More

    ಮೀನು ಮಾರಾಟದಿಂದ ಸಂಚಾರಕ್ಕೆ ಕಿರಿಕಿರಿ

    ರಟ್ಟಿಹಳ್ಳಿ: ಪಟ್ಟಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡೇ ಮೀನು ಮಾರಾಟ ಮಾಡುತ್ತಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ, ಪಟ್ಟಣ ಪಂಚಾಯಿತಿ ವತಿಯಿಂದ ಮೀನು ಮಾರಾಟಕ್ಕೆ ನಿಗದಿತ ಸ್ಥಳ ಗುರುತಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಸಾಗರ, ಉಡುಪಿ, ಕಾರವಾರ ಸೇರಿದಂತೆ ವಿವಿಧೆಡೆಯಿಂದ ಮೀನುಗಳನ್ನು ತಂದು ಇಲ್ಲಿನ ಮಾರಿಕಾಂಬಾ ವೃತ್ತದ ಬಳಿಯ ತುಮ್ಮಿನಕಟ್ಟೆ ರಸ್ತೆ, ಕಾರಂಜಿ ವೃತ್ತಕ್ಕೆ ಹೋಗುವ ದ್ವಿಮುಖ ರಸ್ತೆಗೆ ಹೊಂದಿಕೊಂಡು ಮಾರಾಟ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಕೋಟೆ ರಸ್ತೆಯಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೆಲವರು ಅಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾರಾಟಗಾರರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ.

    ಮೀನುಗಳನ್ನು ಖರೀದಿಸಲು ರಟ್ಟಿಹಳ್ಳಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಗ್ರಾಹಕರು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ರಸ್ತೆಯಲ್ಲಿ ನಿಲ್ಲುತ್ತಾರೆ. ರಸ್ತೆಯ ಪಕ್ಕದಲ್ಲಿಯೇ 3-4 ತಳ್ಳುವ ಗಾಡಿಗಳಲ್ಲಿ ಮೀನು ಮಾರಾಟ ಮಾಡಿದರೆ, ಕೆಲವರು ಬೈಕ್​ನಲ್ಲಿ ಇಟ್ಟುಕೊಂಡು ರಸ್ತೆಯಲ್ಲಿಯೇ ಮಾರಾಟ ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ನಿತ್ಯ ಕಿರಿಕಿರಿಯಾಗುತ್ತಿದೆ. ಸಾರ್ವಜನಿಕರು ಸಂಚರಿಸಲು ಹೆಣಗಾಡುವಂತಾಗಿದೆ. ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಸ್ಥಳೀಯಾಡಳಿತ ಕೂಡಲೆ ಮೀನು ಮಾರಾಟಗಾರರಿಗೆ ನಿರ್ದಿಷ್ಟ ಸ್ಥಳ ಗುರುತಿಸಿ ಅಲ್ಲೇ ಮಾರಾಟ ಮಾಡುವಂತೆ ಸೂಚಿಸಬೇಕು. ಸಾರ್ವಜನಿ ಕರಿಗೆ ಆಗುತ್ತಿರುವ ಸಂಚಾರ ಸಮಸ್ಯೆ ಪರಿಹರಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

    ಮೀನು ಮಾರಾಟಗಾರರಿಗೆ ಪಟ್ಟಣದಲ್ಲಿ ಪ್ರತ್ಯೇಕ ಸ್ಥಳ ನಿಗದಿ ಮಾಡಿ ಕಡ್ಡಾಯವಾಗಿ ಅಲ್ಲೇ ಮಾರಾಟ ಮಾಡಲು ಸೂಚಿಸಬೇಕು. ಅಂದಾಗ ವಾಹನ ಸವಾರರು ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗೆ ಮುಕ್ತಿ ದೊರೆತಂತಾಗುತ್ತದೆ.

    | ಯಲ್ಲಪ್ಪ ಮರಾಠೆ ಸ್ಥಳೀಯ ನಿವಾಸಿ

    ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೀನು ಮಾರಾಟ ಮಾಡುತ್ತಿರುವುದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದಿವೆ. ಮೀನು ಮಾರಾಟಗಾರರನ್ನು ಪಟ್ಟಣ ಪಂಚಾಯಿತಿಗೆ ಕರೆಯಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾರಾಟ ಮಾಡಲು ತಿಳಿಸಲಾಗುವುದು.

    | ರಾಜರಾಂ ಪವಾರ

    ರಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts