More

    ಮೊದಲ ದಿನ 564 ವಿದ್ಯಾರ್ಥಿಗಳು ಗೈರು

    ಚಿತ್ರದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಶುಕ್ರವಾರ ನಡೆದ ಕನ್ನಡ ವಿಷಯದ ಪರೀಕ್ಷೆಗೆ 564 ವಿದ್ಯಾರ್ಥಿಗಳು ಗೈರಾಗಿದ್ದಾರೆ. ನೋಂದಾಯಿಸಿದ್ದ 13,840 ವಿದ್ಯಾರ್ಥಿಗಳ ಪೈಕಿ 13,276 ಮಂದಿ ಹಾಜರಾಗಿದ್ದಾರೆ.

    ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ಆರಂಭವಾಯಿತು. ಪಪೂ ಶಿಕ್ಷಣ ಇಲಾಖೆ 2023ರ ಜುಲೈನಲ್ಲಿ ಜಾರಿಗೊಳಿಸಿದ ಹೊಸ ಮಾದರಿ ಪ್ರಶ್ನೆ ಪತ್ರಿಕೆ ಕ್ರಮದಲ್ಲಿ ಮೊದಲ ಬಾರಿಗೆ ನಡೆದ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಕಂಡುಬರಲಿಲ್ಲ. 80 ಅಂಕಗಳ ಪ್ರಥಮ ಭಾಷೆ ಕನ್ನಡವನ್ನು ವಿದ್ಯಾರ್ಥಿಗಳು ಸುಸೂತ್ರವಾಗಿ ಬರೆದರು.

    ತರಬೇತಿ ಪಡೆದ ಉಪನ್ಯಾಸಕರ ತಂಡ ಕೇಂದ್ರ ಪ್ರವೇಶಿಸಿದ ವಿದ್ಯಾರ್ಥಿನಿಯರಿಗೆ ಕೊಠಡಿಯಲ್ಲಿ ಹಾಗೂ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ತಪಾಸಣೆ ನಡೆಸಿತು. ಮೊದಲ ದಿನವಾದ್ದರಿಂದ ಬಹುತೇಕ ಪಾಲಕರು ಕೇಂದ್ರಕ್ಕೆ ಬಂದಿದ್ದರು.

    ಬೆಳಗ್ಗೆ 9ರ ವೇಳೆಗೆ ಅನೇಕ ವಿದ್ಯಾರ್ಥಿಗಳು ಕೇಂದ್ರದ ಆವರಣ ಪ್ರವೇಶಿಸಿದ್ದರು. ಅಲ್ಲಿಟ್ಟಿದ್ದ ಸೂಚನಾ ಫಲಕಗಳಲ್ಲಿ ಸಂಖ್ಯೆ ನೋಡಿಕೊಂಡು ನಿಗದಿತ ಕೊಠಡಿಗೆ ವಿದ್ಯಾರ್ಥಿಗಳು ತೆರಳಿದರು. ಈ ವೇಳೆ ಕೆಲ ಉಪನ್ಯಾಸಕರ ನೆರವು ಪಡೆದರು. ಕೊಠಡಿ ಪ್ರವೇಶಿಸುವ ಮುನ್ನ ಆವರಣದಲ್ಲಿ ವಿದ್ಯಾರ್ಥಿಗಳು ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜೆರಾಕ್ಸ್, ಗಣಕಯಂತ್ರ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಸಂಬಂಧ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಬರೆದು ಹಿಂತಿರುಗುತ್ತಿದ್ದ ದೃಶ್ಯ ವಿವಿಧೆಡೆ ಕಂಡು ಬಂದಿತು. ಇಲಾಖೆ ಅಧಿಕಾರಿಗಳು ಕೇಂದ್ರಗಳ ಮೇಲೆ ಕಣ್ಗಾವಲು ಇಟ್ಟಿದ್ದರು.

    ಯಾವುದೇ ಗೊಂದಲವಿಲ್ಲದೆ, ಸುಗಮವಾಗಿ ಪರೀಕ್ಷೆ ಆರಂಭವಾಗಿದೆ. ಯಾವುದೇ ಡಿಬಾರ್ ಪ್ರಕರಣ ನಡೆದಿಲ್ಲ. ಮಾ. 4ರಂದು ಗಣಿತ ಮತ್ತು ಶಿಕ್ಷಣಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿವೆ ಎಂದು ಪಪೂ ಶಿಕ್ಷಣ ಇಲಾಖೆ ಡಿಡಿ ಆರ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts