More

    ಮಾಸ್ಕ್ ಧರಿಸದೆ ಬಂದವರಿಗಿಲ್ಲ ತರಕಾರಿ!

    ಶಿಕಾರಿಪುರ: ಪಟ್ಟಣದ ಹೊಸಸಂತೆ ಮೈದಾನದಲ್ಲಿ ಮಾಸ್ಕ್ ಧರಿಸದೆ ತರಕಾರಿ ಖರೀದಿಗೆ ಬಂದವರನ್ನು ವಾಪಸ್ ಕಳುಹಿಸಲಾಯಿತು. ಜತೆಗೆ ಸಂಚಾರಿ ವ್ಯಾಪಾರಿಗಳು ಮಾಸ್ಕ್ ಧರಿಸದ ಗ್ರಾಹಕರಿಗೆ ತರಕಾರಿ ಮಾರಾಟ ಮಾಡದಂತೆ ಶಿಕಾರಿಪುರ ಪುರಸಭೆ ಅಧಿಕಾರಿಗಳು ಸೂಚಿಸಿದ್ದಾರೆ.

    ಹೊಸ ಸಂತೆ ಮೈದಾನದಲ್ಲಿ ಮೊದಲು ಕೇವಲ 14 ಸ್ಟಾಲ್​ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಶನಿವಾರ ಬೆಳಗಿನ ಜಾವ ತರಕಾರಿ ಹೊತ್ತ ವಾಹನಗಳು ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದ ಹತ್ತಿರ ಜಮಾ ಆಗಿದ್ದವು. ಅವರೆಲ್ಲರೂ ಸಂತೆಗೆ ಬಂದರೆ ಜನಸಂದಣಿ ಉಂಟಾಗುತ್ತದೆ ಎಂಬ ಕಾರಣಕ್ಕೆ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರ ಮನವೊಲಿಸಿ ವಾಪಸ್ ಕಳಿಸಿದರು.

    ಈ ನಡುವೆ 14ರ ಬದಲಿಗೆ 24 ಸ್ಟಾಲ್​ಗಳನ್ನು ಗುರುತಿಸಲಾಗಿತ್ತು. ಪ್ರತಿಯೊಬ್ಬರೂ ಬಾಕ್ಸ್ಗಳಲ್ಲಿ ನಿಂತು ತರಕಾರಿ ಕೊಳ್ಳುವಂತೆ ಮತ್ತು ಪ್ರತಿ ಗ್ರಾಹಕರೂ ಮಾಸ್ಕ್ ಧರಿಸಿ ತರಕಾರಿ ಖರೀದಿ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿತ್ತು. ಮಾಸ್ಕ ಧರಿಸದೆ ಬಂದವರನ್ನು ಹಿಂದಕ್ಕೆ ಕಳಿಸಲಾಯಿತು. ಡಿವೈಎಸ್ಪಿ ಶಿವಾನಂದ್ ಮುದರಕಂಡಿ, ಟಿಎಚ್​ಒ ಡಾ. ಚಂದ್ರಪ್ಪ, ಸಿಪಿಐ ಬಸವರಾಜ್ ತರಕಾರಿ ವ್ಯಾಪಾರಕ್ಕೆ ತೊಂದರೆಯಾಗದ ಹಾಗೆ ನೋಡಿಕೊಂಡರು.

    ಪುರಸಭೆಯಿಂದ ನಾಗರಿಕರಿಗೆ ತರಕಾರಿ, ಹಣ್ಣು ಹಂಪಲು, ಸೊಪ್ಪು ಇತ್ಯಾದಿ ಸಮರ್ಪಕವಾಗಿ ತಲುಪುವ ದೃಷ್ಟಿಯಿಂದ 125 ವ್ಯಾಪಾರಸ್ಥರಿಗೆ ಮಾರಾಟದ ಪಾಸ್ ನೀಡಲಾಗಿದೆ.

    ಪುರಸಭೆಯಲ್ಲಿ ಏರ್ಪಡಿಸಿದ್ದ ತರಕಾರಿ, ಹಣ್ಣು ಹಂಪಲು ವ್ಯಾಪಾರಿಗಳ ಸಭೆಯ ನಂತರ 125 ಸಂಚಾರಿ ತರಕಾರಿ ಮಾರಾಟಗಾರರಿಗೆ ಅನುಮತಿ ನೀಡಲಾಯಿತು. ಇವರು ಬೆಳಗ್ಗೆಯಿಂದ ಸಂಜೆ 4ರವರೆಗೆ ಶಿಕಾರಿಪುರದ 23 ವಾರ್ಡ್​ಗಳ ವ್ಯಾಪ್ತಿಯಲ್ಲಿ ಮಾತ್ರ ವ್ಯಾಪಾರ ಮಾಡಬಹುದು. ಅವರು ವ್ಯಾಪಾರಮಾಡುವ ಗಾಡಿ, ತಳ್ಳುವ ಗಾಡಿ, ಬೈಕ್, ಟಾಟಾ ಏಸ್ ಯಾವುದೇ ವಾಹನಗಳಿರಲಿ ಅವುಗ ಳಿಗೆ ಪುರಸಭೆ ನೀಡಿದ ಪಾಸ್ ನೇತು ಹಾಕಬೇಕು. ಪ್ರತಿ ವ್ಯಾಪಾರಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎರಡು ಮೂರು ಜನರಿಗೆ ಒಮ್ಮೆ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಅನಗತ್ಯ ಬೆಲೆಯೇರಿಕೆ ಮಾಡುವ ಹಾಗಿಲ್ಲ ಎಂಬ ತಿಳಿವಳಿಕೆ ನೀಡಲಾಯಿತು.

    ಅಂಗಡಿ ಮುಂದೆ ದಿನಸಿಗಾಗಿ ಕಾದು ನಿಲ್ಲದಂತೆ ವ್ಯವಸ್ಥೆ ಮಾಡಿದ್ದು, ಗ್ರಾಹಕರು ಅಂಗಡಿಗೆ ಕರೆ ಮಾಡಿ ಮಾಹಿತಿ ನೀಡಿದರೆ ದಿನಸಿ ಸಾಮಾನು ತೆಗೆದಿಡುತ್ತಾರೆ. ಬಳಿಕ ಬಂದು ಹಣ ಕೊಟ್ಟು ಒಯ್ಯಬಹುದು. ಇದರಿಂದ ಅನಗತ್ಯವಾಗಿ ದಟ್ಟಣೆ ಉಂಟಾಗುವುದು ತಪ್ಪುತ್ತದೆ. ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts