More

    ಮಾರ್ಚ್‌ನೊಳಗೆ ಜೆಜೆಎಂ ಕಾಮಗಾರಿ ಮುಗಿಸಿ

    ಬೆಳಗಾವಿ: ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು 2023 ಮಾರ್ಚ್ ಒಳಗಾಗಿ ಪೂರ್ಣಗೊಳ್ಳಬೇಕು. ಹಳ್ಳಿಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗಬೇಕು ಎಂದು ಜಿಪಂ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚಿಸಿದರು.

    ನಗರದ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗಮಟ್ಟದ ಸ್ವಚ್ಛ ಭಾರತ್ ಮಿಷನ್ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆ ಅಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಕಾಮಗಾರಿಗಳನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಂಕ್ಷೆಯ ಜಲ ಜೀವನ್ ಮಿಷನ್ ಯೋಜನೆಯು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲದೆ, ನೀರಿನ ತೆರಿಗೆ ವಸೂಲಿ ಕಾರ್ಯ ಶೀಘ್ರ ಆರಂಭವಾಗಬೇಕು. ಈ ಯೋಜನೆ ಕೆಲ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡಿಲ್ಲ. 2023 ಮಾರ್ಚ್ ಒಳಗಾಗಿ ಕಾಮಗಾರಿ ಸಂಪೂರ್ಣ ಆಗಬೇಕು ಎಂದರು.
    ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣದಿರುವ ಕುರಿತು ಮಾಹಿತಿಗಳು ಬಂದಿವೆ. ಕೆಲವು ಕಡೆ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ, ಕಸ ವಿಲೇವಾರಿ ಕೆಲಸ ಆರಂಭವಾಗಿಲ್ಲ. ಕಸ ಸಾಗಿಸುವ ವಾಹನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಸ ವಿಲೇವಾರಿ ಕೆಲಸ ಸಮರ್ಪಕವಾಗಿ ಆಗಬೇಕು. ನಿರ್ಲಕ್ಷೃ ಮಾಡಿದರೆ ಅಥವಾ ರಸ್ತೆಯ ಬದಿಗಳಲ್ಲಿ ಕಸ ವಿಲೇವಾರಿ ಮಾಡಿದರೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿಯನ್ನಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಉಪ ಕಾರ್ಯದರ್ಶಿ ಮಹೇಶ ಎಸ್.ಸಿ., ಐಎಸ್‌ಎ ನಿರ್ದೇಶಕರು, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ ಹಾಗೂ ಧಾರವಾಡ ಜಿಪಂ ಸಿಇಒಗಳು, ವಿವಿಧ ವಿಭಾಗದ ಅಧಿಕಾರಿಗಳು ಇದ್ದರು.

    ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಬೆಳಗಾವಿ ಜಿಲ್ಲೆ ನಿರೀಕ್ಷೆ ಮೀರಿ ಕಾರ್ಯಸಾಧನೆ ಮಾಡಿದೆ. ಅಲ್ಲದೆ, ಐದು ವರ್ಷದ ಯೋಜನೆಯನ್ನು ಎರಡು ವರ್ಷದಲ್ಲಿಯೇ ಪೂರ್ಣಗೊಳಿಸಿದ್ದೇವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಬೆಳಗಾವಿ ಪ್ರಥಮ ಸ್ಥಾನದಲ್ಲಿದೆ.
    | ದರ್ಶನ್.ಎಚ್.ವಿ. ಜಿಪಂ ಸಿಇಒ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts