More

    ಮೆಕ್ಕೆಜೋಳಕ್ಕೆ ದರ ಕುಸಿತ ಭೀತಿ…!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆದ ರೈತರು ಮಾರುಕಟ್ಟೆಯಲ್ಲಿನ ಬೆಲೆ ಕಂಡು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ.

    ಸ್ಥಳೀಯ ಎಪಿಎಂಸಿ ಮಾರುಕಟ್ಟೆಗೆ ಪ್ರಸಕ್ತ ವರ್ಷದ ಮೆಕ್ಕೆಜೋಳ ಆವಕವಾಗುತ್ತಿದ್ದು, ಸೋಮವಾರ ಒಂದು ಕ್ವಿಂಟಾಲ್​ಗೆ 1050 ರೂ.ನಿಂದ 1200 ರೂ.ವರೆಗೆ ಮಾರಾಟವಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಸಂಪೂರ್ಣ ಬೆಳೆ ಮಾರುಕಟ್ಟೆಗೆ ಬಂದರೆ, ಬೆಲೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಾಣುವ ಭೀತಿ ರೈತರಲ್ಲಿ ಶುರುವಾಗಿದೆ.

    ರೈತರು ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ಬೀಜ, ಗೊಬ್ಬರ, ಔಷಧ ಹಾಗೂ ಕೂಲಿ ಕಾರ್ವಿುಕರ ಸಂಬಳ ಸೇರಿ 10- 15 ಸಾವಿರ ರೂ.ವರೆಗೂ ಖರ್ಚು ಮಾಡಿದ್ದಾರೆ. ಈ ಬಾರಿ ಮಳೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಕಾರಣ ಬೆಳೆಗೆ ಅಂಟಿದ ಲದ್ದಿ ಹುಳು ಬಾಧೆ ದೂರ ಮಾಡಲು ಹಾಗೂ ತೇವಾಂಶದಿಂದ ಬೆಳೆ ಸಂರಕ್ಷಿಸಿಕೊಳ್ಳಲು ಔಷಧಕ್ಕಾಗಿ ಅಧಿಕ ಖರ್ಚು ಮಾಡಿದ್ದಾರೆ.

    ಎಕರೆಗೆ 10ರಿಂದ 15 ಕ್ವಿಂಟಾಲ್​ನಷ್ಟು ಮೆಕ್ಕೆಜೋಳ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ 1050 ರೂ.ಗೆ ಕ್ವಿಂಟಾಲ್​ನಂತೆ ಮೆಕ್ಕೆಜೋಳ ಮಾರಾಟ ಮಾಡಿದರೆ, ಬಿತ್ತನೆಗೆ ಮಾಡಿದ ಖರ್ಚು ಮಾತ್ರ ರೈತರ ಕೈಗೆ ಸೇರಲಿದೆ. ಅಲ್ಲದೆ, ಎಪಿಎಂಸಿಗೆ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಆವಕವಾದರೆ, ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

    ಖರೀದಿ ಕೇಂದ್ರ ತೆರೆಯಲು ಆಗ್ರಹ: ತಾಲೂಕಿನಲ್ಲಿ ಈ ಬಾರಿ 52 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇಳುವರಿ ಕೂಡ ಉತ್ತಮವಾಗಿದೆ. ಆದರೆ, ಮಾರುಕಟ್ಟೆಯಲ್ಲಿರುವ ಬೆಲೆಗೆ ಮಾರಾಟ ಮಾಡಿದರೆ ರೈತರಿಗೆ ಬಹಳಷ್ಟು ನಷ್ಟವಾಗಲಿದೆ. ಆದ್ದರಿಂದ ಸರ್ಕಾರ ಕನಿಷ್ಠ 1500 ರೂ. ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ರೈತರ ಆಗ್ರಹವಾಗಿದೆ.

    2200 ರೂ.ವರೆಗೂ ಇದ್ದ ಬೆಲೆ ಈಗಿಲ್ಲ: 2019 ಆಗಸ್ಟ್, ಅಕ್ಟೋಬರ್​ನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದು ಅತಿವೃಷ್ಟಿ ಉಂಟಾದ ಕಾರಣ ಮೆಕ್ಕೆಜೋಳ ಇಳುವರಿ ಕುಂಠಿತವಾಗಿತ್ತು. ಹೀಗಾಗಿ ನವೆಂಬರ್, ಡಿಸೆಂಬರ್ ಹಾಗೂ 2020 ಜನವರಿವರೆಗೂ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2200 ರೂ.ವರೆಗೂ ಮಾರಾಟವಾಗಿತ್ತು. ಇದಾದ ಎರಡು ತಿಂಗಳಲ್ಲಿ ಕರೊನಾ ಲಾಕ್​ಡೌನ್ ಆಗಿದ್ದರಿಂದ 800 ರೂ.ವರೆಗೆ ಬೆಲೆ ಕುಸಿತ ಕಂಡಿತ್ತು. ಸದ್ಯ ಕರೊನಾದಿಂದಾಗಿ ವಿದೇಶಕ್ಕೆ ಮೆಕ್ಕೆಜೋಳ ರಫ್ತು ಸಹ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಹೀಗಾಗಿ ಸಂಪೂರ್ಣ ಬೆಳೆ ಮಾರುಕಟ್ಟೆಗೆ ಬಂದರೆ, ಬೆಲೆ ಇನ್ನೂ ಕುಸಿತ ಖಚಿತವಾಗಲಿದೆ.

    ಸಾಲ ಮಾಡಿ ಮೆಕ್ಕೆಜೋಳ ಬೆಳೆದಿದ್ದೇವೆ. ಕಳೆದ ವರ್ಷದ ಬೆಲೆ ನೋಡಿ ಈ ವರ್ಷವೂ ಚೆನ್ನಾಗಿ ಬೆಲೆ ಬರಬಹುದು ಎಂದುಕೊಂಡಿದ್ದೇವೆ. ಆದರೆ, ಈಗಲೇ ಬೆಲೆ 1050 ರೂ. ಇದೆ. ಮುಂದಿನ ದಿನದಲ್ಲಿ ಇನ್ನೂ ಕಡಿಮೆಯಾದರೆ ಸಾಲ ತೀರಿಸುವುದಾದರೂ ಹೇಗೆ ಎಂಬ ಚಿಂತೆ ಶುರುವಾಗಿದೆ.

    | ದಿಳ್ಳೆಪ್ಪ ಅಂಕಸಾಪುರ, ಮೆಕ್ಕೆಜೋಳ ಬೆಳೆಗಾರ

    ಸದ್ಯ ಮೆಕ್ಕೆಜೋಳಕ್ಕೆ ಎಪಿಎಂಸಿಯಲ್ಲಿ 1100 ರೂ.ನಿಂದ 1400 ರೂ.ವರೆಗೆ ಬೆಲೆಯಿದೆ. ಒಣಗಿದ ಮೆಕ್ಕೆಜೋಳಕ್ಕೆ ಉತ್ತಮ ಬೆಲೆಯಿದೆ. ಪ್ರಸಕ್ತ ವರ್ಷದ ಬೆಳೆಗೆ ಇನ್ನೂ ಅಷ್ಟೊಂದು ಬೆಲೆಯಿಲ್ಲ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯುವ ಕುರಿತು ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ.

    | ಪರಮೇಶ ನಾಯ್ಕ, ಎಪಿಎಂಸಿ ಸಹ ಕಾರ್ಯದರ್ಶಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts