More

    ಮುಂದುವರಿದ ರೈತ ಸೇನಾ ಧರಣಿ

    ಧಾರವಾಡ: ನಗರದಲ್ಲಿರುವ ನೀರಾವರಿ ನಿಗಮದ ಕಚೇರಿಯನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸಕೂಡದು, ಅವ್ಯವಹಾರ ಎಸಗಿರುವ ನಿಗಮದ ಮುಖ್ಯ ಆಡಳಿತಾಧಿಕಾರಿ ಶಶಿಧರ ಬಗಲಿಯನ್ನು ವಜಾಗೊಳಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ರೈತರು ನಿಗಮದ ಕಚೇರಿ ಎದುರು ಶುಕ್ರವಾರ ಆರಂಭಿಸಿದ ಅಹೋರಾತ್ರಿ ಧರಣಿ ಶನಿವಾರ 2ನೇ ದಿನ ಪೂರೈಸಿತು.

    ಬೆಂಗಳೂರಿನಲ್ಲಿರುವ 9 ನಿಗಮ- ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಿಸಿ ಸರ್ಕಾರ ಆದೇಶಿಸಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅನಸರಿಸಲಾಗುತ್ತಿದೆ. ಆದರೆ, ವಿರೋಧದ ನಡುವೆಯೇ ಇಲ್ಲಿನ ಶ್ರೀನಗರದಲ್ಲಿರುವ ನೀರಾವರಿ ನಿಗಮದ ಕಚೇರಿಯನ್ನು ಸೆ. 14ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ. ಅದು ಸಲ್ಲದು, ನಿಗಮ ಧಾರವಾಡದಲ್ಲೇ ಕಾರ್ಯನಿರ್ವಹಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಮಟ್ಟದ ಇಲಾಖೆಗಳನ್ನು ಈ ಭಾಗದಲ್ಲಿ ಶೀಘ್ರ ಕಾರ್ಯಾರಂಭಿಸುವಂತೆ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಸೊಬರದಮಠ ಆಗ್ರಹಿಸಿದರು.

    ಮಲ್ಲಣ್ಣ ಅಲೆಕಾರ, ಗುರು ರಾಯನಗೌಡರ, ಚಿದಾನಂದ ಹುಬ್ಬಳ್ಳಿ, ಸೋಮಶೇಖರ ಶಂಕರದೇವರಮಠ, ಜಗದೀಶ ಸವಣೂರ, ಸಿಕಂದರ ಬಾವಾಖಾನ, ನಿಂಗವ್ವ ಬೇಲೇರಿ, ಹೇಮಾ ಗಾಳಿ, ಶಾಂತವ್ವ ಬಾಳಿ, ಗಂಗವ್ವ ಬೆಲೇರಿ, ತುಳಸವ್ವ ಯರಗಟ್ಟಿ, ಇತರರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

    ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ

    ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಶಶಿಧರ ಬಗಲಿ ಅವರನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ. ಹುದ್ದೆಗೆ ವರ್ಗಾವಣೆ ಮಾಡಿದರೂ ಅಧಿಕಾರ ವಹಿಸಿಕೊಳ್ಳದೆ ಇಲ್ಲೇ ಮುಂದುವರಿದಿದ್ದಾರೆ. ಕಚೇರಿಯ ಬಾಡಿಗೆ ವಿಚಾರದಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕಾಫಿ ಬೋರ್ಡ್ ನಲ್ಲಿರುವ ನಿಗಮದ ಮುಖ್ಯ ಕಚೇರಿಯ ಮಾಸಿಕ ಬಾಡಿಗೆ 20 ಲಕ್ಷ ರೂ., 3 ಲಕ್ಷ ರೂ. ನಿರ್ವಹಣೆಯ ಮಾಹಿತಿ ನೀಡಿಲ್ಲ. ನಗರದಲ್ಲಿರುವ ಕಚೇರಿಗೆ ಜಾಗದ ಕೊರತೆ ಇದೆ ಎಂದು ಬೆಳಗಾವಿಗೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಬೆಳಗಾವಿ ಸುವರ್ಣ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಿದರೂ ಅಲ್ಲಿ ನವೀಕರಣಕ್ಕೆ ಹಣ ಖರ್ಚು ಮಾಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಆದಾಗ್ಯೂ ಬೆಳಗಾವಿ ಜಿ.ಪಂ.ನಿಂದ 90 ಲಕ್ಷ ರೂ. ನಿಗದಿಪಡಿಸಿ 50 ಲಕ್ಷ ರೂ. ಮಂಜೂರು ಮಾಡಿಸಿಕೊಂಡಿದ್ದಾರೆ. ಇದಕ್ಕೆ ನಿಗಮದ ಎಂ.ಡಿ. ಮಲ್ಲಿಕಾರ್ಜುನ ಗುಂಗೆ ಸಾಥ್ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದುಂದುವೆಚ್ಚ ಮಾಡುವವರ ವಿರುದ್ಧ ಧಿಕ್ಕಾರ ಕೂಗಿದರು. ಇಬ್ಬರೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts