More

    ಮೈಸೂರು ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಮೊಟಕು

    ಮಂಜುನಾಥ ಟಿ.ಭೋವಿ ಮೈಸೂರು

    ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ದೇಶದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಕುಗ್ಗಲಿದ್ದು, ಮೈಸೂರು ಜಿಲ್ಲೆಗೆ ಸೀಮಿತಗೊಳ್ಳಲಿದೆ.
    ಈ ಹಿಂದೆ ದಕ್ಷಿಣ ಕರ್ನಾಟಕದಾದ್ಯಂತ ವಿಸ್ತಾರಗೊಂಡಿದ್ದ ಮೈಸೂರು ವಿ.ವಿ.ಯ ಭೌಗೋಳಿಕ ಕಾರ್ಯಬಾಹುವನ್ನೇ ಕಡಿತಗೊಳಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ದಯನೀಯವಾಗಿ ಕಡಿಮೆಯಾಗಲಿದೆ. 214 ಕಾಲೇಜುಗಳ ಪೈಕಿ ಮೈಸೂರು ವಿ.ವಿ. ವ್ಯಾಪ್ತಿಯಲ್ಲಿ ಕೇವಲ 80 ಕಾಲೇಜುಗಳು ಉಳಿಯಲಿವೆ.

    ವಿವಿಯಿಂದ ಬೇರ್ಪಡೆ:
    ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆ, ರಾಜ್ಯದಲ್ಲಿ ಹೊಸದಾಗಿ 8 ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ (2001ರ ಕರ್ನಾಟಕ ಅಧಿನಿಯಮ 29) ತಿದ್ದುಪಡಿ ತರಲು ಒಪ್ಪಿದೆ.
    ಈ ಕ್ರಮದಿಂದ ನೆರೆಯ ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ವಿವಿ ಉದಯವಾಗಲಿವೆ. ಮೈಸೂರು ವಿ.ವಿ.ಯಿಂದ ಈ ಎರಡು ಜಿಲ್ಲೆಗಳು ಬೇರ್ಪಡಲಿವೆ. ಈ ಜಿಲ್ಲೆಗಳಲ್ಲಿರುವ ಮೈಸೂರು ವಿ.ವಿ. ಸ್ನಾತಕೋತ್ತರ ಕೇಂದ್ರಗಳು ಹೊಸ ವಿವಿಗಳಿಗೆ ಸೇರ್ಪಡೆಯಾ ಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಲಿವೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಈ ಎಲ್ಲ ಬೆಳವಣಿಗೆಯಿಂದ ಮೈಸೂರು ವಿವಿಗೆ ಮೈಸೂರು ಜಿಲ್ಲೆ ಮಾತ್ರ ಉಳಿಯಲಿವೆ.

    ಮೂಲಸೌಕರ್ಯಗಳೂ ವರ್ಗಾವಣೆ:
    ಹೊಸ ವಿವಿಗಳಿಗೆ ಹೊಸ ಕಟ್ಟಡ ಇನ್ನಿತರ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸುವುದಿಲ್ಲ. ಹೀಗಾಗಿ, ಈಗಿರುವ ಮೂಲಸೌಕರ್ಯಗಳನ್ನೇ ಬಳಸಿಕೊಂಡು ವಿವಿ ಕಾರ್ಯನಿರ್ವಹಿಸಬೇಕಾಗಿದೆ. ಹೊಸದಾಗಿ ಯಾವುದೇ ಜಮೀನು, ನೂತನ ವಾಹನ ಖರೀದಿಸುವಂತಿಲ್ಲ. ಹೊಸ ಕಟ್ಟಡ ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿವಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯವಿರುವ ಹುದ್ದೆಗಳನ್ನು ನಿಯೋಜನೆ ಮೇಲೆ ಬಳಸಿಕೊಳ್ಳಬೇಕು. ಯಾವುದೇ ಹೊಸ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವಂತಿಲ್ಲ. ಹೀಗಾಗಿ, ಮಂಡ್ಯದಲ್ಲಿ 80, ಹಾಸನದಲ್ಲಿ 75, ಚಾಮರಾಜನಗರದಲ್ಲಿ 55 ಎಕರೆ ಜಾಗ, ಮೈವಿವಿ ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ, ಬೋಧಕರು, ಮೂಲಸೌಕರ್ಯಗಳು ಹೊಸ ವಿವಿಗೆ ವರ್ಗಾವಣೆ ಆಗಲಿವೆ. ಈ ಜಿಲ್ಲೆಗಳಲ್ಲಿ ಮೈವಿವಿ ಅಸ್ತಿತ್ವವೇ ಕಳೆದುಕೊಳ್ಳಲಿದೆ.
    ಕೈತಪ್ಪಿದೆ ಸ್ನಾತಕೋತ್ತರ ಕೇಂದ್ರಗಳು:
    ಮುಖ್ಯ ಕ್ಯಾಂಪಸ್ ಆಗಿರುವ ಮಾನಸಗಂಗೋತ್ರಿ ಸೇರಿದಂತೆ ಮೈಸೂರು ವಿವಿ ನಾಲ್ಕು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. ಈ ಪೈಕಿ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಮೈಸೂರು ವಿವಿಯಿಂದ ಕೈತಪ್ಪಲಿವೆ. ಈಗಾಗಲೇ ಮಂಡ್ಯದ ಬಳಿ ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಮಂಡ್ಯ ವಿವಿಗೆ ಸೇರ್ಪಡೆಯಾಗಿದೆ. ಇದರಿಂದ ಮಾನಸಗಂಗೋತ್ರಿ ಕ್ಯಾಂಪಸ್ ಮಾತ್ರ ಮೈಸೂರು ವಿವಿಗೆ ಉಳಿದುಕೊಂಡಿದೆ.


    ಆದಾಯವೂ ಖೋತಾ:
    ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ 177 ಪ್ರಥಮ ದರ್ಜೆ ಕಾಲೇಜು, 37 ಶಿಕ್ಷಣ ಕಾಲೇಜುಗಳಲ್ಲಿ 1.20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಆಯಾ ಜಿಲ್ಲೆಯಲ್ಲಿರುವ ಕಾಲೇಜುಗಳು ಹೊಸ ವಿವಿಗಳಿಗೆ ವರ್ಗಾವಣೆಯಾಗಲಿವೆ. ಉದ್ದೇಶಿತ ಚಾಮರಾಜನಗರ ವಿವಿ ವ್ಯಾಪ್ತಿಗೆ 18, ಹಾಸನ ವಿವಿ ವ್ಯಾಪ್ತಿಗೆ 36 ಕಾಲೇಜು ಸೇರ್ಪಡೆಯಾಗಲಿವೆ. ಇದರಿಂದ ಮೈಸೂರು ವಿವಿಗೆ ಸಂಯೋಜಿತ ಕಾಲೇಜುಗಳ ಸಂಖ್ಯೆ ಕೂಡ ಕಡಿಮೆ ಆಗಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ತಗ್ಗಲಿದೆ. ಇದರ ಫಲವಾಗಿ ಪ್ರವೇಶ ಶುಲ್ಕ ಇನ್ನಿತರ ಮೂಲಗಳಿಂದ ಬರುತ್ತಿದ್ದ ಆದಾಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಮೈಸೂರು ವಿವಿಗೆ ಇದರಿಂದ ದೊಡ್ಡ ಹೊಡೆತ ಬೀಳಲಿದೆ.


    ಅಕ್ಕಪಕ್ಕ ಹೊಸ ವಿವಿಗಳ ಉದಯ:
    ಮೈಸೂರು ಸುತ್ತಲಿನ ಜಿಲ್ಲೆಗಳಲ್ಲಿ ಹೊಸ ವಿವಿಗಳು ಕಣ್ತೆರೆಯಲಿವೆ. ಹೊಸದಾಗಿ ಚಾಮರಾಜನಗರ, ಹಾಸನ, ಮಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯ ಕೊಡಗು ಜಿಲ್ಲೆಯಲ್ಲೂ ಹೊಸ ವಿವಿ ಸ್ಥಾಪನೆಯಾಗಲಿದ್ದು, ಈಗಾಗಲೇ ಮಂಡ್ಯ ವಿವಿ ಸ್ಥಾಪನೆಯಾಗಿದೆ. ಅಲ್ಲಿ ಂದ ಮೈಸೂರಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ.

    ನಿರ್ವಹಣೆ ಬದಲು:
    2010-11ನೇ ಸಾಲಿನಲ್ಲಿ ಚಾಮರಾಜನಗರದಲ್ಲಿ ಮೈಸೂರು ವಿ.ವಿ. ಸ್ನಾತಕೋತ್ತರ ಕೇಂದ್ರ ಆರಂಭವಾಗಿದೆ. 2016ರಲ್ಲಿ ಇದಕ್ಕೆ ಡಾ.ಬಿ.ಆರ್. ಅಂಬೇ ಡ್ಕರ್ ಸ್ನಾತಕೋತ್ತರ ಕೇಂದ್ರ ಎಂದು ನಾಮಕರಣ ಮಾಡಲಾಯಿತು. ಸದ್ಯ ಇಲ್ಲಿ 12 ಕೋರ್ಸ್‌ಗಳಿದ್ದು, 600 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹಾಸನದಲ್ಲಿ 9 ಕೋರ್ಸ್‌ಗಳಿದ್ದು, ಇವೆಲ್ಲವನ್ನೂ ಹೊಸ ವಿವಿಗಳು ನಿರ್ವಹಣೆ ಮಾಡಲಿವೆ.

    ಆರ್ಥಿಕ ಹೊರೆ:
    ಹೊಸ ವಿವಿ ಸ್ಥಾಪನೆಯಿಂದ ಸಾಧಕ-ಬಾಧಕಗಳಿವೆ. ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ದೊರೆಯಲಿದೆ. ಆದರೆ, 35 ಕಾಲೇಜುಗಳಿಗೆ ಒಂದು ವಿವಿ ಸ್ಥಾಪನೆ ಸರಿಯಲ್ಲ. ಇದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ಕುಲಪತಿ, ಇಬ್ಬರು ಕುಲಸಚಿವರು, ಸಿಬ್ಬಂದಿ ಪ್ರತ್ಯೇ ಕವಾಗಿ ನಿಯೋಜಿಸುವುದು ನಿಜಕ್ಕೂ ಆರ್ಥಿಕ ನಷ್ಟವೇ. ಇದರಿಂದ ವಿವಿ ನಡೆಸುವುದು ಕಷ್ಟವಾಗುತ್ತದೆ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

    ಹೊಸ ವಿವಿ ಸ್ಥಾಪನೆಯಿಂದ ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ಸಂಖ್ಯೆ ಕಡಿಮೆಯಾಗಲಿದೆ. ಚಿಕ್ಕ ವಿವಿಯಾದರೆ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲಿದೆ. ಆನ್‌ಲೈನ್ ಕೋರ್ಸ್‌ಗಳಿಗೆ ಇನ್ನಷ್ಟು ಬೇಡಿಕೆ ಬರಲಿದೆ. ಕಟ್ಟಡ ಸೇರಿದಂತೆ ಎಲ್ಲ ಮೂಲಸೌಕರ್ಯ ಗಳನ್ನು ಹೊಸ ವಿವಿಗಳಿಗೆ ಬಿಟ್ಟು ಕೊಡಬೇಕಾಗುತ್ತದೆ.
    ಪ್ರೊ.ಜಿ.ಹೇಮಂತಕುಮಾರ್, ಕುಲಪತಿ, ಮೈಸೂರು ವಿ.ವಿ.

    ಹೊಸ ವಿವಿ ಸ್ಥಾಪನೆಯಿಂದ ಉನ್ನತ ಶಿಕ್ಷಣಕ್ಕೆ ಯಾವುದೇ ಅನುಕೂಲ, ಸುಧಾರಣೆ ಆಗಲ್ಲ. ಇದು ರಾಜಕೀಯ ಪ್ರೇರಿತ. ಸರ್ಕಾರ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈಗಿರುವ ವಿವಿಗಳಿಗೇ ದುಡ್ಡು ಕೊಡಲ್ಲ. ಇನ್ನು ಹೊಸ ವಿವಿಗಳಿಗೆ ಅನುದಾನ ಕೊಡುತ್ತಾರಾ? ಮಾನಸಗಂಗೋತ್ರಿಯಲ್ಲಿರುವ ಕಟ್ಟಡ, ಲ್ಯಾಬ್, ಮೂಲಸೌಕರ್ಯಗಳನ್ನು ಹೊಸ ವಿವಿಯಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ.
    ಪ್ರೊ.ಬಿ. ಶಿವರಾಜ್, ನಿವೃತ್ತ ಪ್ರಾಧ್ಯಾಪಕರು, ಮೈಸೂರು ವಿ.ವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts