More

    ಮೈಸೂರು ದಸರಾ ದರ್ಬಾರ್’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮುನ್ನುಡಿ

    ಮಂಜುನಾಥ ಟಿ.ಭೋವಿ ಮೈಸೂರು

    ಕರೊನಾ ಸಂಕ್ರಮಣದಿಂದ ಕಳೆದ ಎರಡು ವರ್ಷ ಕಳೆಗುಂದಿದ್ದ ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸೋಮವಾರ ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಅದ್ದೂರಿ ಚಾಲನೆ ದೊರೆಯಿತು.

    ಇಂದಿನಿಂದ 9 ದಿನಗಳ ಕಾಲ ನವೋಲ್ಲಾಸದ ನವರಾತ್ರಿಯ ‘ದಸರಾ ದರ್ಬಾರ್’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮುನ್ನುಡಿ ಬರೆದರು. ಇದರೊಂದಿಗೆ ಸಾಂಸ್ಕೃತಿಕ ಕಂಪು ‘ಮಲ್ಲಿಗೆ ನಗರಿ’ ಮೈಸೂರು ಸೇರಿದಂತೆ ನಾಡಿನೆಲ್ಲೆಡೆ ಘಮ್ಮನೆ ಪರಿಮಳ ಬೀರಿತು.

    ಅಗ್ರಪೂಜೆಯೊಂದಿಗೆ ಚಾಲನೆ:
    ರಾಷ್ಟ್ರಪತಿಯಾದ ಬಳಿಕ ದೇಶದಲ್ಲಿ ಕೈಗೊಂಡ ಮೊದಲ ಪ್ರವಾಸದ ಸಂಭ್ರಮದಲ್ಲಿದ್ದ ಮುರ್ಮು ಅವರು, ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಮೈಸೂರಿಗೆ ಬಂದಿಳಿದರು. ಅಲ್ಲಿಯಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಅವರು, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ದೇವಸ್ಥಾನವನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಬಳಿಕ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್‌ನಿಂದ ರಾಷ್ಟ್ರಗೀತೆ ಮೊಳಗಿತು. ಬಳಿಕ ಪರಂಪರೆಯ ಗತವೈಭವದ ಪ್ರತಿಬಿಂಬಕವಾದ ದಸರೆಗೆ ನಾಡದೇವತೆ ಚಾಮುಂಡೇಶ್ವರಿದೇವಿಗೆ ಅಗ್ರಪೂಜೆಯೊಂದಿಗೆ ಚಾಲನೆ ನೀಡಲಾಯಿತು.

    ಮೀರಿದ ಮುಹೂರ್ತ:
    ಈ ಸಲ ಮುಹೂರ್ತವನ್ನು ಮೀರಲಾಯಿತು. ಬೆಳಗ್ಗ 9.45ರಿಂದ 10.05ರ ರೊಳಗೆ ಶುಭ ವೃಶ್ಚಿಕ ಲಗ್ನದಲ್ಲಿ ಇದು ನೆರವೇರಬೇಕಿತ್ತು. ಅದು ಸಾಧ್ಯವಾಗಲಿಲ್ಲ. 3 ನಿಮಿಷ ತಡವಾಗಿ ಅಧಿದೇವತೆ ಸನ್ನಿಧಿಯಲ್ಲಿ ಬೆಳಗ್ಗೆ 10.08ರ ಹೊತ್ತಿಗೆ ದೀಪ ಬೆಳಗುವ ಮೂಲಕ ದೇಶದ ಪ್ರಥಮ ಪ್ರಜೆ ಪ್ರಥಮ ಬಾರಿಗೆ ದಸರಾವನ್ನು ಉದ್ಘಾಟಿಸಿದರು. ಬಳಿಕ ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ಪಂಚಲೋಹದ ದೇವಿಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಪುನೀತರಾದರು. ಇದರೊಂದಿಗೆ ‘ದಸರೆಯ ಸಾಂಸ್ಕೃತಿಕ ರಥ’ವನ್ನು ಎಳೆದರು.


    ‘ಎಲ್ಲರಿಗೂ ನಮಸ್ಕಾರ, ದಸರಾ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳುವ ಮೂಲಕ ಭಾಷಣವನ್ನು ಆರಂಭಿಸಿದ ರಾಷ್ಟ್ರಪತಿ, ಗತ ಇತಿಹಾಸ ಇರುವ ಮೈಸೂರು ದಸರಾ ಈಗಲೂ ಮುಂದುವರಿದಿರುವುದು ಹೆಮ್ಮೆಯ ವಿಷಯ. ಇದು ನಮ್ಮ ಆಧ್ಯಾತ್ಮಿಕ ಸಾಂಸ್ಕೃತಿಕತೆಯ ಪ್ರತೀಕ. ಜತೆಗೆ, ಭಾರತೀಯ ಪರಂಪರೆಯ ಒಂದು ಭಾಗವಾಗಿದೆ. ಇಂತಹ ಐತಿಹಾಸಿಕ ಉತ್ಸವದಲ್ಲಿ ಭಾಗಿಯಾಗಲು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಸಂತಸದಿಂದ ಹೇಳಿದರು.

    ಸಿಎಂ 2ನೇ ದಸರೆ:

    ಮುಖ್ಯಮಂತ್ರಿಯಾಗಿ 2ನೇ ಬಾರಿ ದಸರೆಯಲ್ಲಿ ಪಾಲ್ಗೊಂಡಿರುವ ಸಡಗರದಲ್ಲಿದ್ದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಚಾಮುಂಡಿ ದೇವಿಯ ಆಶೀರ್ವಾದದಿಂದ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆಯಾಗುತ್ತಿದೆ. ಜತೆಗೆ, ಚಾಮುಂಡಿಬೆಟ್ಟದಲ್ಲಿ ಸ್ಥಾಪನೆಯಾಗಿರುವ ದೇವಿಶಕ್ತಿ ಪೀಠ ಇಡೀ ನಾಡಿಗೆ ಶಕ್ತಿಯನ್ನು ನೀಡುತ್ತಿದೆ. ವಿವಿಧ ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನ ಕಲ್ಯಾಣದ ಕಡೆಗೆ ನಾವು ಹೆಜ್ಜೆ ಹಾಕಬೇಕಿದೆ ಎಂದರು.

    ಮೇಯರ್‌ಗೂ ಜಾಗ ಇರಲಿಲ್ಲ:
    ಈ ಉತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಟಿ. ಸೋಮಶೇಖರ್, ವಿ.ಸುನೀಲ್‌ಕುಮಾರ್ ಸಾಕ್ಷಿಯಾಗಿದ್ದರು. ಆದರೆ, ಸಭಾವೇದಿಕೆಯಲ್ಲಿ ಮೈಸೂರಿನ ಒಬ್ಬ ಜನಪ್ರತಿನಿಧಿಯೂ ಇರಲಿಲ್ಲ. ಮೇಯರ್ ಶಿವಕುಮಾರ್, ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡರಿಗೂ ಜಾಗ ಇರಲಿಲ್ಲ. ಜಿಲ್ಲೆಯ ಶಾಸಕರು, ಸಂಸದರು, ನಿಗಮ-ಮಂಡಳಿಯ ಅಧ್ಯಕ್ಷರೆಲ್ಲ ಸಭಿಕರ ಸಾಲಿನಲ್ಲಿ ಕುಳಿತ್ತಿದ್ದು ಅನೇಕರ ಆಕ್ರೋಶಕ್ಕೆ ಕಾರಣವಾಯಿತು. ಮಾತಿನ ಚಕಮಕಿ, ವಾಗ್ವಾದಕ್ಕೂ ನಾಂದಿ ಹಾಡಿತು.

    ವಿವಿಧ ಕಾರ್ಯಕ್ರಮಗಳ ಅನಾವರಣ
    ಪ್ರಧಾನ ಸಮಾರಂಭದ ಬಳಿಕ ನಗರದೆಲ್ಲೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹೂಗುಚ್ಛ ನಿಧಾನಗತಿಯಲ್ಲಿ ಒಂದೊಂದಾಗಿ ತೆರೆದುಕೊಂಡವು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೊದಲ ಬಾರಿಗೆ ‘ಕೈಗಾರಿಕಾ ದಸರಾ’, ಕಲಾಮಂದಿರದಲ್ಲಿ ಸಿನಿ ತಾರೆ ಸಮ್ಮುಖದಲ್ಲಿ ‘ಚಲನಚಿತ್ರೋತ್ಸವ’, ಕುಪ್ಪಣ್ಣ ಉದ್ಯಾನದಲ್ಲಿ ಆಕರ್ಷಣೆಯ ‘ಫಲಪುಷ್ಪ ಪ್ರದರ್ಶನ’, ರುಚಿಯನ್ನು ಆಸ್ವಾದಿಸುವ ‘ಆಹಾರ ಮೇಳ’, ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ‘ಕುಸ್ತಿ ಪಂದ್ಯಾವಳಿ’ ಚಾಲನೆಗೊಂಡಿತು.
    ಮೂರು ತಿಂಗಳ ನಡೆಯುವ ‘ದಸರಾ ವಸ್ತು ಪ್ರದರ್ಶನ’ ಈ ಸಲವೂ ಅರೆಬರೆಯ ಸ್ಥಿತಿಯಲ್ಲೇ ಸಂಜೆ ತೆರೆದುಕೊಂಡಿತು. ಓವಲ್ ಮೈದಾನದಲ್ಲಿ ‘ಯೋಗ ದಸರಾದ ನೃತ್ಯರೂಪಕ’, ಸ್ವಾತಂತ್ರೃದ ಅಮೃತ ಮಹೋತ್ಸವದ ಪ್ರಯುಕ್ತ ಅರಮನೆ ಅಂಗಳದಲ್ಲಿ ‘ಫಲಪುಷ್ಪ ಪ್ರದರ್ಶನ’, ಕಲಾಮಂದಿರದಲ್ಲಿ ‘ಶಿಲ್ಪ ಮತ್ತು ಚಿತ್ರಕಲಾ ಪ್ರದರ್ಶನ’ ಗರಿಬಿಚ್ಚಿಕೊಂಡಿತು.

    ಸಾಂಸ್ಕೃತಿಕ ವೈಭವ :
    ‘ಬೆಳಕಿನ ಅರಮನೆ’ಯ ಆವರಣದಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವೂ ವರ್ಣರಂಜಿತವಾಗಿ ಶುರುವಾಯಿತು. ಬಳಿಕ ನಗರದ ವಿವಿಧೆಡೆ ಇರುವ ಪ್ರತ್ಯೇಕ ಪಂಚ ವೇದಿಕೆಯಲ್ಲಿ ಕರ್ನಾಟಕ, ಹಿಂದೂಸ್ತಾನಿ, ಜಾನಪದ ಗಾಯನ, ವಾದ್ಯ ಪ್ರಕಾರಗಳು, ಭರತನಾಟ್ಯ… ಹೀಗೆ ಸಾಂಸ್ಕೃತಿಕ ವೈಭವ ಮೇಳೈಸಿತು.

    ಊರಿಗೆ ಬೆಳಕಿನ ಸಿಂಗಾರ:
    ಎಲ್‌ಇಡಿ ಬೆಳಕಿನ ದೀಪಾಲಂಕಾರದಲ್ಲಿ ದಸರೆ ವೈಭವ ಝಗಮಗಿಸಿತು. ದೀಪಗಳ ಸ್ವರ್ಗವೇ ಇಲ್ಲಿ ಧರೆಗಿಳಿಯಿತು. ವಿವಿಧ ವರ್ಣಗಳ ದೀಪಗಳಿಂದ ಸಿಂಗಾರಗೊಂಡ ಅರಮನೆ ನಗರಿ ಪ್ರವಾಸಿಗರನ್ನು ಆಕರ್ಷಿಸಿತು. ಒಟ್ಟಿನಲ್ಲಿ ಗತಕಾಲದ ರಾಜವೈಭವ ಮತ್ತೊಮ್ಮೆ ತೆರೆದುಕೊಂಡಿತು.

    ಅರಮನೆಯಲ್ಲಿ ಖಾಸಗಿ ದರ್ಬಾರ್
    ಇನ್ನೊಂದೆಡೆ, ಅರಮನೆಯ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ಕೂಡ ಸಂಪ್ರದಾಯದಂತೆ ವೈಭವೋಪೇತವಾಗಿ ಶುರುವಾಯಿತು. ರತ್ನಖಚಿತ ಸಿಂಹಾಸನಾರೋಹಣ ಮಾಡುವ ಮೂಲಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಂಪರಾನುಗತ ಖಾಸಗಿ ದಸರೆಗೆ ಚಾಲನೆ ನೀಡಿದರು. ಇಂದಿನಿಂದ 10 ದಿನಗಳ ಕಾಲ ಅರಮನೆ ಆವರಣದಲ್ಲಿ ರಾಜವೈಭವ ಮತ್ತೆ ಮರುಕಳಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts