More

    ಮುದ್ದೇಬಿಹಾಳ ಕೆಬಿಎಂಪಿಎಸ್ ಶಾಲೆಗೆ ಅನುದಾನ ಒದಗಿಸಲು ಶಾಸಕರಿಂದ ಭರವಸೆ

    ಮುದ್ದೇಬಿಹಾಳ: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಜೀವನದಲ್ಲಿ ಬರುವ ಎಲ್ಲ ಪರೀಕ್ಷೆ ಎದುರಿಸುವ ಸಾಮರ್ಥ್ಯ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

    ಇಲ್ಲಿನ ಸರ್ಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ (ಕೆಬಿಎಂಪಿಎಸ್) ಶುಕ್ರವಾರ ಏರ್ಪಡಿಸಿದ್ದ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಮಕ್ಕಳಿಗೆ ಬಾಲ್ಯದಲ್ಲೇ ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿಯುವವರು ಭಾಗ್ಯವಂತರಾಗಿದ್ದು ಅವರನ್ನು ಯಾರಿಗೂ ಕಡಿಮೆ ಇಲ್ಲದವರಂತೆ ರೂಪಿಸುವ ಹೊಣೆ ಶಿಕ್ಷಕರದ್ದಾಗಿರುತ್ತದೆ. ಶತಮಾನ ಕಂಡಿರುವ ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ಸೂಚಿಸಿರುವ ಶಾಸಕ ಸಿ.ಎಸ್.ನಾಡಗೌಡರು ತಾವು ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಿಂದ 80 ಲಕ್ಷದಿಂದ 1.20 ಕೋಟಿವರೆಗೆ ಅನುದಾನ ಒದಗಿಸಲು ಸಿದ್ಧರಿದ್ದಾರೆ. ಅದಕ್ಕಾಗಿ ಕ್ರಿಯಾಯೋಜನೆ ತಯಾರಿಸುವಂತೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದರು.

    ಸಾನಿಧ್ಯ ವಹಿಸಿದ್ದ ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಮಕ್ಕಳ ಬಿಳಿ ಹಾಳೆಯಂತಿರುವ ಮನಸ್ಸಿನಲ್ಲಿ ಅಕ್ಷರದ ಜ್ಞಾನ ಬಿತ್ತುವ ಗುರುಗಳನ್ನು ಶಿಷ್ಯಬಳಗ ಹೃದಯದಲ್ಲಿಟ್ಟು ಪೂಜಿಸುವಂತಾಗಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಗುರುಗಳು ಹಾಗೂ ಪಾಲಕರಿಗೆ ಕೀರ್ತಿ ತರುವಂಥವರಾಗಬೇಕು ಎಂದರು.

    ಮುಖ್ಯಾಧ್ಯಾಪಕಿ ರುಕ್ಮಿಣಿ ಗೋರ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಂಕಿತಾ ಸಂಕನಾಳ, ರೇಖಾ ಹೂಗಾರ, ಪೂರ್ಣಿಮಾ ಗೋನಾಳ, ಶಿಕ್ಷಕರಾದ ಚಿನ್ನಮ್ಮ ಬಿದರಿ, ಹಾರುನ್‌ರಷೀದ್ ಮೇತ್ರಿ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿಯರಾದ ವಿಜಯಲಕ್ಷ್ಮೀ ಮಾಲಿಪಾಟೀಲ, ಶಾಂತಾಬಾಯಿ ಪಣೇದಕಟ್ಟಿ ಅವರು ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಸಾಧಕ ವಿದ್ಯಾರ್ಥಿಗಳಿಗೆ ಮೆಡಲ್ ಹಾಕಿ ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು.

    ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ- ತಾಲೂಕು ಪ್ರೌಢಶಾಲೆ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಸ್.ಕವಡಿಮಟ್ಟಿ, ಸಿಆರ್‌ಪಿ ಜಿ.ಎಚ್.ಚವ್ಹಾಣ, ಬಿಆರ್‌ಪಿ ಕಾಶಿನಾಥ ಸಜ್ಜನ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮಹಾದೇವಿ ವಾಲಿ, ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಂ.ನದಾಫ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮೀ ಕುಂಬಾರ ಇದ್ದರು.
    ಶಿಕ್ಷಕಿ ಸುಜಾತಾ ಕಡಿ ಸ್ವಾಗತಿಸಿದರು. ಶಿಕ್ಷಕಿ ಆಯೇಷಾ ನದಾಫ್ ನಿರೂಪಿಸಿದರು. ಶಿಕ್ಷಕಿ ಮೀನಾಕ್ಷಿ ಸಜ್ಜನ ವಂದಿಸಿದರು. ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts