More

    ಮೃಗಶಿರ ಮಳೆಗೇ ಭರ್ತಿಯಾಗುತ್ತಿವೆ ಅಣೆಕಟ್ಟೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಕಾಳಿ ನದಿ ಪಾತ್ರದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಅಣೆಕಟ್ಟುಗಳೂ ತುಂಬಿ ತುಳುಕುತ್ತಿವೆ.

    ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್​ನಲ್ಲಿ ಅಣೆಕಟ್ಟೆಗಳು ತುಂಬುತ್ತಿದ್ದವು. ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕದ್ರಾ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿದೆ. ಕಾಳಿ ಜಲವಿದ್ಯುತ್ ಯೋಜನೆಯ ಎಲ್ಲ ಅಣೆಕಟ್ಟೆಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಈಗಾಗಲೇ ಇದೆ. ಯೋಜನೆಯ ಪ್ರಮುಖ ಜಲಾಶಯ ಸೂಪಾದ ಗರಿಷ್ಠ ಸಂಗ್ರಹಣೆ ಸಾಮರ್ಥ್ಯ 564 ಮೀಟರ್ ಇದ್ದು, ಇದುವರೆಗೆ 537.80 ಮೀ. ನೀರು ಸಂಗ್ರಹವಾಗಿದೆ. 30375 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಬಾರಿ ಈ ದಿನ ಕೇವಲ 530.10 ಮೀಟರ್ ನೀರು ಸಂಗ್ರಹವಾಗಿತ್ತು. ಸೂಪಾ ಅಣೆಕಟ್ಟೆ ಸಮೀಪ ವಿದ್ಯುತ್ ಉತ್ಪಾದನೆ ಮಾಡಿ 2412 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 75.50 ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಕೊಡಸಳ್ಳಿ ಅಣೆಕಟ್ಟೆಯಲ್ಲಿ 71.25 ಮೀಟರ್ ನೀರು ಸಂಗ್ರಹವಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ 100 ಮಿಮೀ ಮಳೆಯಾಗಿದ್ದು, 14209 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ವಿದ್ಯುತ್ ಉತ್ಪಾದನೆ ಮಾಡಿ, 12366 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೊಡಸಳ್ಳಿಯಲ್ಲಿ 60.05 ಮೀಟರ್ ಮಾತ್ರ ನೀರು ಸಂಗ್ರಹವಾಗಿತ್ತು.

    ಉತ್ತಮ ಮಳೆ

    ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಶನಿವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸರಾಸರಿ 48.25 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 54.8 ಮಿಮೀ, ಭಟ್ಕಳ-30, ಹಳಿಯಾಳ-29.8, ಹೊನ್ನಾವರ-63.9, ಕಾರವಾರ-47.2, ಕುಮಟಾ-13, ಮುಂಡಗೋಡ-48.8, ಸಿದ್ದಾಪುರ-52.6, ಶಿರಸಿ-60.5, ಜೊಯಿಡಾ-53.6, ಯಲ್ಲಾಪುರ-87.6 ಮಿಮೀ ಮಳೆಯಾಗಿದೆ.

    ಶೇ. 70 ರಷ್ಟು ತುಂಬುತ್ತಿದ್ದಂತೆ ನೀರು ಹೊರಬಿಡಿ

    ಕಾರವಾರ: ಅಣೆಕಟ್ಟೆಗಳ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಶೇಕಡ 70ರಷ್ಟು ಭರ್ತಿಯಾಗುತ್ತಿದ್ದಂತೆ ಗೇಟ್ ತೆರೆದು ನೀರು ಹೊರ ಬಿಡಲು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೇ ಹಾಗೂ ಜೂನ್ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ವಾಡಿಕೆ ಅವಧಿಗೂ ಮುನ್ನವೇ ಅಣೆಕಟ್ಟೆಗಳು ತುಂಬುತ್ತಿವೆ. ಅತಿವೃಷ್ಟಿಯಾದಲ್ಲಿ ಮುಂದೆ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿ ತಡೆಯಲು ಅಣೆಕಟ್ಟೆಗಳ ಒಳಹರಿವು ಹಾಗೂ ಹೊರ ಹರಿವಿನ ಸಮ ಅನುಪಾತ ಕಾಪಾಡಿಕೊಳ್ಳಲು ಕೆಪಿಸಿ ಎಂಡಿ ಅವರಿಗೆ ಸೂಚಿಸಲಾಗಿದ್ದು, ಜಿಲ್ಲೆಯ ಎಲ್ಲ ಅಣೆಕಟ್ಟೆಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಐದು ಕಿಮೀಗೊಂದು ತಂಡ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದಿಂದ ಉಂಟಾಗಬಹುದಾದ ಅನಾಹುತಗಳನ್ನು ತಡೆಯಲು ಈಗಾಗಲೇ ಕ್ರಮ ವಹಿಸಲಾಗಿದೆ. ಗುಡ್ಡಗಳ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಪ್ರತಿ ಐದು ಕಿಮೀ ವ್ಯಾಪ್ತಿಗೆ ಒಬ್ಬ ನೋಡಲ್ ಅಧಿಕಾರಿ, ಹಾಗೂ ಒಂದು ತಂಡ ನಿಯೋಜಿಸುವಂತೆ ಹೆದ್ದಾರಿಯ ಗುತ್ತಿಗೆ ಪಡೆದ ಐಆರ್​ಬಿ ಕಂಪನಿಗೆ ಸೂಚನೆ ನೀಡಲಾಗಿದೆ ಎಂದರು. ಗುಡ್ಡ ಕುಸಿತದ ಭೀತಿಯಲ್ಲಿರುವ ಸಿದ್ದಾಪುರದ ಕಾನಸೂರು, ಶಿರಸಿಯ ಜಾಜಿಗುಡ್ಡೆ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳಾಂತರಕ್ಕೆ ಜಾಗ ಹುಡುಕಲಾಗುತ್ತಿದೆ. ಪ್ರತಿ ಗ್ರಾಪಂಗಳಲ್ಲಿ ಮರ ಕತ್ತರಿಸುವ ಯಂತ್ರ, ಜೆಸಿಬಿ ಮುಂತಾದವುಗಳನ್ನು ಖರೀದಿಸಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

    ಮೇಲ್ಛಾವಣಿ ರಿಪೇರಿ ಮಾಡಿಸಿದ ಎಸಿ

    ಕಾರವಾರ: ಗಾಳಿ, ಮಳೆಯಿಂದ ಮನೆಗೆ ಹಾನಿಯಾಗಿ ನಿರಾಶ್ರಿತೆಯಾದ ಕಿನ್ನರ ಗ್ರಾಮದ ಗೋಪಿಕಾ ಗಣೇಶ ಗುನಗಿ ಎಂಬ ವೃದ್ಧೆಯ ಮನೆಯ ಮೇಲ್ಛಾವಣಿಯನ್ನು ಸ್ವತಃ ನಿಂತು ರಿಪೇರಿ ಮಾಡಿಸಿಕೊಡುವ ಮೂಲಕ ಎಸಿ ವಿದ್ಯಾಶ್ರೀ ಚಂದರಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ವೃದ್ಧೆ ಏಕಾಂಗಿಯಾಗಿ ಮನೆಯಲ್ಲಿರುವುದನ್ನು ಗಮನಿಸಿ ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಕರೆಸಿ ತುರ್ತಾಗಿ ಮೇಲ್ಛಾವಣಿ ರಿಪೇರಿಗೆ ವ್ಯವಸ್ಥೆ ಮಾಡಿದರು. ಅಲ್ಲದೆ, ವೃದ್ಧೆಗೆ ಆಹಾರದ ಕಿಟ್ ವಿತರಿಸಿದರು. ಮನೆ ಹಾನಿ ಪರಿಹಾರವನ್ನು ಶೀಘ್ರ ಕೊಡಿಸಲು ವ್ಯವಸ್ಥೆ ಮಾಡುವಂತೆ ಅವರು ತಹಸೀಲ್ದಾರರಿಗೆ ಸೂಚನೆ ನೀಡಿದರು. ಮನೆಯ ಹಿಂದೆ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿ ಅದರ ದುರಸ್ತಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

    ಮಲ್ಲಾಪುರಕ್ಕೆ ಭೇಟಿ

    ಪ್ರಕೃತಿ ವಿಕೋಪದಿಂದ ಬಾಧಿತವಾಗುವ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಕೆಲ ಪ್ರದೇಶಗಳಿಗೆ ಎಸಿ ವಿದ್ಯಾಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಉಂಟಾದಲ್ಲಿ ಜನರ ರಕ್ಷಣೆಗೆ ಬೋಟ್ ಹಾಗೂ ಈಜುಗಾರರ ತಂಡವನ್ನು ಸಿದ್ಧಮಾಡಿಟ್ಟುಕೊಳ್ಳುವಂತೆ ಸ್ಥಳೀಯ ಗ್ರಾಪಂಗೆ ಸೂಚನೆ ನೀಡಿದರು. ತಹಸೀಲ್ದಾರ್ ಎನ್.ಎಫ್. ನರೋನಾ ಇದ್ದರು.

    ಸೂಪಾ ಡ್ಯಾಮ್ ಒಳಹರಿವು ಹೆಚ್ಚಳ

    ದಾಂಡೇಲಿ: ಗಣೇಶಗುಡಿಯ ಸೂಪಾ ಡ್ಯಾಮ್ ಕ್ಯಾಚ್​ವೆುಂಟ್ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಶನಿವಾರ ಸೂಪಾ ಡ್ಯಾಮ್ೆ 30,375 ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಿದೆ.

    ಜೂ. 1ರಿಂದ 19ರವರೆಗೆ ಗಣೇಶಗುಡಿ ಭಾಗದಲ್ಲಿ ದಾಖಲಾದ ಮಳೆಯ ಪ್ರಮಾಣ 373.4 ಮಿ.ಮೀ. ಆಗಿದ್ದು, 567.5 ಮೀ. ಎತ್ತರದ ಡ್ಯಾಮ್ಲ್ಲಿ 536.82 ಮೀ. ನೀರು ಭರ್ತಿಯಾಗಿದೆ. 2413 ಕ್ಯೂಸೆಕ್ ನೀರನ್ನು ಗಣೇಶಗುಡಿಯ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ.

    ಗೋಡೆ ಕುಸಿದು ಹಾನಿ

    ಯಲ್ಲಾಪುರ: ತಾಲೂಕಿನಲ್ಲಿ ಶನಿವಾರ ಮಳೆಯ ಪ್ರಮಾಣ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಮದನೂರು ಗ್ರಾ.ಪಂ. ವ್ಯಾಪ್ತಿಯ ಬಾಬು ಪಾಟೀಲ ಅವರ ಮನೆಯ ಗೋಡೆ ಕುಸಿದು ಹಾನಿ ಉಂಟಾಗಿದೆ. ಚಂದಗುಳಿ ಗ್ರಾ.ಪಂ. ವ್ಯಾಪ್ತಿಯ ಹುತ್ಕಂಡ ಗ್ರಾಮದ ಸಾಸ್ಮೆಗದ್ದೆಯಲ್ಲಿ ನರಸಿಂಹ ವಿಶ್ವೇಶ್ವರ ಭಟ್ಟ ಅವರಿಗೆ ಸೇರಿದ ಹಸು ಹಳ್ಳದಲ್ಲಿ ಬಿದ್ದು ಮೃತಪಟ್ಟಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

    ಕಳಸಾಯಿ ಬಳಿ ಕುಸಿದ ರಸ್ತೆ

    ಜೊಯಿಡಾ: ತಾಲೂಕಿನ ಕುಂಬಾರವಾಡಾ ಗ್ರಾಪಂ ವ್ಯಾಪ್ತಿಯ ಉಳವಿ-ಡಿಗ್ಗಿ ಗೋವಾ ಗಡಿ ರಾಜ್ಯ ಹೆದ್ದಾರಿಯ ಕಳಸಾಯಿ ಬಳಿ ರಸ್ತೆ ಪಕ್ಕದಲ್ಲಿ ಬೃಹತ್ ತಗ್ಗು ಬಿದ್ದಿದೆ. ಇದರಿಂದಾಗಿ ಅಂಬೂಳ್ಳಿ ಕ್ರಾಸ್​ನಿಂದ ಕುಂಬಾರವಾಡಾ ಕ್ರಾಸ್​ತನಕ ರಸ್ತೆ ಸಂಚಾರ ನಿಷೇಧಿಸಿ ಜೊಯಿಡಾ ತಹಸೀಲ್ದಾರ್ ಸಂಜಯ ಕಾಂಬಳೆ ಆದೇಶಿಸಿದ್ದಾರೆ. ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳಸಾಯಿ ಬಳಿ ರಸ್ತೆಯ ಬಲಬದಿಗೆ ಸುಮಾರು ಎರಡು ಮೀಟರ್ ಅಗಲ ಮತ್ತು ನಾಲ್ಕು ಮೀಟರ್ ಆಳದ ತಗ್ಗು ಬಿದ್ದಿದೆ. ಮುಖ್ಯ ರಸ್ತೆಯೂ ಕುಸಿಯುವ ಆತಂಕ ಇದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಎಚ್. ವಿಜಯಕುಮಾರ ಮತ್ತು ತಹಸೀಲ್ದಾರ್ ಶುಕ್ರವಾರ ಜಂಟಿ ವೀಕ್ಷಣೆ ನಡೆಸಿ ರಸ್ತೆ ದುರಸ್ತಿಯಾಗುವವರೆಗೆ ವಾಹನ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ.

    ಮನೆ ಮೇಲೆ ಬಿದ್ದ ಮರ

    ಅಂಕೋಲಾ: ತಾಲೂಕಿನ ವಾಸರೆಕುದ್ರಿಗಿ ಗ್ರಾಮದ ಕುದ್ರಿಗಿ ಮಜರೆಯ ಮನೆಯೊಂದರ ಮೇಲೆ ಶುಕ್ರವಾರ ರಾತ್ರಿ ಮಳೆ-ಗಾಳಿಗೆ ಮರ ಬಿದ್ದು ಹಾನಿಯಾಗಿದೆ. ಸಣ್ಣಮ್ಮಾ ನಾಗಪ್ಪ ನಾಯಕ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಗೊಳಗಾಗಿದೆ. ಇನ್ನು ಬೊಬ್ರುವಾಡ ಗ್ರಾಮದ ಲಲಿತಾ ಸದಾನಂದ ರಾಯ್ಕರ ಅವರ ಮನೆ ಮೇಲೆಯೂ ಮರ ಬಿದ್ದು ಮನೆಯ ಛಾವಣಿ ಹಾನಿಗೊಳಗಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಉದಯ ಕುಂಬಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts