More

    ಮೆಕ್ಕೆಜೋಳ ಬಿತ್ತನೆ ಬೀಜ ಹೆಚ್ಚಿನ ದರಕ್ಕೆ ಮಾರಾಟ

    ಹಾವೇರಿ: ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಿವಿಧ ಕಂಪನಿಯವರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಕೂಡಲೆ ಸರ್ಕಾರ ಸೂಕ್ತ ದರ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅನೇಕ ವರ್ಷಗಳಿಂದ ರೈತರು ತಾವೇ ಬೆಳೆದ ಬೆಳೆಗಳಿಂದ ಬಿತ್ತನೆ ಬೀಜಗಳನ್ನು ತಯಾರಿಸಿಕೊಂಡು ಬಿತ್ತನೆ ಮಾಡುತ್ತಿದ್ದರು. ಆದರೆ, ಕಾಲ ಕಳೆದಂತೆ ಕೆಲವು ಕಂಪನಿಗಳು ಸರ್ಕಾರದ ಅನುಮತಿ ಪಡೆದು ರೈತರು ಬೆಳೆದ ಬೀಜಗಳನ್ನು ಖರೀದಿಸಿ, ಸಂಸ್ಕರಣೆ ಮಾಡಿ ಅದನ್ನು ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಒಂದು ಪಾಕೀಟ್ (4 ಕೆಜಿ) ಮೆಕ್ಕೆಜೋಳ ಬಿತ್ತನೆ ಬೀಜವನ್ನು 1,270 ರೂ. ಗಳಿಂದ 1,600 ರೂ. ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು ಸರ್ಕಾರ ಮಧ್ಯ ಪ್ರವೇಶಿಸಿ ಒಂದು ಪಾಕೀಟ್ ಬಿತ್ತನೆ ಬೀಜಕ್ಕೆ 500 ರೂ.ಗಳಿಂದ 600 ರೂ. ದರ ನಿಗದಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಕಂಪನಿಗಳು ರೈತರಿಂದ ಖರೀದಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಮೂಲಕ ರೈತರನ್ನು ಹಗಲು ದರೋಡೆ ಮಾಡುತ್ತಿವೆ. ಇವುಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೂಡಲೆ ಸರ್ಕಾರ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಸಬೇಕು. ರೈತ ಸಂಪರ್ಕ ಕೇಂದ್ರದ ಮೂಲಕ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುತ್ತಿದ್ದು, ಅಲ್ಲಿ ವಿತರಿಸುವ ಬೀಜಗಳಿಗಿಂತ ಹೊರಗಡೆ ಕಡಿಮೆ ದರದಲ್ಲಿ ಬೀಜಗಳು ದೊರಕುತ್ತಿವೆ. ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾದ ಉತ್ತಮ ಕಂಪನಿಯ ಬಿತ್ತನೆ ಬೀಜಗಳು ಸಿಗುತ್ತಿಲ್ಲ. ಕೂಡಲೆ ಸರ್ಕಾರ ಇದರ ಬಗ್ಗೆಯೂ ಕ್ರಮ ಕೈಗೊಂಡು ರೈತರಿಗೆ ನೇರವಾಗಿ ಬಿತ್ತನೆ ಬೀಜಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

    ರೈತ ಸಂಘದ ಪದಾಧಿಕಾರಿಗಳಾದ ಹನುಮಂತಪ್ಪ ಕಬ್ಬಾರ, ಬಿ.ಕೆ. ರಾಜನಹಳ್ಳಿ, ದೀಪಕ ಗಂಟಿಸಿದ್ದಪ್ಪನವರ, ನಿಂಗಪ್ಪ ನಿಂಬಣ್ಣನವರ, ಕರಿಯಪ್ಪ ನಿಂಬಣ್ಣನವರ, ನೀಲಕಂಠಪ್ಪ ಕೂಸನೂರ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts