More

    ಮುಂಗಾರಿನಿಂದ ಬಂಡವಾಳ ಮಣ್ಣುಪಾಲು

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಮಲೆನಾಡು ಭಾಗದ ತೋಟಗಾರಿಕಾ ಹಾಗೂ ಬಯಲುಸೀಮೆ ಭಾಗದ ತರಕಾರಿ ಬೆಳೆಗಳಿಗೆ ಕೊಳೆರೋಗ ಆವರಿಸಿ ಕೃಷಿಕರೂ ಈ ವರ್ಷವೂ ನಿರೀಕ್ಷಿತ ಆದಾಯ ಕಾಣದಂತಾಗಿದೆ.

    ಕಾಫಿ ನಾಡಿನಲ್ಲಿ ಪ್ರತಿವರ್ಷ ಮುಂಗಾರು ಆರ್ಭಟದಿಂದ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ. ನದಿ, ತೊರೆಗಳು, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಉಕ್ಕಿ ಅನಾಹುತಗಳನ್ನೇ ಸೃಷ್ಟಿಸುತ್ತಿವೆ. ಕೆಲವು ಗ್ರಾಮಗಳ ಸಂಪರ್ಕವೇ ಕಡಿತವಾಗಿದೆ. ಕಳೆದೆರಡು ವರ್ಷಗಳಲ್ಲಿ ಮಲೆನಾಡಿನ ಕೆಲವು ಭಾಗಗಳಲ್ಲಿ ಭಾರಿ ಭೂ ಕುಸಿತದಿಂದ ಕಾಫಿ, ಅಡಕೆ ತೋಟಗಳು ಕೊಚ್ಚಿಹೋಗಿ ರೈತರು, ಬೆಳೆಗಾರರು ಬದುಕು ದುಸ್ತರವಾಗಿತ್ತು. ಗುಡ್ಡಗಾಡು ಅಂಚಿನ ಮನೆಗಳಂತೂ ಮಣ್ಣುಪಾಲಾಗಿದ್ದವು.

    ಈ ವರ್ಷ ಕೂಡ ಕಳೆದ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಲೆನಾಡಿನಲ್ಲಿ ಕಾಫಿ, ಅಡಕೆ, ಕಾಳುಮೆಣಸು ತೋಟಗಳು, ಬಯಲು ಭಾಗದಲ್ಲಿ ತರಕಾರಿ ಬೆಳೆಗಳು ನೀರುಪಾಲಾಗಿ ರೈತರು, ಬೆಳೆಗಾರರು ತತ್ತರಿಸಿಹೋಗಿದ್ದಾರೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ಕಾಫಿ ಬೆಳೆ ನೆಲಕಚ್ಚಿದೆ. ನೂರಾರು ಎಕರೆ ಅಡಕೆ, ಕಾಳುಮೆಣಸು ಬೆಳೆಗೆ ಕೊಳೆರೋಗ ಆವರಿಸಿ ಕೃಷಿಕರು ಕಂಗಾಲಾಗಿದ್ದಾರೆ. ಭೂ ಕುಸಿತದಿಂದಲೂ ಕೆಲವು ಕಾಫಿ ತೋಟಗಳು ಹಾನಿಗೀಡಾಗಿವೆ.

    ಚಿಕ್ಕಮಗಳೂರು ತಾಲೂಕಿನ ಹಂಪಾಪುರ, ಬೀಕನಹಳ್ಳಿ, ಲಕ್ಯಾ, ಹಿರೇಗೌಜ, ಚಿಕ್ಕಗೌಜ, ಕಣಿವೆಹಳ್ಳಿ, ಕ್ಯಾತನಬೀಡು, ದೇವರಹಳ್ಳಿ, ಕಳಸಾಪುರ, ಬೆಳವಾಡಿ, ಸಖರಾಯಪಟ್ಟಣ, ಬಿಳೇಕಲ್ಲಳ್ಳಿ ಮತ್ತಿತರ ಗ್ರಾಮಗಳಲ್ಲಿ ಬೀನ್ಸ್, ಬಟಾಣಿ, ಮೆಣಸಿನಕಾಯಿ, ಸೌತೆಕಾಯಿ, ಬಣಸೌತೆ, ಸುಲಿಯೋಕಾಳು, ಎಲೆಕೋಸು, ಹೂಕೋಸು, ಬಿಟ್ರೂಟ್, ಕಡೂರು, ತರೀಕೆರೆ ಭಾಗದಲ್ಲಿ ಈರುಳ್ಳಿ ಹೆಚ್ಚು ಹಾನಿಗೀಡಾಗಿವೆ. ಬಹುತೇಕ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಬೆಲೆ ಇದೆ. ದುಬಾರಿಯಾಗಿರುವ ಬಟಾಣಿಯಂತೂ ಫಸಲು ರೈತರ ಕೈಗೆಟುಕಲು ಇನ್ನೇನು ತಿಂಗಳಿರುವಾಗ ಮಳೆ ಸುರಿಯುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೆಲವರ ಹೊಲದಲ್ಲಂತೂ ಗಿಡಗಳಲ್ಲಿ ಕಾಯಿಗಳೇ ಇಲ್ಲ.

    ಮಣ್ಣಲ್ಲಿ ಕರಗಿದ ಆಲೂಗಡ್ಡೆ: ಚಿಕ್ಕಮಗಳೂರು ತಾಲೂಕಿನ ಬಯಲು ಸೀಮೆ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದು ಬಹುತೇಕ ಹೊಲಗಳಲ್ಲಿ ಗಡ್ಡೆಗಟ್ಟುವ ಮುನ್ನವೇ ಕರಗಿಹೋಗಿವೆ. ಮತ್ತೆ ಕೆಲವು ಹೊಲಗಳಲ್ಲಿ ಗೋಲಿಗಾತ್ರದ ಗಡ್ಡೆ ಕಾಣಿಸಿಕೊಂಡು ಹಾಕಿದ ಬಂಡವಾಳವಾರದೂ ಬರಬಹುದು ಎಂಬ ಭರವಸೆ ಮೂಡಿಸಿದೆ. ಆದರೆ ಮಳೆ ಮುಂದುವರಿದರೆ ಇರುವ ಅಲ್ಪಸ್ವಲ್ಪ ಬೆಳೆಯೂ ಮಣ್ಣುಪಾಲಾಗುವುದು ನಿಶ್ಚಿತ. ಬಿತ್ತನೆ ಬೀಜ, ರಸಗೊಬ್ಬರ, ಔಷಧ, ಕೂಲಿ ಕಾರ್ವಿುಕರ ವೆಚ್ಚ ಮಿತಿಮೀರಿದೆ. ಈಗ ಹಾಕಿರುವ ಬಂಡವಾಳ ಕೂಡ ಸಿಗದಂತಾಗಿದೆ. ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.

    ಬೆಳೆ ಇಲ್ಲ ಬರೀ ಕಳೆ: ಕೆಂಪನಹಳ್ಳಿ-ಚಿಕ್ಕಗೌಜ ರಸ್ತೆಯಲ್ಲಿ ಸಾಗುತ್ತಿದ್ದರೆ ಬಹಳಷ್ಟು ಹೊಲಗಳಲ್ಲಿ ತರಕಾರಿ ಬೆಳೆಗಿಂತ ಕಳೆಯೇ ಹೆಚ್ಚು ಬಲವಾಗಿ ಬೆಳೆದಿದೆ. ಹೊಲಗಳನ್ನು ಹಾಳುಬಿಟ್ಟಂತೆ ಕಾಣುತ್ತವೆ. ಕಳೆದೆರಡು ದಿನದಿಂದ ಮಳೆ ಕೊಂಚ ಬಿಡುವು ನೀಡಿ ಆಗಾಗ್ಗೆ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಭಾನುವಾರ ಬೆಳಗ್ಗೆ ಮತ್ತೆ ಮಳೆ ಸುರಿದು ರೈತರನ್ನು ಆತಂಕಕ್ಕೆ ತಳ್ಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts