More

    ಮೇ ತಿಂಗಳಲ್ಲಿ ಕೈಗೆಟುಕಲಿದೆ ಮಾವು

    ಗಿರೀಶ ದೇಶಪಾಂಡೆ ಹಾನಗಲ್ಲ

    ಹಾನಗಲ್ಲ ಮಾವಿನ ಹಣ್ಣಿಗೆ ದೇಶ ವ್ಯಾಪಿ ಬೇಡಿಕೆ. ಮೇ ತಿಂಗಳಲ್ಲಿ ಮಾವು ಕೈಸೇರಲಿದೆ. ಆದರೆ, ಅಕಾಲಿಕ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾವು ರೈತರ ಕೈಗೆಟಕುವ ಲಕ್ಷಣ ಕಾಣದಾಗಿದೆ.

    ಹಾನಗಲ್ಲ ತಾಲೂಕಿನಲ್ಲಿ 3200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿಂದ ಹೊರರಾಜ್ಯಗಳಷ್ಟೇ ಅಲ್ಲ, ಹೊರ ದೇಶಗಳಿಗೂ ರಫ್ತಾಗುತ್ತದೆ. ಆದರೆ, ಈ ವರ್ಷದ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯಿಂದ ಹೂವು ಉದುರಿದೆ. ಅದಾದ ಬಳಿಕ ಈಗ ಎರಡನೇ ಬಾರಿ ಹೂ ಬಿಟ್ಟಿದೆ ಆದರೂ, ಮಾವಿನ ಹಣ್ಣುಗಳು ಗ್ರಾಹಕರ ಕೈಸೇರಲು ಕೊಂಚ ವಿಳಂಬವಾಗಲಿದೆ.

    ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಹಾಸನ ಹಾಗೂ ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ಕೊಲ್ಕತಾ, ಪಂಜಾಬ್, ದೆಹಲಿಗೆ ಪ್ರತಿ ವರ್ಷ ಹಾನಗಲ್ಲಿನ ಮಾವಿನ ಹಣ್ಣುಗಳು ರವಾನೆಯಾಗುತ್ತವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಆಪೂಸ್ ತಳಿಯನ್ನೇ ಬೆಳೆಯಲಾಗುತ್ತಿದೆ. ಅದರೊಂದಿಗೆ ಒಂದಷ್ಟು ಸಿಂಧೂರ, ತೋತಾಪುರಿ, ಪೈರಿ, ಕಲ್ಮಿ, ಬೆನೆಸಿಯಾ, ನೀಲಂ ಸೇರಿ ಹತ್ತಾರು ತಳಿಯ ಮಾವು ಬೆಳೆಯುತ್ತಾರೆ. ಆದರೆ, ಆಪೂಸ್ ಮಾವಿಗೆ ಹೆಚ್ಚು ಬೇಡಿಕೆ ಇದೆ.

    ಈ ಬಾರಿ ಹೂವು ತಡವಾಗಿ ಬಿಟ್ಟಿರುವುದರಿಂದ ಏಪ್ರಿಲ್ ತಿಂಗಳಲ್ಲಿ ಕೊಯ್ಲು ಆರಂಭವಾಗುವ ಬದಲು ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗುವುದರಿಂದ ಆಲಿ ಕಲ್ಲು ಮಳೆಯ ಭಯ ರೈತರನ್ನು ಕಾಡುತ್ತಿದೆ. ಮಳೆ ಆರಂಭವಾದರೆ ಮಾರುಕಟ್ಟೆಯಲ್ಲಿ ಮಾವು ಬೇಡಿಕೆ ಕಳೆದುಕೊಳ್ಳುತ್ತದೆ. ಹೀಗಾಗಿ ರೈತರು ಮಾವು ಬೆಳೆಯ ಲಾಭ – ನಷ್ಟದ ಲೆಕ್ಕಾಚಾರ ಹಾಕುವಂತಾಗಿದೆ.

    ಸ್ವಾದಿಷ್ಟ ಹಣ್ಣು : ಜಿಲ್ಲೆಯಲ್ಲಿ ಬೆಳೆಯುವ ಮಾವಿನ ಹಣ್ಣಿನಲ್ಲಿ ತಿರುಳು ಹೆಚ್ಚಾಗಿರುತ್ತದೆ. ಇಲ್ಲಿನ ಹವಾಮಾನ ಹಣ್ಣು ಬೆಳೆಯಲು ಸೂಕ್ತವಾಗಿರುವುದರಿಂದ ಮಾವಿನ ಹಣ್ಣುಗಳು ಉತ್ತಮ ಸ್ವಾದ ಹೊಂದಿವೆ. ಬೇರೆಡೆಗಳಲ್ಲಿನ ಮಾವು ಇಷ್ಟು ರುಚಿಕರವಾಗಿರುವುದಿಲ್ಲ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

    ಕಳೆದ ವರ್ಷ ಕೋವಿಡ್​ನಿಂದಾಗಿ ಮಾವಿನ ದರ ಕುಸಿತವಾಗಿತ್ತು. ಟನ್​ಗೆ 30 ಸಾವಿರಕ್ಕಿಂತ ಕಡಿಮೆ ದರ ಸಿಕ್ಕಿದೆ. ಕಳೆದ ವರ್ಷದ ನಷ್ಟದಿಂದ ನಲುಗಿ ಹೋಗಿದ್ದೇವೆ. ಈ ಬಾರಿಯಾದರೂ ಲಾಭ ಸಿಗುತ್ತದೆಯೋ ನೋಡಬೇಕು. | ಮರಿಗೌಡ ಪಾಟೀಲ ಮಾವು ಬೆಳೆಗಾರ ಹಾನಗಲ್ಲ

    ಅಕಾಲಿಕ ಮಳೆಯಿಂದಾಗಿ ಈ ಮೊದಲು ಬಿಟ್ಟಿದ್ದ ಹೂವು ಉದುರಿವೆ. ಮತ್ತೆ ಹೂವು-ಹೀಚು ಬಿಡುತ್ತಿವೆ. ಫಸಲು ಈ ಬಾರಿ ವಿಳಂಬವಾಗುತ್ತದೆ. ಆದರೆ, ದರವನ್ನು ಈಗಲೇ ಊಹಿಸುವುದು ಅಸಾಧ್ಯ. ಹವಾಮಾನ ಆಧಾರಿತ ವಿಮಾ ವ್ಯವಸ್ಥೆ ಇರುವುದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ. ಶಿಲೀಂದ್ರ ರೋಗ ನಿರೋಧಕ ಔಷಧ ಸಿಂಪಡಣೆ ಮಾಡಬೇಕು. | ಮಂಜುನಾಥ ಬಣಕಾರ ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts