More

    ಮೊಟ್ಟೆ ವಿತರಣೆ ಕಡ್ಡಾಯ

    ಶಿರಹಟ್ಟಿ: ಯಾವುದೇ ಕಾರಣಕ್ಕೂ ಬೆಲೆ ಏರಿಕೆಯ ನೆಪ ಹೇಳಬೇಡಿ. ಅಪೌಷ್ಟಿಕತೆಯಿಂದ ಬಳಲುವ ಮಹಿಳೆಯರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ತಪ್ಪದೇ ಮೊಟ್ಟೆ ಕೊಡಿ…

    ಹೀಗೆಂದು ತಾಪಂ ಇಒ. ಡಾ. ಎನ್.ಎಚ್. ಓಲೇಕಾರ ಅವರು ಸಿಡಿಪಿಒಗೆ ತಾಕೀತು ಮಾಡಿದರು.

    ಪಟ್ಟಣದ ಸಾಮರ್ಥ್ಯ ಸೌಧದ ಸಭಾಭವನದಲ್ಲಿ ತಾಪಂ ಅಧ್ಯಕ್ಷ ಈಶಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಸೂಚಿಸಿದರು.

    ಸಭೆ ಆರಂಭದಲ್ಲಿ ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಹಿಳೆಯರಿಗೆ ಮೊಟ್ಟೆ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣವೇನು? ಎಂದು ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ಸಿಡಿಪಿಒ ಮೃತ್ಯುಂಜಯ, ‘ಮೊಟ್ಟೆ ಬೆಲೆ ದುಬಾರಿಯಾಗಿದ್ದಕ್ಕೆ ಖರೀದಿಸಲು ಕಾರ್ಯಕರ್ತೆಯರು ಹಿಂಜರಿಯುತ್ತಿದ್ದಾರೆ. ಮೊಟ್ಟೆ ಬದಲು ಬೇಳೆಕಾಳು ನೀಡಲಾಗುತ್ತಿದೆ’ ಎಂದರು.

    ಮಧ್ಯಪ್ರವೇಶಿಸಿದ ಇಒ, ಮೊಟ್ಟೆ ಬೆಲೆ ಏರಿಕೆ ಇಂದು ನಿನ್ನೆಯ ಸಮಸ್ಯೆಯಲ್ಲ. ಸರ್ಕಾರದ ಉದ್ದೇಶ ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಮೊಟ್ಟೆ ವಿತರಿಸಲು ಕಾರ್ಯಕರ್ತೆಯರಿಗೆ ಸೂಚನೆ ನೀಡಿ’ ಎಂದರು.

    ಕೃಷಿ ಸಹಾಯಕ ನಿರ್ದೇಶಕ ಮಹೇಶಬಾಬು ವರದಿ ಒಪ್ಪಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಅಧ್ಯಕ್ಷ ಈಶಪ್ಪ ಲಮಾಣಿ, ‘ನಿಮ್ಮ ಇಲಾಖೆ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ರೈತರು ದೂರುತ್ತಿದ್ದಾರೆ. ಯೋಜನೆ ಮಾಹಿತಿ ಕುರಿತು ಕಚೇರಿ ಫಲಕದಲ್ಲಿ ನಮೂದಿಸಬೇಕು ಎಂದು ಅನೇಕ ಬಾರಿ ಗಮನ ಸೆಳೆದರೂ ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದರು.

    ‘ಪ್ರಧಾನ ಮಂತ್ರಿ ಸಂಚಿತ ಯೋಜನೆಯಡಿ ನಡೆಯುವ ರೈತೋಪಯೋಗಿ ಕೆಲಸ ಕಾರ್ಯ ಹಾಗೂ ಅನುದಾನ ಬಳಕೆ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅದಕ್ಕೆ ಸಂಬಂಧಿಸಿದ ಸಹಾಯಕ ಕೃಷಿ ಅಧಿಕಾರಿಗಳನ್ನು ಸಭೆಗೆ ಕರೆತನ್ನಿ ಎಂದು ಇಒ ಸೂಚಿಸಿದರು.

    ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

    ತಾಲೂಕಿನ ಪ್ರತಿ ಗ್ರಾಮಕ್ಕೂ ನೀರು

    ಪ್ರತಿ ಗ್ರಾಮಕ್ಕೆ ನೀರೊದಗಿಸಲು ಜಲಜೀವನ ಮಿಷನ್ ಯೋಜನೆ ಜಾರಿಗೆ ಬಂದಿದೆ. ಎಲ್ಲ ಅನುದಾನ ಕ್ರೋಡೀಕರಣವಾಗುತ್ತಿದ್ದಂತೆಯೇ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಸಿ. ಸಭೆಗೆ ಮಾಹಿತಿ ನೀಡಿದರು. ಇದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಎಲ್ಲರ ಸಹಭಾಗಿತ್ವದೊಂದಿಗೆ ಸಮರ್ಪಕ ಅನುಷ್ಠಾನವಾದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಇಒ ಹೇಳಿದರು.

    ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ

    ಭೂಸೇನಾ ನಿಗಮದಿಂದ ಅನುಷ್ಠಾನಗೊಂಡ ಕಾಮಗಾರಿ ಬಗ್ಗೆ ಮಾಹಿತಿ ನೀಡಲು ಜೆ.ಇ. ಜಮೀಲ್ ಸಿದ್ದರಾಗುತ್ತಿದ್ಮತೆಯೇ ಅವರನ್ನು ತಡೆದ ಇಒ, ಸಭೆ ನಡೆಯುವ ಸಂಬಂಧ ಇಲಾಖೆ ಪ್ರಗತಿ ವರದಿ ಲಕ್ಷ್ಮೇಶ್ವರ ತಾಲೂಕಿಗೆ ಸಂಬಂಧಿಸಿದ್ದು ನೀಡಿದ್ದು ಸರಿಯೇ? ಶಿರಹಟ್ಟಿ ತಾಲೂಕಿನ ವರದಿ ಎಲ್ಲಿದೆ ಎಂದು ಪ್ರಶ್ನಿಸಿದರು. ಅಧಿಕಾರಿ ನಿರುತ್ತರರಾದರು. ‘ಸರಿಯಾಗಿ ಮಾಹಿತಿ ಇಲ್ಲದಿದ್ದರೆ ಸಭೆಗೆ ಬರಬೇಡಿ. ಮೊದಲು ಸಭೆಯಿಂದ ಹೊರ ನಡೆಯಿರಿ. ಇವರ ಕಾಮಗಾರಿಗಳೆಲ್ಲ ಕಳಪೆಯಾಗಿವೆ. ಹೀಗಾಗಿ ವರದಿಗೆ ಆಧಾರವಿಲ್ಲ’ ಎಂದು ತಾಪಂ ಉಪಾಧ್ಯಕ್ಷೆ ತರಾಟೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts