More

    ಮಾಸ್ಕ್​ದರ ಹೆಚ್ಚಳ, ತಹಸೀಲ್ದಾರ್ ಭೇಟಿ

    ಶಿರಸಿ: ಕರೊನಾ ಹಿನ್ನೆಲೆಯಲ್ಲಿ ಜನರು ಬಳಸುವ ಮಾಸ್ಕ್​ಗೆ ದರ ಹೆಚ್ಚಳ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ನೇತೃತ್ವದಲ್ಲಿ ನಗರಸಭೆ, ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಔಷಧ ಅಂಗಡಿಗಳು, ಸಗಟು ವ್ಯಾಪಾರಿ ಅಂಗಡಿಗಳಿಗೆ ತೆರಳಿ ಬುಧವಾರ ಪರಿಶೀಲನೆ ನಡೆಸಿದರು. ಮಾಸ್ಕ್​ಗಳ ದರ ಹೆಚ್ಚಳ ಮಾಡದಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.ನಗರಸಭೆ ಪರಿಸರ ಇಂಜಿನಿಯರ್ ಶಿವರಾಜ, ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ಅವರು ಪ್ರಮುಖ ಅಂಗಡಿಗಳಿಗೆ ತೆರಳಿ ಮಾಸ್ಕ್ ಸಂಗ್ರಹದ ಮಾಹಿತಿ ಪಡೆದರು. ದರ ಹೆಚ್ಚಿಸದಂತೆ ಅಂಗಡಿಕಾರರಿಗೆ ತಹಸೀಲ್ದಾರರು ಸೂಚಿಸಿದರು. ಒಂದೊಮ್ಮೆ ದರ ಹೆಚ್ಚಳ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಉಮಾಮಧುಕೇಶ್ವರ ದೇವರಿಗೆ ವಿಶೇಷ ಪೂಜೆ
    ಶಿರಸಿ:
    ಕರೊನಾ ವೈರಸ್​ನಿಂದ ಯಾವುದೇ ತೊಂದರೆ, ಕ್ಷೋಭೆ, ಗೊಂದಲಗಳು ಉಂಟಾಗದಂತೆ ಪ್ರಾರ್ಥಿಸಿ ದಕ್ಷಿಣ ಕಾಶಿ ಖ್ಯಾತಿಯ ಇತಿಹಾಸ ಪ್ರಸಿದ್ಧ ಬನವಾಸಿಯ ಮಹತೋಭಾರ ಉಮಾಮಧುಕೇಶ್ವರ ದೇವರಿಗೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

    ಕರೊನಾ ನಿಯಂತ್ರಣದ ಪ್ರಯತ್ನದಲ್ಲಿ ಯಶಸ್ಸು ದೊರೆತು ಜನಮಾನಸವನ್ನು ಶಾಂತಿಗೊಳಿಸಲಿ ಎಂಬ ಪ್ರಾರ್ಥನೆಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಮಂತ್ರಿ ಶ್ರೀರಾಮುಲು, ಮುಜರಾಯಿ ಇಲಾಖೆ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪೂಜಾ ಪ್ರಸಾದವನ್ನು ಕಳುಹಿಸಲಾಗಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಎ. ಹೆಗಡೆ ಸೋಂದಾ ತಿಳಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ವಿಶೇಷ ಆದೇಶದನ್ವಯ ಕರೊನಾ ಹರಡದಂತೆ ಎಚ್ಚರಿಕೆ ಕ್ರಮವಾಗಿ ಈ ತಿಂಗಳ ಕೊನೆಯವರೆಗೆ ಅನಿವಾರ್ಯವಾಗಿ ಯಾತ್ರಾರ್ಥಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ-ಯಾತ್ರಾರ್ಥಿಗಳು ತಮ್ಮ ಪ್ರವಾಸವನ್ನು ಮುಂದೆ ಹಾಕಿ ಸಹಕರಿಸಬೇಕು ಎಂದು ವ್ಯವಸ್ಥಾಪನೆ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್ ವಿನಂತಿಸಿದ್ದಾರೆ.

    ಜೈನಮಠದ ಭೇಟಿ ಮುಂದೂಡಲು ಮನವಿ
    ಶಿರಸಿ:
    ಕರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ಆದೇಶ ಬರುವ ತನಕ ಭಕ್ತರು ತಾಲೂಕಿನ ಸ್ವಾದಿ ದಿಗಂಬರ ಜೈನಮಠಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ಮಠದ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.
    ಜೈನಮಠದಲ್ಲಿ ಮಾ. 18ರಿಂದ 31ರವರೆಗೆ ನಡೆಯಲಿರುವ ಎಲ್ಲ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಾ. 24ರಂದು ನಡೆಯಲಿದ್ದ ಅಮಾವಾಸ್ಯೆ ಪೂಜಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ವಸತಿ, ಭೋಜನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

    ಶಿರಸಿಯಲ್ಲಿ 9 ಕಡೆ ತರಕಾರಿ ಮಾರಾಟ
    ಶಿರಸಿ:
    ನಗರದ ಒಂದೇ ಕಡೆ ತರಕಾರಿ ಸಂತೆ ನಡೆಯುವುದರಿಂದ ಕರೊನಾ ಸೋಂಕು ಹರಡುವ ಅಪಾಯ ಇರುವುದರಿಂದ 9 ಕಡೆ ತರಕಾರಿ ವ್ಯಾಪಾರಕ್ಕೆ ನಗರಸಭೆ ತಾತ್ಕಾಲಿಕ ಅವಕಾಶ ನೀಡಿದೆ ಎಂದು ಪೌರಾಯುಕ್ತ ರಮೇಶ ನಾಯಕ ತಿಳಿಸಿದ್ದಾರೆ.
    ಜನರು ತಮಗೆ ಸಮೀಪದ ಸ್ಥಳಗಳಿಗೆ ತೆರಳಿ ತರಕಾರಿ ಖರೀದಿಸುವ ಮೂಲಕ ಕರೊನಾ ಸೊಂಕು ಹರಡದಂತೆ ತಡೆಯಲು ಸಹರಿಸಬೇಕು. ಸದ್ಯ ವಿಕಾಸ ಆಶ್ರಮ ಬಯಲು, ಯಲ್ಲಾಪುರ ರಸ್ತೆಯ ಶಾಂತಿನಗರ ತಿರುವು, ಡಿಪೋ ಎದುರು, ವಿವೇಕಾನಂದನಗರ ಕ್ರಾಸ್, ರಾಮನಬೈಲ್ ಕ್ರಾಸ್, ವಿಷ್ಣು ಮಠದ ಎದುರು, ಅಗಸೆಬಾಗಿಲು ಚರ್ಚ್ ಬಳಿ, ಅಯ್ಯಪ್ಪ ದೇವಸ್ಥಾನ ಸಮೀಪ, ಉಪವಿಭಾಗಾಧಿಕಾರಿ ಕಚೇರಿ ಸಮೀಪದ ಕ್ರಾಸ್​ನಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts