್ಗ: ಮಹಾಮಾರಿ ಕರೊನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ‘ಜನತಾ ಕರ್ಫ್ಯೂ’ಗೆ ಶಿವಮೊಗ್ಗದಲ್ಲಿ ಭಾನುವಾರ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಶನಿವಾರ ಸಂಜೆಯಿಂದಲೇ ಮಲೆನಾಡಿನ ಹೆಬ್ಬಾಗಿಲು ಸ್ತಬ್ಧಗೊಂಡಿತ್ತು. ವಿಶೇಷವಾಗಿ ಇದೇ ಪ್ರಥಮ ಬಾರಿಗೆ ಜನರೇ ಸ್ವಯಂಪ್ರೇರಿತವಾಗಿ ಕರ್ಫ್ಯೂ ಬೆಂಬಲಿಸಿ ಅಂಗಡಿ ಮುಂಗಟ್ಟು ಮುಚ್ಚಿದ್ದರು.

    ಹಾಲು, ಆಂಬುಲೆನ್ಸ್, ಮೆಡಿಕಲ್ ಸೇವೆ ಸೇರಿ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ರೋಗಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಉಳಿದಂತೆ ಕೆಎಸ್​ಆರ್​ಟಿಸಿ, ಖಾಸಗಿ ಹಾಗೂ ನಗರ ಸಾರಿಗೆ ಬಸ್, ಆಟೋ ಮತ್ತು ಟ್ಯಾಕ್ಸಿ ಸಂಚಾರ ಕೂಡ ಸಂಪೂರ್ಣ ಸ್ಥಗಿತವಾಗಿತ್ತು.

    ಇದೇ ವೇಳೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಭಾನುವಾರ ಬೆಳಗಿನ ಜಾವವೇ ಬಂದಿದ್ದ ಹತ್ತಾರು ಪ್ರಯಾಣಿಕರು ವಾಹನ ವ್ಯವಸ್ಥೆ ಇಲ್ಲದೆ ಪರದಾಡಿದರು. ಕೆಲವರಂತೂ ರಾತ್ರಿವರೆಗೂ ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲೇ ಕಾಲ ಕಳೆದರು.

    ಬಸ್ ನಿಲ್ದಾಣ ಖಾಲಿ, ಖಾಲಿ: ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಗಳು ಖಾಲಿ, ಖಾಲಿ ಆಗಿದ್ದವು. ನೈಋತ್ಯ ರೈಲ್ವೆ ಕೂಡ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಿಂದ ಬೆಂಗಳೂರು, ಮೈಸೂರು, ಚೆನ್ನೈ, ತಿರುಪತಿಗೆ ತೆರಳುವ ಎಲ್ಲ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಯಾರೊಬ್ಬರೂ ರೈಲು ನಿಲ್ದಾಣದತ್ತ ಮುಖ ಮಾಡಲಿಲ್ಲ.

    ಸವಿತಾ ಸಮಾಜದವರು ಬೆಂಬಲ ಸೂಚಿಸಿದ್ದರಿಂದ ಕ್ಷೌರದಂಗಡಿಗಳು ತೆರೆದಿರಲಿಲ್ಲ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್​ಗಳು, ಸಹಕಾರ ಸಂಘಗಳು, ಎಪಿಎಂಸಿ ವರ್ತಕರು ಕೂಡ ಬಾಹ್ಯ ಬೆಂಬಲ ಘೊಷಿಸಿದ್ದು ಎಟಿಎಂಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು. ಖಾಸಗಿ ಆಸ್ಪತ್ರೆಗಳು ಒಪಿಡಿ(ಹೊರ ರೋಗಿಗಳ ವಿಭಾಗ)ಗಳ ಸೇವೆ ಸ್ಥಗಿತಗೊಂಡಿದ್ದರೆ, ಬಾರ್ ಆಂಡ್ ರೆಸ್ಟೋರೆಂಟ್​ಗಳು, ವೈನ್ ಶಾಪ್​ಗಳು ಬಂದ್ ಆಗಿದ್ದವು.

    ಬ್ಯಾಂಕ್, ಬಂಕ್​ಗಳಿಂದ ಬಾಹ್ಯ ಬೆಂಬಲ: ಕರ್ಫ್ಯೂ ಬೆಂಬಲಿಸಿದ್ದ ಕೆಲ ಪೆಟ್ರೋಲ್ ಬಂಕ್​ಗಳು ಸಂಪೂರ್ಣ ಸೇವೆ ಸ್ಥಗಿತಗೊಳಿಸಿದ್ದವು. ಇನ್ನೂ ಕೆಲವು ಬಂಕ್​ಗಳಲ್ಲಿ ಇಬ್ಬರು ಸಿಬ್ಬಂದಿ ಆಂಬುಲೆನ್ಸ್, ಸರ್ಕಾರಿ ವಾಹನಗಳು ಹಾಗೂ ತುರ್ತು ಪರಿಸ್ಥಿತಿ ನಿಮಿತ್ತ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕೆಲಸ ನಿರ್ವಹಿಸಿದರು. ಜಿಲ್ಲಾ ಡಿಸಿಸಿ (ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ) ಬ್ಯಾಂಕ್ ಕೂಡ ಬಾಹ್ಯ ಸೂಚಿಸಿತ್ತು. ಉಳಿದಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬೆಂಬಲ ಘೊಷಿಸಿ ದೇಶದ ಜನತೆ ಒಳಿತಿಗಾಗಿ ಅಂದು ಸ್ವಯಂಪ್ರೇರಿತರಾಗಿ ಜನತಾ ಕರ್ಫ್ಯೂ ಪಾಲಿಸಿದವು.

    ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತ: ವಿಶ್ವ ವ್ಯಾಪಿ ತಲ್ಲಣ ಸೃಷ್ಟಿಸಿರುವ ಕರೊನಾ ನಿಯಂತ್ರಣಕ್ಕೆ ದಿನಸಿ ಅಂಗಡಿ ವರ್ತಕರು, ಬಟ್ಟೆ ಅಂಗಡಿ ಮಾಲೀಕರು, ಪೆಟ್ರೋಲ್ ಬಂಕ್ ಅಸೋಸಿಯೇಷನ್, ಜವಳಿ ವರ್ತಕರ ಸಂಘ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಜಿಲ್ಲಾ ವಿತರಕರ ಸಂಘ, ಸಾಗರ ರಸ್ತೆ ಕೈಗಾರಿಕೋದ್ಯಮಿಗಳ ಸಂಘ, ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಸಂಘ, ಆಟೊಮೊಬೈಲ್ಸ್ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಬಸ್ ಮಾಲೀಕರ ಸಂಘ, ನಗರ ಸಾರಿಗೆ ಬಸ್ ಮಾಲೀಕರ ಸಂಘ, ಚಿನ್ನ-ಬೆಳ್ಳಿ ವರ್ತಕರ ಸಂಘ, ಐಟಿ ಅಸೋಸಿಯೇಷನ್, ಗಾಂಧಿಬಜಾರ್ ವರ್ತಕರ ಸಂಘ, ಅಡಕೆ ಮಂಡಿ ವರ್ತಕರ ಸಂಘ, ದಿನಸಿ ವರ್ತಕರ ಸಂಘ, ಚಿಟ್ಸ್ ಅಸೋಸಿಯೇಷನ್, ಯೂತ್ ಹಾಸ್ಟೆಲ್ ಅಸೋಸಿಯೇಷನ್, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳು ಬೆಂಬಲಿಸಿದ್ದವು.

    ಜನರಿಂದಲೇ ಸ್ವಯಂ ನಿರ್ಬಂಧ: ಸಾರ್ವಜನಿಕರೇ ಮನೆಗಳಿಂದ ಹೊರಗೆ ಬರದಂತೆ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತು. ಇದರಿಂದ ಸದಾ ಜನರಿಂದ ತುಂಬಿರುತ್ತಿದ್ದ ಗಾಂಧಿ ಬಜಾರ್, ಕೋಟೆ ರಸ್ತೆ, ಬಸ್ ನಿಲ್ದಾಣ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಬಾಲರಾಜ್ ಅರಸ್ ರಸ್ತೆ, ವಿದ್ಯಾನಗರ, ವಿನೋಬನಗರ ಭಾಗದಲ್ಲಿ ಬಿಕೋ ಎನ್ನುತ್ತಿತ್ತು. ಇನ್ನೂ ಪೆಟ್ರೋಲ್ ಪಂಪ್​ಗಳು ತುರ್ತು ಪರಿಸ್ಥಿತಿ ಹೊರತು ಪಡಿಸಿ ಬಂದ್​ಗೆ ಬೆಂಬಲಿಸಿದವು. ಭಾನುವಾರವಾರ ಆಗಿದ್ದರಿಂದ ಎಂದಿನಂತೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿದ್ದರೂ ಬಾಹ್ಯವಾಗಿ ಬೆಂಬಲ ನೀಡಲಾಗಿತ್ತು.

    60 ಕಿಮೀಗೆ 1,500 ರೂ. ವ್ಯಯ: ಬೆಳ್ಳಂಬೆಳಗ್ಗೆ ವಿವಿಧ ಭಾಗಗಳಿಂದ ನಗರಕ್ಕೆ ಬಂದಿಳಿದ ಪ್ರಯಾಣಿಕರ ಪಾಡು ಹೇಳತೀರದಾಗಿತ್ತು. ಬೆಂಗಳೂರು, ಸಿಗಂದೂರು, ಶಿರಸಿ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗಗಳಿಗೆ ತೆಳರಳಲು ಪ್ರಯಾಣಿಕರು ಪರದಾಡಿದರು. ಖಾಸಗಿ ವಾಹನಗಳನ್ನು ಹಿಡಿದು ಬಹಳಷ್ಟು ಪ್ರಯಾಣಿಕರು ತೆರಳಿದರು. ಇದೇ ವೇಳೆ 60 ಕಿಮೀ ತೀರ್ಥಹಳ್ಳಿಗೆ ಬರೋಬ್ಬರಿ 1,500 ರೂ. ಕೊಟ್ಟು ಬಾಡಿಗೆ ವಾಹನ ಮಾಡಿಕೊಂಡು ಪ್ರಯಾಣಿಕರು ತೆರಳಿದ್ದು ವಿಶೇಷವಾಗಿತ್ತು.

    ಮಲೆನಾಡಿನ ಇತಿಹಾಸದಲ್ಲೇ ಬಂದ್ ಯಶಸ್ವಿ: ಶಿವಮೊಗ್ಗದಲ್ಲಿ ವಿವಿಧ ಹೋರಾಟಗಳ ನಿಮಿತ್ತ ಆಗ್ಗಾಗ್ಗೆ ಬಂದ್ ನಡೆಯುತ್ತಲೇ ಇರುತ್ತದೆ. ರಾಜಕೀಯ ಪ್ರೇರಿತವಾಗಿ ಅಥವಾ ಹೋರಾಟಕ್ಕಾಗಿ ಬಂದ್​ಗೆ ವಿವಿಧ ಸಂಘಟನೆಗಳು, ಪಕ್ಷಗಳು, ಸಂಘ-ಸಂಸ್ಥೆಗಳು ಪ್ರತಿಭಟನೆ ನೆಪದಲ್ಲಿ ಬಂದ್​ಗೆ ಕರೆ ಕೊಡುವುದು ಸಾಮಾನ್ಯವಾಗಿದೆ. ಆದರೆ ಮಲೆನಾಡಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಬೆಂಬಲವಿಲ್ಲದೆ ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಮನೆಯಿಂದ ಹೊರಬರಲಿಲ್ಲ. ಕುತೂಹಲಕ್ಕೆ ಯುವಕರು ಬೈಕ್​ಗಳಲ್ಲಿ ತೆರಳುತ್ತಿದ್ದನ್ನು ಬಿಟ್ಟರೆ ಶಿವಮೊಗ್ಗ ಪ್ರಥಮ ಬಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು.

    ಪ್ರಯಾಣಿಕರಿಗೆ ನೆರವಾದ ಹೂವಿನ ವ್ಯಾಪಾರಿ: ಬೆಂಗಳೂರು ಸೇರಿ ವಿವಿಧೆಡೆಯಿಂದ ಬೆಳಗ್ಗೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ನಿಲ್ದಾಣದ ಎದುರು ಹೂ ಮಾರುತ್ತಿದ್ದ ಗಂಗಮ್ಮ ಹಲವರಿಗೆ ನೆರವಾದರು. ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡುತ್ತಿರುವುದನ್ನು ಗಮನಿಸಿದ ಗಂಗಮ್ಮ, ತಮ್ಮ ವ್ಯಾಪಾರ ಬಿಟ್ಟು ಬಸ್ಸುಗಳಿಲ್ಲದೆ ಚಿಂತೆಯಲ್ಲಿದ್ದ ಹಲವರಿಗೆ ಬಸ್, ಗೂಡ್ಸ್ ಆಟೋ, ಟೆಂಪೋಗಳಿಗೆ ಹತ್ತಿಸಿ ಮಾದರಿ ಆದರು. ಮಕ್ಕಳು, ಬ್ಯಾಗ್​ಗಳು ಜತೆಗೆ ಬಂದು ಇಳಿದಿದ್ದ ಮಹಿಳೆಯರಿಗೆ ಮೊದಲ ಆದ್ಯತೆ ಕೊಟ್ಟರು. ತಾವೇ ಮಕ್ಕಳು, ಲಗೇಜು ಹಿಡಿದು ವಾಹನ ಹತ್ತಿಸಿ ಮಹಿಳೆಯರಿಗೆ ಜಾಗ ಬಿಡಿ ಎನ್ನುತ್ತಿದ್ದರು. ವಾಹನಗಳಲ್ಲಿ ಇನ್ನೂ ಜಾಗವಿದ್ದರೆ ಜೋರಾಗಿ ಕೂಗಿ ಪ್ರಯಾಣಿಕರನ್ನು ಎಚ್ಚರಿಸುತ್ತಿದ್ದರು. ಗಂಗಮ್ಮ ಅವರ ನೆರವಿನಿಂದ ಹಲವರು ತಮ್ಮೂರು, ಮನೆ ತಲುಪಿದರು.

    ಮನವರಿಕೆ ಮಾಡಿದ ಪೊಲೀಸರು: ಜನತಾ ಕರ್ಫ್ಯೂ ನಡುವೆಯೂ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಸಾರ್ವಜನಿಕರಿಗೆ ಪೊಲೀಸರೇ ಮನವರಿಕೆ ಮಾಡಿಕೊಟ್ಟರು. ಅದರಲ್ಲೂ ಬೈಕ್​ಗಳಲ್ಲಿ ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಹಿಡಿದು ದಂಡ ವಿಧಿಸುವ ಜತೆಗೆ ಕರೊನಾ ಸಾಂಕ್ರಾಮಿಕ ರೋಗದ ತೀವ್ರತೆ ಕುರಿತು ವಿವರಿಸುತ್ತಿದ್ದರು. ಅಲ್ಲದೆ ಧ್ವನಿವರ್ಧಕದ ಮೂಲಕವೂ ಜಾಗೃತಿ ಮೂಡಿಸಿದರು. ಜತೆಗೆ ಗುಂಪಾಗಿದ್ದವರನ್ನು ನಿಲ್ಲದಂತೆ ಸೂಚಿಸುತ್ತಿದ್ದರು.

    ಲಾಠಿ ಹಿಡಿದ ತಹಸೀಲ್ದಾರ್ ಗಿರೀಶ್: ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದರೂ ಲೆಕ್ಕಿಸದೆ ಶನಿವಾರ ಮಧ್ಯರಾತ್ರಿ ಗಾಂಧಿಬಜಾರ್​ನ ಹೂವು, ತರಕಾರಿ ಮಾರ್ಕೆಟ್​ನಲ್ಲಿ ಸಾವಿರಾರು ಜನರು ಗುಂಪು ಕಟ್ಟಿಕೊಂಡಿದ್ದರು. ಪೊಲೀಸರ ಸಹಕಾರದೊಂದಿಗೆ ಬಹಳಷ್ಟು ಮನವರಿಕೆ ಮಾಡಿಕೊಟ್ಟರೂ ಜನರು ಎಚ್ಚೆತ್ತುಕೊಳ್ಳದ ಕಾರಣದಿಂದ ಗುಂಪು ಚದುರಿಸಲು ತಹಸೀಲ್ದಾರ್ ಬಿ.ಎನ್.ಗಿರೀಶ್ ಲಾಠಿ ಕೈಯಲ್ಲಿ ಹಿಡಿದ್ದರು. ಇದರಿಂದ ಎಚ್ಚೆತ್ತುಕೊಂಡ ವ್ಯಾಪಾರಿಗಳು ಅಲ್ಲಿಂದ ಮಳಿಗೆಗಳನ್ನು ಮುಚ್ಚಿ ವ್ಯಾಪಾರ ಸ್ಥಗಿತಗೊಳಿಸಿ ಜಾಗ ಖಾಲಿ ಮಾಡಿದರು.

    ಸಾರ್ವಜನಿಕರಿಂದ ಚಪ್ಪಾಳೆ ಕೃತಜ್ಞತೆ: ಕರೊನಾ ನಿಯಂತ್ರಣಕ್ಕೆ ವೈದರು, ದಾದಿಯರು, ಆಂಬ್ಯುಲೆನ್ಸ್ ಚಾಲಕರು ಸೇರಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸುತ್ತಿರುವ ಎಲ್ಲರನ್ನು ಮಲೆನಾಡಿನ ಜನತೆ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು. ತಮ್ಮ ತಮ್ಮ ಮನೆಗಳು, ಅಪಾರ್ಟ್​ವೆುಂಟ್​ಗಳ ಬಾಲ್ಕನಿ, ಟೆರೆಸ್​ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರೊಂದಿಗೆ ನಿಂತು ಚಪ್ಪಾಳೆ ತಟ್ಟಿದರು. ಜಗಟೆ, ತಮಟೆ, ಗಂಟೆ ಬಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts