More

    ಮೀಸಲಾತಿ ಕೇಳುವುದು ಸ್ವಾಮೀಜಿಗಳಿಗೆ ಭೂಷಣವಲ್ಲ

    ಹಳೇಬೀಡು: ಸಾರ್ವಜನಿಕ ವೇದಿಕೆಯಲ್ಲಿ ವೀರಶೈವ-ಲಿಂಗಾಯತ ಜಾತಿಯಲ್ಲಿರುವ ಒಳಪಂಗಡಗಳಿಗೆ ಮೀಸಲಾತಿ ಕೇಳುವುದು, ಇಂತಹವರನ್ನೇ ಮಂತ್ರಿ ಮಾಡಿ ಎನ್ನುವುದು ಸ್ವಾಮೀಜಿಗಳಿಗೆ ಭೂಷಣವಲ್ಲ. ಅದು ಬಸವಣ್ಣನ ಮಾನವಧರ್ಮದ ಆಶಯಕ್ಕೆ ವಿರುದ್ಧವಾದುದು ಎಂದು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

    ತರಳಬಾಳು ಹುಣ್ಣಿಮೆ ಮಹೋತ್ಸವದ 9ನೇ ದಿನದ ಸಂಭ್ರಮದಲ್ಲಿ ‘ಪ್ರಜಾಪ್ರಭುತ್ವದ ಸುಧಾರಣೆಗೆ ಶರಣರ ಚಿಂತನೆಗಳು’ ವಿಷಯ ಕುರಿತು ಮಾತನಾಡಿದ ಅವರು, ಸಮಾನತೆ ಹಾಗೂ ವಿಶ್ವಬಂಧುತ್ವವು ಶರಣರ ಚಿಂತನೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಬಸವಾದಿ ಪ್ರಮುಖರು ಸಮಾಜದಲ್ಲಿನ ಅಸಮಾನತೆ, ಮೇಲು-ಕೀಳುಗಳ ವಿರುದ್ಧ ಕಲ್ಯಾಣ ಚಳವಳಿ ನಡೆಸಿ ಸುಧಾರಣೆ ತಂದವರು. ಅವರ ತತ್ವಗಳನ್ನು ಪಾಲಿಸುತ್ತೇವೆಂದು ಹೇಳಿಕೊಂಡು ಪೀಠದಲ್ಲಿ ಕುಳಿತವರು ಜಾತಿಯನ್ನು ಸೂಚಿಸಿ ರಾಜಕಾರಣದ ಮಾತನ್ನು ಆಡಬಾರದು. ಮಾನವ ಧರ್ಮದ ಪರಿಕಲ್ಪನೆಗೆ ಬದ್ಧರಾಗಿರಬೇಕು. ಸಾಮಾಜಿಕ ಸಮಸ್ಯೆಗಳನ್ನು ರಾಜಕಾರಣದ ಸೋಂಕಿಲ್ಲದೆ ಬಗೆಹರಿಸುತ್ತಿರುವ ತರಳಬಾಳು ಶ್ರೀಗಳು ಎಲ್ಲ ಮಠಾಧಿಪತಿಗಳಿಗೆ ಮಾದರಿಯಾಗಿದ್ದಾರೆ ಎಂದರು.

    ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನನ್ನನ್ನೂ ಒಳಗೊಂಡು ರಾಜಕಾರಣಿಗಳ ಪಾಲ್ಗೊಳ್ಳುವಿಗೆ ತುಸು ಹೆಚ್ಚಾಯಿತೇನೊ ಎನಿಸುತ್ತಿದೆ. ಎಲ್ಲ ಜನಪ್ರತಿನಿಧಿಗಳನ್ನು ಕರೆಸಿ, ಅವರೆಲ್ಲರಿಂದಲೂ ಭಾಷಣ ಮಾಡಿಸುವ ಬದಲು ಗೌರವಸೂಚಕವಾಗಿ ಕೂರಿಸಿ ವಿದ್ವಾಂಸರ ಉಪನ್ಯಾಸಗಳನ್ನು ಕೇಳುವಂತೆ ಮಾಡಬೇಕು. ಮುಂದಿನ ಹುಣ್ಣಿಮೆ ಉತ್ಸವದಲ್ಲಿ ಈ ಬಗ್ಗೆ ಸಿರಿಗೆರೆ ಶ್ರೀಗಳು ಉತ್ತಮ ನಿರ್ಧಾರ ತೆಳೆಯುತ್ತಾರೆ ಎಂಬ ನಂಬಿಕೆಯಿದೆ ಎಂದರು.

    ತಿಳಿವಳಿಕೆಗೆ ತಕ್ಕಂತೆ ನಡೆಯಬೇಕು
    ‘ತಿಳಿವಳಿಕೆ ಎಂದರೆ ಜ್ಞಾನ. ನಮ್ಮಲ್ಲಿ ಬಹಳಷ್ಟು ಜನ ಉತ್ತಮ ವಿಚಾರಗಳನ್ನು ತಿಳಿದವರಿದ್ದಾರೆ. ಆದರೆ, ಅದರಂತೆ ನಡೆದುಕೊಳ್ಳುವವರು ತುಂಬ ವಿರಳ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

    ತರಳಬಾಳು ಹುಣ್ಣಿಮೆಯ 9ನೇ ದಿನದ ಸಂಭ್ರಮದಲ್ಲಿ‘ನಡವಳಿಕೆ-ತಿಳಿವಳಿಕೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಬಸವಣ್ಣನವರ ವಚನಗಳನ್ನು ಕಂಠಪಾಠ ಮಾಡಿಕೊಂಡು ಸಂದರ್ಭಕ್ಕೆ ತಕ್ಕಂತೆ ಹೇಳಿ ಪಾಂಡಿತ್ಯ ಮೆರೆಯುವವರು, ಹುಸಿಯ ನುಡಿಯಲು ಬೇಡ ಎಂಬ ವಾಕ್ಯ ಹೇಳುವಾಗಲೇ ತಮಗೆ ಮೂರನೇ ತರಗತಿಯಲ್ಲೇ ಮುನ್ನೂರು ವಚನಗಳು ಕಂಠಪಾಠವಾಗಿತ್ತು ಎಂಬ ಸುಳ್ಳನ್ನು ಹೇಳುತ್ತಾರೆ. ತಿಳಿದವರ ನಡವಳಿಕೆಗಳೆಲ್ಲ ಸರಿಯಾಗಿರವುದು ತುಂಬ ಅಪರೂಪ ಎಂದರು.

    ಮಹೋತ್ಸವದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಸಿರಿಗೆರೆ ಶ್ರೀಗಳು, ಶಿಲ್ಪಕಲಾ ವೈಭವದ ಹಳೇಬೀಡು-ಬೇಲೂರು ದೇಗುಲಗಳಲ್ಲಿ ಎಲ್ಲಿಯೂ ಶಿಲ್ಪಿಯ ಹೆಸರಿಲ್ಲ. ಆದರೆ, ಈಗಿನ ಕೆಲ ಕಿಡಿಗೇಡಿಗಳು ಅಲ್ಲಲ್ಲಿ ಹೆಸರು ಬರೆದಿರುವುದು, ಕುಟ್ಟಿರುವುದನ್ನು ಕಂಡಾಗ ನಮ್ಮ ಸಂಸ್ಕೃತಿಗೆ ಘೋರ ಅನ್ಯಾಯವನ್ನು ಮಾಡುತ್ತಿದ್ದೇವೆ ಎಂಬ ಭಾವ ಮೂಡುತ್ತದೆ. ನಮ್ಮಿಂದ ಅಂತಹ ಕಲಾಕೃತಿಗಳನ್ನು ಕೆತ್ತಲು ಸಾಧ್ಯವಿಲ್ಲ, ಕನಿಷ್ಠ ಅದನ್ನು ಮೂಲರೂಪದಲ್ಲಿ ಉಳಿಸಿಕೊಳ್ಳುವ ಪಣ ತೊಡಬೇಕು ಎಂದು ಹೇಳಿದರು.

    ಹಳೇಬೀಡಿನಲ್ಲಿ ಮಹೋತ್ಸವ ಆಚರಿಸಬೇಕು ಎಂದು ನಿರ್ಧರಿಸಿದಾಗ ಎಲ್ಲರ ಮನದಲ್ಲಿ ಅಳುಕಿತ್ತು. ನಮಗೆ ಇಲ್ಲಿನ ಭಕ್ತರ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದುದ್ದರಿಂದಲೇ ಇಲ್ಲಿಯೇ ತರಳಬಾಳು ಹುಣ್ಣಿಮೆ ಮಾಡೋಣ ಎಂದು ಹೇಳಿದ್ದೆವು. ಗುರುವಿನ ಮನಸ್ಥಿತಿಯನ್ನು ಅರಿತ ಭಕ್ತರು ಅತ್ಯಂತ ಯಶಸ್ವಿಯಾಗಿ ಉತ್ಸವವನ್ನು ಆಯೋಜಿಸಿ ಸಂಪನ್ನಗೊಳಿಸಿದ್ದಾರೆ ಎಂದು ಹಾರೈಸಿದ ಸ್ವಾಮೀಜಿ, ಮುಂದಿನ ಹುಣ್ಣಿಮೆ ಮಹೋತ್ಸವವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯಲಿದೆ ಎಂದು ಘೋಷಿಸಿದರು.
    ಶಾಸಕ ಕೆ.ಎಸ್.ಲಿಂಗೇಶ್, ಮುಖಂಡರಾದ ಕೊರಟಗೆರೆ ಪ್ರಕಾಶ್, ಎಚ್.ಆರ್.ಕಾಂತರಾಜು, ಎಚ್.ಎಂ.ಕುಮಾರಸ್ವಾಮಿ, ಹುಲ್ಲಹಳ್ಳಿ ಸುರೇಶ್, ವಿನಾಯಕ್ ಸಿಂಧಿಗೆರೆ, ಅರೇಹಳ್ಳಿ ನಟರಾಜ್, ಉದ್ಯಮಿ ರಾಜಶೇಖರ್, ಯುವ ಕಾರ್ಯಕರ್ತರಾದ ರಮೇಶ್, ವಿನಯ್, ಚೇತನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts