More

    ಮೀನುಗಾರರ ಧರಣಿ ಸದ್ಯಕ್ಕೆ ಬ್ರೇಕ್

    ಕಾರವಾರ: ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಮೀನುಗಾರರು ನಡೆಸಿದ್ದ ಧರಣಿಯನ್ನು ಜ.25 ರಿಂದ ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ. ಜ. 26 ರಿಂದ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಮೀನು ಮಾರುಕಟ್ಟೆಗಳು ತೆರೆಯುವ ಸಾಧ್ಯತೆ ಇದೆ.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜು ತಾಂಡೇಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಕಾಮಗಾರಿಗೆ ಕೋರ್ಟ್ ತಡೆ ನೀಡಿದೆ. ಆದರೆ, ಸರ್ಕಾರ ಸಂಪೂರ್ಣ ಯೋಜನೆಯನ್ನೇ ಬಂದ್ ಮಾಡಬೇಕು ಎಂಬುದು ನಮ್ಮ ಒತ್ತಾಯ. ಈ ನಿಟ್ಟಿನಲ್ಲಿ ಕಾನೂನು ಹಾಗೂ ಭಿನ್ನ ಸ್ವರೂಪದ ಹೋರಾಟಗಳು ಮುಂದುವರಿಯಲಿವೆ. ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ನಿಲ್ಲಿಸಲಿದ್ದೇವೆ ಎಂದರು.

    ಜ.25 ರಂದು ಬೆಳಗ್ಗೆ 11 ಗಂಟೆಗೆ ಹೈಕೋರ್ಟ್ ವಕೀಲ ಮೂರ್ತಿ ನಾಯ್ಕ ಅವರು ಜಿಲ್ಲಾಧಿಕಾರಿ ಕಚೇರಿಯ ಎದುರು ಮೀನುಗಾರರ ಸಭೆಯನ್ನುದ್ದೇಶಿಸಿ ಮಾತನಾಡುವರು. ಮಧ್ಯಾಹ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುವುದು. ಸಾಯಂಕಾಲ 5 ಗಂಟೆಯ ಹೊತ್ತಿಗೆಗೆ ಟ್ಯಾಗೋರ್ ಕಡಲ ತೀರದಲ್ಲಿ ಬೃಹತ್ ಸಭೆ ನಡೆಸಲಾಗುವುದು. ಅಲ್ಲಿ ನಮಗೆ ಕಾನೂನು ಸಲಹೆ, ಸಹಕಾರ ನೀಡಿದ ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್, ಹಾಗೂ ಹೈಕೋರ್ಟ್ ವಕೀಲ ಮೂರ್ತಿ ಡಿ.ನಾಯ್ಕ ಅವರನ್ನು ಸನ್ಮಾನಿಸಲಾಗುವುದು ಎಂದರು.

    ರಾಜಕೀಯ ಮಾಡಲ್ಲ: ಜನಪರ ಕಾರ್ಯಕ್ಕಾಗಿ ರಾಜಕೀಯ ಮರೆತು ಮೀನುಗಾರರ ಹೋರಾಟಕ್ಕೆ ಬಂದಿದ್ದೇನೆ. ಶಾಸಕಿ ರೂಪಾಲಿ ನಾಯ್ಕ ಅದನ್ನು ಅರಿಯಲಿ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದರು. ರೂಪಾಲಿ ನಾಯ್ಕ, ಮೀನುಗಾರರಿಗೆ ತೊಂದರೆಯಾಗದು ಎಂದು ಅಲ್ಲೆಲ್ಲೋ ಕುಳಿತು ಹೇಳುತ್ತಾರೆ. ರಾಜಕೀಯ ಆರೋಪ ಮಾಡುತ್ತಿದ್ದಾರೆ. ಮೀನುಗಾರರ ಎದುರಿಗೆ ಬರಲು ಭಯವೇಕೆ ಎಂದು ಪ್ರಶ್ನಿಸಿದರು. ಮೀನುಗಾರರ ಸಮಸ್ಯೆ ಬಗೆಹರಿಸುವ ಸಂಬಂಧ ರಾಜಕೀಯ ಬಿಟ್ಟು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿಯಾಗಿ ರ್ಚಚಿಸಿದ್ದೇನೆ. ಸಂಸದ ಅನಂತ ಕುಮಾರ ಹೆಗಡೆ ಅವರ ಜತೆಯೂ ಮಾತನಾಡಿದ್ದೇನೆ.

    ಸೈಲ್ ಸಹಕಾರ ಸ್ಮರಣೆ: ಪ್ರತಿಭಟನೆ ಹಾಗೂ ಕಾನೂನು ಹೋರಾಟದಲ್ಲಿ ಮಾಜಿ ಶಾಸಕ ಸತೀಶ ಸೈಲ್ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ರಾಜು ತಾಂಡೇಲ ಹೇಳಿದರು. ಕಾರವಾರ ಬಂದ್ ಸಂದರ್ಭದಲ್ಲಿ ಎಲ್ಲ ಸಂಘಟನೆಗಳನ್ನು ಸಂರ್ಪಸಿದ್ದರು. ಮುಖ್ಯವಾಗಿ ಹೈಕೋರ್ಟ್ ಮೆಟ್ಟಿಲೇರಲು ಸೈಲ್ ಅವರೇ ಕಾರಣ. ಕಾರವಾರ ಮೂಲದ ವಕೀಲ ಮೂರ್ತಿ ನಾಯ್ಕ ಅವರನ್ನು ಪರಿಚಯಿಸಿ ಹೋರಾಟಕ್ಕೆ ಪ್ರಾಥಮಿಕ ಜಯ ತಂದುಕೊಡುವಲ್ಲಿ ಯಶಸ್ವಿಯಾದರು ಎಂದರು.

    ಕಪ್ಪು ಪಟ್ಟಿ ಕಟ್ಟಿ ಪ್ರತಿಭಟನೆ: ಸಾಗರ ಮಾಲಾ ಯೋಜನೆ ಜಾರಿ ವಿರೋಧಿಸಿ ಜ. 26ರಂದು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ಹಾಗೂ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಸದಸ್ಯರು, ಜೈಲಿಗೆ ಕಳಿಸಿ ಅಥವಾ ಲಾಠಿ ಪ್ರಹಾರ ಮಾಡಿದರೂ ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಮೀನುಗಾರರ ಜತೆ ಚೆಲ್ಲಾಟ ಸರಿಯಲ್ಲ: ಮಾಜಿ ಶಾಸಕ ಸತೀಶ ಸೈಲ್ ತಾವೇ ತಡೆಯಾಜ್ಞೆ ತಂದಿದ್ದಾಗಿ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಕಾಮಗಾರಿ ಶಿಲಾನ್ಯಾಸ ಮಾಡುವಾಗ ಅಧ್ಯಕ್ಷತೆ ವಹಿಸಿದ್ದು ಯಾಕಾಗಿ? ಆಗಲೆ ಕಾಮಗಾರಿಯನ್ನು ನಿಲ್ಲಿಸಬಹುದಿತ್ತು. ಮೀನುಗಾರರ ಬದುಕಿನ ಜತೆ ಚೆಲ್ಲಾಟ ಆಡುವ ಇಂತಹ ಪ್ರವೃತ್ತಿಗೆ ಮೀನುಗಾರರು ಮಣೆ ಹಾಕಬಾರದು. ತಾವೇ ಮುಂಚೂಣಿಯಲ್ಲಿ ನಿಂತು ಉದ್ಘಾಟನೆ ಸಮಾರಂಭ ನೆರವೇರಿಸಿದ ಮಾಜಿ ಶಾಸಕರು ಈಗ ಅದೇ ಯೋಜನೆಗೆ ತಡೆಯಾಜ್ಞೆ ತಂದಿರುವುದಾಗಿ ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ರೂಪಾಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts