More

    ಮೇವು-ನೀರಿಲ್ಲದೆ ಹಸುಗಳ ಪರದಾಟ, ಮಾಲೀಕನ ನಿರ್ಲಕ್ಷ್ಯ, ತಾಲೂಕು ಆಡಳಿತದಿಂದ ರಾಸುಗಳಿಗೆ ಆರೈಕೆ

    ನೆಲಮಂಗಲ: ಫಾರ್ಮ್ ಹೌಸ್‌ನಲ್ಲಿ ಮೇವಿಲ್ಲದೆ ಹಸುಗಳು ಪರದಾಡುತ್ತಿದ್ದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಕೆ.ಮಂಜುನಾಥ್, ತಕ್ಷಣವೇ ಮೇವಿನ ವ್ಯವಸ್ಥೆ ಕಲ್ಪಿಸುವ ಜತೆಗೆ ಕೆಲಹೊತ್ತು ಜಾನುವಾರುಗಳೊಂದಿಗೆ ಕಳೆದು ಸಂತಸಪಟ್ಟರು.

    ತಾಲೂಕಿನ ಬ್ಯಾಡರಹಳ್ಳಿ ರಾಜಣ್ಣ ಎಂಬುವರ ಜಮೀನಿನಲ್ಲಿ ಬೆಂಗಳೂರಿನ ನಿವಾಸಿ ರಂಜಿತ್ ಎಂಬುವರು ನಾಲ್ಕೈದು ವರ್ಷದಿಂದ ವಿವಿಧ ತಳಿಯ ಹಸುಗಳನ್ನು ಸಾಕುತ್ತಿದ್ದರು. ಇತ್ತೀಚೆಗೆ ಹಸುಗಳ ವ್ಯಾಪಾರದಲ್ಲಿ ಸಾಕಷ್ಟು ನಷ್ಟವಾಗಿದ್ದರಿಂದ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು ಎನ್ನಲಾಗಿದೆ. ಇದರಿಂದ 1 ವಾರದಿಂದ 40ಕ್ಕೂ ಹೆಚ್ಚು ಮಲೆನಾಡು ಗಿಡ್ಡ ತಳಿಯ ಹಸುಗಳು ಮೇವು ಇಲ್ಲದೆ ಪರಡಾಡುತ್ತಿದ್ದವು. ಇದನ್ನು ಕಂಡ ಸ್ಥಳೀಯರೊಬ್ಬರು ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದರು.

    ಮಣ್ಣನ್ನೇ ತಿನ್ನುತ್ತಿದ್ದ ಹಸುಗಳು: ಾರ್ಮ್‌ಹೌಸ್ ಸುತ್ತ ತಂತಿಬೇಲಿ ಅಳವಡಿಸಿ ಹಸುಗಳನ್ನು ಬಿಡಲಾಗಿದೆ. ಆದರೆ ನಾಲ್ಕೈದು ದಿನದಿಂದ ಆಹಾರ ವಿಲ್ಲದ ಕಾರಣ ಹಸುಗಳು ತೆಂಗಿನ ಗರಿ ಹಾಗೂ ಒಣ ಕಟ್ಟಿಗೆ ಹಾಗೂ ಮಣ್ಣನ್ನೇ ತಿನ್ನುತ್ತಿದ್ದ ದೃಶ್ಯ ಎಲ್ಲರಲ್ಲೂ ಕಣ್ಣೀರು ತರಿಸಿತು.
    ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಮಂಜುನಾಥ್, ತಕ್ಷಣವೇ ಮೇವು ನೀರಿನ ವ್ಯವಸ್ಥೆ ಮಾಡಿದರು. ಬಳಿಕ ಹಸುಗಳ ಮೈದಡವಿ ಕರುಗಳನ್ನು ಮುದ್ದಾಡಿದರು. ನಂತರ ತಾಲೂಕು ಆಡಳಿತದಿಂದ ನಾಲ್ಕೈದು ದಿನಗಳಿಗೆ ಆಗುವಷ್ಟು ಮೇವಿನ ವ್ಯವಸ್ಥೆ ಮಾಡಿ ಮೂಕ ಪ್ರಾಣಿಗಳಿಗೆ ಕೆ.ಮಂಜುನಾಥ್ ಸಂಜೀವಿನಿಯಾದರು.
    ಸ್ಥಳೀಯರು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ತಾಲೂಕು ಆಡಳಿತದಿಂದ ತಾತ್ಕಾಲಿಕವಾಗಿ ಹಸುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಶು ಸಂಗೋಪನಾ ಇಲಾಖೆ ಸಹಾಯದಿಂದ ಚಿಕಿತ್ಸೆ ಕೊಡಿಸಲಾಗಿದೆ. ಹಸುಗಳಿಗೆ ಆಹಾರ ನೀಡದೆ ಬೇಜಬ್ದಾರಿಯಾಗಿ ನಡೆದುಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಹಾಗೆಯೇ ಆರೈಕೆಗೂ ತಾಲೂಕು ಆಡಳಿತ ಒತ್ತು ನೀಡಲಿದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

    ಭಾನುವಾರ ಬೆಳಗ್ಗೆ 7 ಗಂಟೆಗೆ ಹಸು ಖರೀದಿಸಲು ಬಂದಿದ್ದೆ. ಈ ವೇಳೆ ಹಸುಗಳು ಮೇವು, ನೀರು ಇಲ್ಲದೆ ಪರದಾಡುತ್ತಿದ್ದನ್ನು ಕಂಡು ನೋವಾಯಿತು. ತಕ್ಷಣ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದೆ. ಹಸುಗಳನ್ನು ಸಾಕಿರುವ ಮಾಲೀಕನ ಬೇಜಬ್ದಾರಿಯಿಂದ ಈ ರೀತಿ ಸಮಸ್ಯೆಯಾಗಿದೆ. ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಬೇಕು. ಹಸುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
    ಚಿಕ್ಕಹನುಮಯ್ಯ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts