More

    ಮೆಸ್ಕಾಂನಿಂದ ರೈತರ ಕಡೆಗಣನೆ; ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

    ಶಿಕಾರಿಪುರ: ಮೆಸ್ಕಾಂ ರೈತ ವಿರೋಧಿ ನೀತಿ ಮತ್ತು ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಾಗಿ ಮೆಸ್ಕಾಂ ಕಚೇರಿ ಬಳಿ ಘೋಷಣೆ ಕೂಗಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಬಿಜೆಪಿ ಸರ್ಕಾರ ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರ ಕೂಗು ಕೇಳಿಸುತ್ತಿಲ್ಲ. ಮೆಸ್ಕಾಂ ರೈತರಿಗೆ ಸ್ಪಂದಿಸದೆ ಉಪೇಕ್ಷೆ ಮಾಡುತ್ತಿದೆ ಎಂದು ದೂರಿದರು. ಕೇವಲ ಚುನಾವಣಾ ದೃಷ್ಟಿಯಿಂದ ಯೋಜನೆಗಳನ್ನು, ಮೀಸಲಾತಿಯನ್ನು ಜಾರಿಗೊಳಿಸದೆ ಶಾಶ್ವತವಾದ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಬಿಜೆಪಿ ಭ್ರಷ್ಟಾಚಾರದ ಆಡಳಿತದಲ್ಲಿ ಮುಳುಗಿಹೋಗಿದೆ. ಇವರಿಗೆ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರ ಬಗ್ಗೆ ಕಾಳಜಿಯಿಲ್ಲ. ಕಾಂಗ್ರೆಸ್ ಯಾವತ್ತೂ ಬಡವರು, ಹಿಂದುಳಿದವರ ಪರವಾದ ಪಕ್ಷ. ನೋವುಂಡವರ, ಅನ್ಯಾಯಕ್ಕೊಳಗಾದವರ ಪಕ್ಷ. ಜನ ಈಗಾಗಲೇ ಕಾಂಗ್ರೆಸ್ ಕಡೆಗೆ ಆಸೆಯ ಕಂಗಳಿಂದ ನೋಡುತ್ತಿದ್ದಾರೆ ಎಂದು ಹೇಳಿದರು.
    ಸುಟ್ಟುಹೊದ ಟಿಸಿಗಳನ್ನು 24 ಗಂಟೆಯೊಳಗೆ ಟಿಸಿ ನೀಡಲಾಗುವುದು ಎಂದು ಇಂಧನ ಸಚಿವರು ಹೇಳಿದ್ದರು. ಅದರೆ ಲಂಚ ನೀಡದೇ ಯಾವುದೇ ಕೆಲಸ ಆಗುತ್ತಿಲ್ಲ.ಟಿಸಿ ಗಳು ಸುಟ್ಟು ತಿಂಗಳುಗಳೇ ಕಳೆದರೂ ರೈತರಿಗೆ ಟಿಸಿ ಸಿಗುತ್ತಿಲ್ಲ ಎಂದು ದೂರಿದರು.
    ಪುರಸಭೆ ಸದಸ್ಯ ನಾಗರಾಜ ಗೌಡ ಮಾತನಾಡಿ, ಅಕ್ರಮ ಸಕ್ರಮ ಯೋಜನೆಯಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ. ಅವುಗಳ ಇತ್ಯರ್ಥ ಮಾಡಿಲ್ಲ ಎಂದು ದೂರಿದರು. ನಂತರ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts