More

    ಮುಳುಗಡೆ ಗ್ರಾಮಗಳ ಸ್ಥಳಾಂತರ ಅಸಮರ್ಪಕ

    ಮುಂಡರಗಿ: ಹಿನ್ನೀರಿನಿಂದಾಗಿ ಮುಳುಗಡೆಯಾಗುವ ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ಸಿಂಗಟಾಲೂರ ಬ್ಯಾರೇಜ್​ನ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿದೆ.

    ಸಿಂಗಟಾಲೂರ ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿನಿಂದ ಮುಳುಗಡೆಯಾಗುವ ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ಬ್ಯಾರೇಜ್​ನಲ್ಲಿ ಸದ್ಯ 1.98 ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಹೀಗಾಗಿ, ಯೋಜನೆಗೆ ಬಳಕೆಯಾಗಬೇಕಿದ್ದ ನಿರ್ದಿಷ್ಟ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿದೆ.

    ತಾಲೂಕಿನ ಹಮ್ಮಿಗಿ ಮತ್ತು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಮಧ್ಯೆ ತುಂಗಭದ್ರಾ ನದಿಗೆ ಸಿಂಗಟಾಲೂರ ಬ್ಯಾರೇಜ್ ನಿರ್ವಿುಸಲಾಗಿದೆ. ಮುಂಡರಗಿ ತಾಲೂಕಿನ ಗುಮ್ಮಗೋಳ, ಬಿದರಳ್ಳಿ, ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳನ್ನು ಮುಳುಗಡೆ ಪ್ರದೇಶವೆಂದು 2010ರಲ್ಲಿ ಘೊಷಿಸಲಾಯಿತು. 2012ರಲ್ಲಿ ಬ್ಯಾರೇಜ್ ಲೋಕಾರ್ಪಣೆ ಮಾಡಲಾಯಿತು. 2012ರಲ್ಲಿ ಪುನಃ ಸರ್ವೆ ಮಾಡಿದ ಸಂದರ್ಭದಲ್ಲಿ ವಿಠಲಾಪುರ ಗ್ರಾಮವನ್ನು ಮುಳುಗಡೆ ಪ್ರದೇಶವೆಂದು ಘೊಷಿಸಲಾಯಿತು.

    ವಿಠಲಾಪುರ ಗ್ರಾಮ ಹೊರತುಪಡಿಸಿ ಗುಮ್ಮಗೋಳ, ಬಿದರಳ್ಳಿ, ಅಲ್ಲಿಪುರ ಗ್ರಾಮಕ್ಕೆ ಈಗಾಗಲೇ ಪುನರ್ವಸತಿ ಕಲ್ಪಿಸಿ ಪರಿಹಾರ ನೀಡಲಾಗಿದೆ. ತಾಂತ್ರಿಕ ತೊಂದರೆಯಿಂದ ಕೆಲವರಿಗೆ ಮಾತ್ರ ಪರಿಹಾರ ಮತ್ತು ಹಕ್ಕುಪತ್ರ ನೀಡಿಲ್ಲ.

    ಹಕ್ಕುಪತ್ರ ವಿಳಂಬ: 2015ರಲ್ಲಿ ಬಿದರಳ್ಳಿ, ಅಲ್ಲಿಪುರ ಗ್ರಾಮಸ್ಥರಿಗೆ, 2017ರಲ್ಲಿ ಗುಮ್ಮಗೋಳ ಗ್ರಾಮಸ್ಥರಿಗೆ ಪುನರ್ವಸತಿ ಗ್ರಾಮದ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕುಪತ್ರ ವಿತರಣೆಗೂ ಐದಾರು ವರ್ಷಗಳ ಮುಂಚೆಯೇ ಗ್ರಾಮಸ್ಥರಿಗೆ ಪರಿಹಾರ ನೀಡಲಾಗಿತ್ತು. ಇದೇ ವೇಳೆ ಹಕ್ಕುಪತ್ರ ನೀಡಿದ್ದರೆ ಪರಿಹಾರ ಹಣದಲ್ಲಿಯೇ ಮನೆ ನಿರ್ವಿುಸಿಕೊಳ್ಳುತ್ತಿದ್ದರು. ಆದರೆ, ಹಕ್ಕುಪತ್ರ ನೀಡುವಲ್ಲಿ ವಿಳಂಬ ಮಾಡಿದ ಕಾರಣದಿಂದ ಪರಿಹಾರ ಹಣ ಬೇರೆ ಕಾರ್ಯಕ್ಕೆ ಬಳಸಿದರು. ಹೀಗಾಗಿ, ಬಿದರಳ್ಳಿ, ಅಲ್ಲಿಪುರದ ಕೆಲ ಜನರು ಮನೆ ನಿರ್ವಿುಸಿಕೊಂಡಿದ್ದು ಬಿಟ್ಟರೆ ಮುಳುಗಡೆ ಗ್ರಾಮಗಳು ಸಂಪೂರ್ಣವಾಗಿ ಸ್ಥಳಾಂತರಗೊಂಡಿಲ್ಲ.

    ಸ್ಥಳಾಂತರ ಕಾರ್ಯ ನಡೆಯಬೇಕು: ವಿಠಲಾಪುರ ಗ್ರಾಮಸ್ಥರಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸುವುದರ ಜತೆಗೆ ಈಗಾಗಲೇ ಪುನರ್ವಸತಿ ಕಲ್ಪಿಸಿರುವ ಬಿದರಳ್ಳಿ, ಗುಮ್ಮಗೋಳ, ಅಲ್ಲಿಪುರ ಗ್ರಾಮಸ್ಥರೊಂದಿಗೆ ರ್ಚಚಿಸಿ ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯಬೇಕಿದೆ. ನಾಲ್ಕು ಗ್ರಾಮಗಳನ್ನು ಸ್ಥಳಾಂತರಿಸಿದರೆ ಮಾತ್ರ ಬ್ಯಾರೇಜ್​ನಲ್ಲಿ 3.12ಟಿಎಂಸಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ.

    ಸಿಂಗಟಾಲೂರ ಬ್ಯಾರೇಜ್​ನಲ್ಲಿ ನಿರ್ದಿಷ್ಟ ಪ್ರಮಾಣದ ನೀರನ್ನು ಸಂಗ್ರಹಿಸದೆ ನದಿಗೆ ಹರಿಸುವ ಕಾರಣದಿಂದ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯಾಗುತ್ತದೆ. ನೀರಿನ ಅಭಾವ ಹೆಚ್ಚಾದಾಗ ಭದ್ರಾ ಜಲಾಶಯದಿಂದ ನದಿಗೆ ನೀರನ್ನು ಬಿಡಿಸಲಾಗುತ್ತದೆ. ಬ್ಯಾರೇಜ್​ನಲ್ಲಿ 3.12 ಟಿಎಂಸಿ ನೀರು ಸಂಗ್ರಹಿಸಿದರೆ ಯೋಜನೆ ಸದುಪಯೋಗವಾಗಲಿದೆ.

    ವಿಠಲಾಪುರ ಗ್ರಾಮ ಹೊರತುಪಡಿಸಿ ಇನ್ನುಳಿದ ಮೂರು ಗ್ರಾಮಕ್ಕೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲಾಗಿದೆ. ವಿಠಲಾಪುರ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿ ಪರಿಹಾರ ನೀಡಲಾಗುತ್ತದೆ. ಮುಳುಗಡೆಯಾಗುವ ಗ್ರಾಮಗಳ ಜನರೊಂದಿಗೆ ರ್ಚಚಿಸಿ ಸಮಸ್ಯೆ ಸರಿಪಡಿಸುವ ಮೂಲಕ ಸ್ಥಳಾಂತರ ಕಾರ್ಯಕ್ಕೆ ಮುಂದಾಗಲಾಗುವುದು.

    – ವಿನಯ ಬಿ.ಎಂ. ಎಇಇ ಪುನರ್ವಸತಿ ಮತ್ತು ಪುನರ್​ನಿರ್ವಣ ಉಪವಿಭಾಗ

    2010ರಲ್ಲಿ ಪರಿಹಾರ ಹಣ ನೀಡಿ 2015 ಮತ್ತು 2017ರಲ್ಲಿ ನಿವೇಶನ ಹಕ್ಕುಪತ್ರ ನೀಡಿದ ಕಾರಣದಿಂದ ಸ್ಥಳಾಂತರಕ್ಕೆ ತೊಂದರೆಯಾಗಿದೆ. ಹಕ್ಕುಪತ್ರ ನೀಡುವಲ್ಲಿ ವಿಳಂಬವಾದ ಕಾರಣ ಹಣವನ್ನು ಬೇರೆ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಇದರಿಂದ ಮನೆ ನಿರ್ವಿುಸಿಕೊಳ್ಳಲು ಹಣದ ಸಮಸ್ಯೆಯಾಗಿದೆ. ಕೆಲವರಿಗೆ ಇನ್ನೂ ಪರಿಹಾರ ಮತ್ತು ಹಕ್ಕುಪತ್ರ ನೀಡಬೇಕಿದೆ. ದೇವಸ್ಥಾನಗಳಿಗೆ ಪರಿಹಾರ ಘೊಷಣೆಯಾಗಬೇಕಿದೆ. ಪುನರ್ವಸತಿ ಗ್ರಾಮಗಳಲ್ಲಿ ಇನ್ನೂ ಕೆಲ ಮೂಲಸೌಲಭ್ಯ ಕಲ್ಪಿಸಬೇಕಿದೆ. ಹೀಗಾಗಿ ಸ್ಥಳಾಂತರಕ್ಕೆ ತೊಂದರೆಯಾಗಿದೆ.

    – ಚಂದ್ರಶೇಖರ ಶಿವಾಚಾರ್ಯರು, ಗುಮ್ಮಗೋಳ

    – ನಾಗರಾಜ ಮತ್ತೂರ, ಬಿದರಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts