More

    ಮುಂಡಗೋಡಿಗೆ ಅಪ್ಪಳಿಸಿದ ಕರೊನಾ

    ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ 33 ಜನರಿಗೆ ಕೋವಿಡ್ ದೃಢವಾಗಿದೆ. ಮುಂಡಗೋಡಿನ 13, ಕಾರವಾರದ 10, ದಾಂಡೇಲಿ 13, ಹೊನ್ನಾವರ ಹಾಗೂ ಶಿರಸಿಯ ತಲಾ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 545 ಕ್ಕೆ ತಲುಪಿದೆ.

    ಬಸವನ ಬೀದಿಯ ಸೋಂಕು: ಮುಂಡಗೋಡಿನಲ್ಲಿ ಬಸವನಬೀದಿಯ ವ್ಯಾಪಾರಸ್ಥರೊಬ್ಬರು(ಪಿ-23158) ಹಾಗೂ ಅವರ ಪುತ್ರಿಗೆ ಜು.5 ರಂದು ಸೋಂಕು ಖಚಿತವಾಗಿತ್ತು. ಅವರ ಸಂಪರ್ಕಕ್ಕೆ ಬಂದ ಒಟ್ಟು 10 ಜನರಿಗೆ ಶುಕ್ರವಾರ ಮಹಾಮಾರಿ ದೃಢಪಟ್ಟಿದೆ. ಅದರಲ್ಲಿ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದ್ದಾರೆ. ಮಂಗಳೂರಿನಿಂದ ವಾಪಸಾಗಿದ್ದ 22 ವರ್ಷದ ಮಹಿಳೆಗೆ ಹಾಗೂ ಬೆಂಗಳೂರಿನಿಂದ ವಾಪಸಾದ 12 ವರ್ಷದ ಬಾಲಕನಲ್ಲಿ ಸೋಂಕು ಕಂಡುಬಂದಿದೆ.

    ಗರ್ಭಿಣಿ ಸಂಪರ್ಕ: ದಾಂಡೇಲಿಯಲ್ಲಿ ಜು. 5 ರಂದು ಸೋಂಕು ಪತ್ತೆಯಾದ 25 ವರ್ಷದ ಗರ್ಭಿಣಿ(ಪಿ-23163) ಸಂಪರ್ಕಕ್ಕೆ ಬಂದ 82 ವರ್ಷದ ವೃದ್ಧೆ, 3 ವರ್ಷದ ಬಾಲಕ ಸೇರಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಗರ್ಭಿಣಿ ಪತಿ ಇಎಸ್​ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿತ್ತು. ಹೊನ್ನಾವರದಲ್ಲಿ 80 ವರ್ಷದ ವೃದ್ಧನಿಗೆ, ಶಿರಸಿಯಲ್ಲಿ ಆರೋಗ್ಯ ಇಲಾಖೆಯ 28 ವರ್ಷದ ಮಹಿಳಾ ಸಿಬ್ಬಂದಿಗೆ ಸೋಂಕ ಇರುವುದು ಕಂಡು ಬಂದಿದೆ.

    ಆರೋಗ್ಯ ಸಿಬ್ಬಂದಿಗೆ ಕಂಠಕ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ವಿಷಯವನ್ನು ಮುಚ್ಚಿಟ್ಟು ಕುಟುಂಬದ ಸದಸ್ಯರು ವೃದ್ಧೆಯೊಬ್ಬಳನ್ನು ಇಲ್ಲಿನ ಕ್ರಿಮ್ಸ್​ಗೆ ದಾಖಲಿಸಿದ್ದು, ಅನಾಹುತಕ್ಕೆ ಕಾರಣವಾಗಿದೆ. ಕಾಮಾಲೆ, ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಗೆ ಕರೊನಾ ಕೂಡ ದೃಢವಾಗಿತ್ತು. ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

    ಆಕೆಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಇಬ್ಬರು ನೌಕರರಿಗೆ ಗುರುವಾರ, 25 ವರ್ಷದ ಇನ್ನೊಬ್ಬ ಮಹಿಳಾ ಸಿಬ್ಬಂದಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ಇನ್ನೂ ಹಲವರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಎಂಆರ್​ಐ ಸ್ಕ್ಯಾನಿಂಗ್, ಡಯಾಲಿಸಿಸ್, ಸೇರಿ ವಿವಿಧ ವಿಭಾಗಗಳನ್ನು ಬಂದ್ ಮಾಡಲಾಗಿದೆ.

    ತಾಲೂಕಿನ ಮಲ್ಲಾಪುರ ಟೌನ್​ಶಿಪ್​ನಲ್ಲಿದ್ದ ಒಬ್ಬರಿಗೆ ಶಿರವಾಡದ ಒಬ್ಬರು ಸೇರಿ ಇನ್ನೂ ಏಳು ಜನರ ಸಂಚಾರದ ವಿವರ ಇನ್ನಷ್ಟೇ ತಿಳಿಯಬೇಕಿದೆ. ಯುರೋಪ್​ನಿಂದ ವಾಪಸಾಗಿ ಹೋಟೆಲ್ ಕ್ವಾರಂಟೈನ್​ನಲ್ಲಿದ್ದ 28 ವರ್ಷದ ವ್ಯಕ್ತಿಗೆ, 37 ವರ್ಷದ ವ್ಯಕ್ತಿಗೆ ಮಂಗಳೂರಿನಿಂದ ವಾಪಸಾಗಿದ್ದ 45 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

    ಗ್ರಾಮೀಣ ಸಾರಿಗೆ ಬಸ್​ಗಳು ಬಂದ್
    ಮಳೆ, ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಜನ ಸಂಚಾರ ವಿರಳವಾಗಿದ್ದು, ಎನ್​ಡಬ್ಲ್ಯುಕೆಆರ್​ಟಿಸಿ ಕೆಲವು ಗ್ರಾಮೀಣ ಸಾರಿಗೆ ಬಸ್​ಗಳನ್ನು ಬಂದ್ ಮಾಡಿದೆ. ಶಿರಸಿಯಲ್ಲಿ ಜು.8 ರಿಂದ ಎಲ್ಲ ಗ್ರಾಮೀಣ ಸಾರಿಗೆಗಳನ್ನು ಬಂದ್ ಮಾಡಲಾಗಿದೆ. ಜನರ ಲಭ್ಯತೆಯ ಆಧಾರದ ಮೇಲೆ ಕಾರವಾರ, ಹುಬ್ಬಳ್ಳಿ, ಕುಮಟಾ ಮುಂತಾದ ದೂರದೂರಿನ ಬಸ್​ಗಳನ್ನು ಮಾತ್ರ ಬಿಡಲಾಗುತ್ತಿದೆ. ಕಾರವಾರದಲ್ಲಿ ಕೆಲವು ಗ್ರಾಮಗಳ ಬಸ್​ಗಳನ್ನು ಬಂದ್ ಮಾಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಬಸ್ ಬಂದರೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಬಸ್​ಗಳಿಗೆ ಹತ್ತುವ ಜನರ ಸಂಖ್ಯೆಯೂ ಅತಿ ಕಡಿಮೆ ಇದೆ ಇದರಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಎನ್​ಡಬ್ಲ್ಯುಕೆಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಅಂತ್ಯಸಂಸ್ಕಾರಕ್ಕೆ ವಿರೋಧ
    ಕರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ ನಂತರವೂ ನಗರದಲ್ಲಿ ಸೋಂಕಿತ ಮೃತರ ಅಂತ್ಯಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಎರಡು ದಿನಗಳ ಹಿಂದೆ ಕರೊನಾದಿಂದ ಮೃತಪಟ್ಟ ಶಿರಸಿಯ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ 70 ಜನರ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುರುವಾರ ಮೃತಪಟ್ಟ ವೃದ್ಧೆಯ ಅಂತ್ಯಸಂಸ್ಕಾರವನ್ನು ನಗರದ ಹೈಚರ್ಚ್ ಬಳಿಯ ಸ್ಮಶಾನದಲ್ಲಿ ಮಾಡುವುದಕ್ಕೆ ಸ್ಥಳೀಯರು ಮತ್ತೆ ಆಕ್ಷೇಪಿಸಿದರು. ಶುಕ್ರವಾರ ನಗರಸಭೆಯ ಸರ್ವ ಪಕ್ಷಗಳ ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿ, ಜನವಸತಿ ಪ್ರದೇಶಗಳಲ್ಲಿ ಅಂತ್ಯಕ್ರಿಯೆ ಮಾಡದಂತೆ, ಕರೊನಾ ಸೋಂಕಿತರ ಅಂತ್ಯಕ್ರಿಯೆಗೆ ಅರಣ್ಯ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳ ಗುರುತಿಸುವಂತೆ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಮನವಿ ಸ್ವೀಕರಿಸಿದರು.

    ಸರ್ಕಾರದ ನಿಯಮಾವಳಿಯಂತೆಯೇ ಹೈಚರ್ಚ್​ನಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಕಳೆಬರ ಸಂಪೂರ್ಣ ಸುಟ್ಟ ಮೇಲೆ ಬೂದಿಯನ್ನು ಸ್ವಚ್ಛ ಮಾಡಿ, ಆ ಪ್ರದೇಶವನ್ನು ಸಂಪೂರ್ಣ ನ್ಯಾನಿಟೈಸ್ ಮಾಡಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದಿಲ್ಲ.
    ರಾಮಚಂದ್ರ ಕಟ್ಟಿ ತಹಸೀಲ್ದಾರ್, ಕಾರವಾರ

    ಕರೊನಾದಿಂದ ಮೃತಪಟ್ಟವರನ್ನು ಜನವಸತಿ ಪ್ರದೇಶದಲ್ಲಿ ಸುಡುತ್ತಿರುವುದರಿಂದ ಸಾರ್ವಜನಿಕರು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತ ಜನರಲ್ಲಿ ಅರಿವು ಮೂಡಿಸಿ ತಿಳಿ ಹೇಳುವ ಬದಲು. ಪ್ರಕರಣ ದಾಖಲಿಸಿ ಬೆದರಿಸುವುದು ಸರಿಯಲ್ಲ.
    ಸತೀಶ ಸೈಲ್ ಮಾಜಿ ಶಾಸಕ

    ಗಂಭೀರವಾಗಿ ಪರಿಗಣಿಸಿ
    ಮುಂಡಗೋಡ:
    ತಾಲೂಕಿನಲ್ಲಿ ಒಟ್ಟು 36 ಕರೊನಾ ಪ್ರಕರಣಗಳು ಪತ್ತೆಯಾಗಿದೆ. 20 ಜನ ಸೋಂಕಿತರಿದ್ದು, 16 ಮಂದಿ ಗುಣಮುಖರಾಗಿದ್ದಾರೆ ಎಂದು ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆ ವಹಿಸಬೇಕು. ಬ್ಯಾಂಕ್​ಗಳಲ್ಲಿ, ಹೋಟೆಲ್​ಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ಮತ್ತು ಇನ್ನಿತರ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಈ ರೀತಿ ಮೈಮರೆತರೆ ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಬಂದವರೆಲ್ಲರ ಕರೊನಾ ವರದಿ ಪಾಸಿಟಿವ್ ಬಂದಿದೆ. ಆದ ಕಾರಣ ಆಶಾ ಕಾರ್ಯಕರ್ತೆಯರು ಅವರ ಮಾಹಿತಿ ಪಡೆಯುತ್ತಿದ್ದಾರೆ. ಅಂತರ ಜಿಲ್ಲೆಯಿಂದ ಬರುವವರನ್ನು ಹೋಮ್ ಕ್ವಾರಂಟೈನ್ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೊವೀಡ್ ಹೆಲ್ತ್ ಕೇರ್ ಸೆಂಟರ್​ನಲ್ಲಿ 40 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಕರೊನಾ ಗುಣ-ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸ್ವಯಂ-ಪ್ರೇರಣೆಯಿಂದ ತಾಲೂಕು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಬೇಕು ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ಇತ್ತೀಚೆಗೆ ಸೀಲ್​ಡೌನ್ ಆದ ಪಟ್ಟಣದ ಬಸವನಬೀದಿಯಲ್ಲಿರುವ 2 ಅಂಗಡಿಗಳಿಗೆ ಹೋದವರು ತಮ್ಮ ಸ್ವ-ಇಚ್ಛೆಯಿಂದ ಬಂದು ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಗಬೇಕು ಎಂದು ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts