More

    ಮಾರುಕಟ್ಟೆ, ಬೀದಿ ಅಲೆಯುತ್ತಿರುವ ಜನ

    ಹಳಿಯಾಳ: ಮನೆ ಬಿಟ್ಟು ಹೊರ ಬರದಂತೆ ಎಚ್ಚರಿಸಿದ್ದರೂ ಜನ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೇ ಮಾರುಕಟ್ಟೆಗೆ ಬರುತ್ತಿದ್ದು, ಬೀದಿ ಬೀದಿ ಅಲೆಯುತ್ತಿದ್ದಾರೆ. ಸಾರ್ವಜನಿಕರಿಗೆ ಪೆಟ್ರೋಲ್ ಪೂರೈಕೆ ನಿಲ್ಲಿಸಿದ್ದರೂ ಪಟ್ಟಣ ಪ್ರದಕ್ಷಿಣೆ ಹಾಕುವ ಬೈಕ್ ಸವಾರರ ಸಂಖ್ಯೆಯಂತೂ ಕಡಿಮೆಯಾಗಲಿಲ್ಲ.

    ಗೊಂದಲ: ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ತಾಲೂಕಾಡಳಿತ ರೂಪಿಸುತ್ತಿರುವ ಯೋಜನೆಗಳ ಅನುಷ್ಠಾನದಲ್ಲಿ ಪುರಸಭೆ ಮತ್ತು ವಿವಿಧ ಇಲಾಖೆಗಳಲ್ಲಿ ಗೊಂದಲ ಉಂಟಾಗುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕರು ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಭಾನುವಾರದಿಂದ ಕಿರಾಣಿ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವುದಾಗಿ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದರು. ಆದರೆ, ಭಾನುವಾರ ಪಟ್ಟಣದಲ್ಲಿನ ಬಹುತೇಕ ಕಿರಾಣಿ ಅಂಗಡಿಗಳು ತೆರೆದುಕೊಂಡಿದ್ದರಿಂದ ಜನ ಖರೀದಿಸಲು ಆರಂಭಿಸಿದ್ದರಿಂದ ಮಾರುಕಟ್ಟೆ ಹಾಗೂ ವಿವಿಧ ಪ್ರಮುಖ ಬೀದಿಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವುದು ಕಂಡು ಬಂದಿತು. ಇನ್ನೊಂದೆಡೆ ಮನೆ ಮನೆಗೆ ತೆರಳಿ ದಿನಸಿ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಪುರಸಭೆಯು ಆರಂಭಿಸಿದ್ದು, ಇದರ ಮಾಹಿತಿ ಪಟ್ಟಣದ 23 ವಾರ್ಡ್​ಗಳ ಜನತೆಗೆ ದೊರೆಯದ ಕಾರಣ ಗೊಂದಲವುಂಟಾಗಿದೆ. ಕಳೆದ ಮೂರು ದಿನಗಳಿಂದ ದಿನಸಿ ವಿತರಣೆ ಕಾರ್ಯ ಆರಂಭಿಸಿರುವ ಪುರಸಭೆಯು ದಿನಸಿ ವಾಹನಗಳು ಹಲವಾರು ವಾರ್ಡ್​ಗಳಿಗೆ ತಲುಪದೆ ಇರುವುದರಿಂದ ಜನ ದಿನಸಿ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸಲಾರಂಭಿಸಿದ್ದಾರೆ.

    ಡಬಲ್ ರೇಟ್: ತಾಲೂಕಾಡಳಿತದ ಪರವಾನಗಿ ಪಡೆದು ವಾರ್ಡ್​ವಾರು ತರಕಾರಿ, ಹಣ್ಣು ಮಾರಾಟ ಮಾಡುತ್ತಿರುವ ಸ್ಥಳೀಯ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ದರ ಏರಿಕೆಯ ಬಗ್ಗೆ ವಿಚಾರಿಸಿದರೆ ಗ್ರಾಹಕರನ್ನು ದಬಾಯಿಸುತ್ತಿರುವುದು ಕಂಡು ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆಯ ಸದಸ್ಯ ಫಯಾಜ್ ಶೇಖ್ ತರಕಾರಿ ದುಬಾರಿ ದರದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬರುತ್ತಿದ್ದು, ಎಲ್ಲ ತರಕಾರಿ ಹಾಗೂ ಹಣ್ಣು ಮಾರಾಟಗಾರರನ್ನು ಕರೆಯಿಸಿ ತಹಸೀಲ್ದಾರ್ ಮುಂದಾಳತ್ವದಲ್ಲಿ ಸಭೆ ನಡೆಸಿ ಏಕರೂಪದ ದರ ಆಕರಿಸಲು ತಿಳಿಸುತ್ತೇವೆ. ಪ್ರತಿ ವಾಹನಕ್ಕೂ ನಿಗದಿಪಡಿಸಿದ ತರಕಾರಿ ಹಣ್ಣು ಹಂಪಲುಗಳ ರೇಟ್ ಬೋರ್ಡ್ ಅನ್ನು ಕಡ್ಡಾಯವಾಗಿ ಹಚ್ಚಲು ಹೇಳುತ್ತೇವೆ ಎಂದಿದ್ದಾರೆ. ಇನ್ನು ಅಲ್ಲಲ್ಲಿ ಕದ್ದು ಮುಚ್ಚಿ ಕುರಿ ಮಾಂಸ ಕೆ.ಜಿ.ಗೆ 800 ರೂ.ನಂತೆ ಮಾರಾಟವಾಯಿತು.

    ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ

    ಹಾವೇರಿ: ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳನ್ನು ಸ್ವೀಕರಿಸಿ ಸ್ಪಂದಿಸುವ ನಿಟ್ಟಿನಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯಲ್ಲಿ ಟೋಲ್ ಫ್ರೀ ಸಹಾಯವಾಣಿ 08375-249102, 08375-249103, 08375-249104 ಸಂಖ್ಯೆಗಳಲ್ಲಿ ಯಾವುದಾದರೂ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಸ್ವೀಕರಿಸಿ ಪ್ರತಿ ಕರೆಗಳನ್ನು ದಾಖಲಿಸಲಾಗುವುದು. ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ಮೂರು ದೂರವಾಣಿ ಸಂಖ್ಯೆಗಳಿಗೂ ಸಾರ್ವಜನಿಕರು ಕರೆ ಮಾಡಬಹುದು. ಈ ಉದ್ದೇಶಕ್ಕಾಗಿ ಮೂರು ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ. ಕರೆ ಸ್ವೀಕಾರಕ್ಕೆ ಮೂರು ಪಾಳೆಯಲ್ಲಿ ಆಪರೇಟರ್​ಗಳನ್ನು ನಿಯೋಜಿಸಲಾಗಿದೆ. ಕರೆ ಸ್ವೀಕರಿಸಿ ಪುಸ್ತಕದಲ್ಲಿ ದಾಖಲಿಸಲಾಗುವುದು ಮತ್ತು ಅವರ ಸಮಸ್ಯೆಗಳ ಕುರಿತಂತೆ ಸಂಕ್ಷಿಪ್ತವಾಗಿ ರಜಿಸ್ಟರ್​ನಲ್ಲಿ ದಾಖಲಿಸಲಾಗುವುದು. ನಿಯಂತ್ರಣ ಕೊಠಡಿಯ ಮೇಲುಸ್ತುವಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪಾಳೆಯದ ಪ್ರಕಾರ ನಿಯೋಜಿಸಲಾಗಿದೆ. ಈ ಕರೆಗಳನ್ನು ಆಯಾ ತಂಡಗಳಿಗೆ ವರ್ಗಾಯಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತದೆ.

    ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ದೂರುಗಳು, ಕರೊನಾ ಕುರಿತು ಮಾಹಿತಿ, ವೈದ್ಯಕೀಯ ಸಮಸ್ಯೆಗಳು, ಚಿಕಿತ್ಸೆಗಳು, ಸಾಮಾನ್ಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಉತ್ತರಿಸಲು ವೈದ್ಯಾಧಿಕಾರಿಗಳನ್ನು ಪಾಳೆಯಲ್ಲಿ ನಿಯೋಜಿಸಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಸಾಗಾಣಿಕೆ ಸೇರಿ ರೈತರ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಹಾಗೂ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಕಾನೂನು ಸುವ್ಯವಸ್ಥೆ, ದಿನಬಳಕೆ ವಸ್ತುಗಳ ಪೂರೈಕೆ, ಸಾಗಾಣಿಕೆಗೆ ಪರವಾನಗಿ ಸೇರಿ ಎಲ್ಲ ತರಹದ ದೂರು ಹಾಗೂ ಸಮಸ್ಯೆಗಳನ್ನು ನಿಯಂತ್ರಣ ಕೊಠಡಿಯಲ್ಲಿ ಸ್ವೀಕರಿಸಿ ದಾಖಲಿಸಲಾಗುತ್ತಿದೆ.

    ಹೋಮ್ ಕ್ವಾರಂಟೈನ್​ನಲ್ಲಿರುವವರ ಯೋಗಕ್ಷೇಮ, ಅವರ ವೈದ್ಯಕೀಯ ಉಪಚಾರ, ವೈದ್ಯರ ಭೇಟಿ ಕುರಿತಂತೆ ನಿಯಂತ್ರಣ ಕೊಠಡಿಯಿಂದಲೇ ಅವರ ಮನೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಅವರ ಊಟೋಪಚಾರ, ಆರೋಗ್ಯದ ಬಗ್ಗೆ ನಿಯಮಿತವಾಗಿ ವೈದ್ಯರ ಭೇಟಿ ಕುರಿತಂತೆ ನೇರವಾಗಿ ಮಾತನಾಡಿ ಮಾಹಿತಿ ಪಡೆಯಲು ಆಯುಷ್ ವೈದ್ಯರನ್ನು ಪಾಳೆಯದ ಪ್ರಕಾರ ನಿಯೋಜಿಸಲಾಗಿದೆ.

    ಚೆಕ್​ಪೋಸ್ಟ್​ಗಳ ಕಾರ್ಯನಿರ್ವಹಣೆ, ಫಿವರ್ ಕ್ಲಿನಿಕ್​ಗಳಲ್ಲಿ ತಪಾಸಣೆ ಕುರಿತಂತೆ ನಿಯಂತ್ರಣ ಕೊಠಡಿ ಮೂಲಕವೇ ಮಾಹಿತಿ ಪಡೆಯಲಾಗುವುದು. ಸ್ವೀಕರಿಸಿದ ಕರೆ, ಯಾವ ಇಲಾಖೆಗೆ ಸಂಬಂಧಿಸಿದ್ದು, ಆ ಸಮಸ್ಯೆ ನಿವಾರಣೆ ಕುರಿತಂತೆ ಫಾಲೋಅಪ್ ಸಹ ಇರುತ್ತದೆ. ನಿಯಂತ್ರಣ ಕೊಠಡಿಯ ಯೋಜನಾ ನಿರ್ದೇಶಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರತಿ ದಿನದ ದೂರುಗಳನ್ನು ವರದಿ ಮಾಡಲು ಆದೇಶಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದರು.

    ಕೋಡ ಗ್ರಾಮದಲ್ಲಿ ಕರೊನಾ ಜಾಗೃತಿ

    ಹಿರೇಕೆರೂರ: ತಾಲೂಕಿನ ಕೋಡ ಗ್ರಾಮದಲ್ಲಿ ಕರೊನಾ ವೈರಸ್ ಕುರಿತು ಭಾನುವಾರ ಜಾಗೃತಿ ಮೂಡಿಸಲಾಯಿತು. ಹಂಸಭಾವಿ ಪೊಲೀಸ್ ಠಾಣೆಯ ಎಎಸ್​ಐ ಡಿ.ಎಚ್. ಪೂಜಾರ, ಪೇದೆ ಎಸ್.ಎಂ. ಅಂಗಡಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ ಅಡಿವೆಕ್ಕನವರ, ಹುಚ್ಚನಗೌಡ ಕಬ್ಬಕ್ಕಿ, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

    ಸಂಚಾರಿ ವ್ಯಾಪಾರಸ್ಥರ ಪರದಾಟ

    ಮುಂಡರಗಿ: ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಇಡೀ ದೇಶ ಲಾಕ್​ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೋಟೆಗುಡ್ಡದ ಶ್ರೀಲಕ್ಷ್ಮೀ ಕನಕನರಸಿಂಹ ಜಾತ್ರೆಗೆ ಆಗಮಿಸಿದ್ದ ಸಂಚಾರಿ ವ್ಯಾಪಾರಸ್ಥರ ಕುಟುಂಬಗಳು ಬೇರೆಡೆ ತೆರಳಲು ಅವಕಾಶವಿಲ್ಲದೆ ಪರದಾಡುತ್ತಿದ್ದಾರೆ. ಹಾಗೇ ಪ್ರತಿ ದಿನದ ಊಟಕ್ಕೂ ಪರಿತಪಿಸುವ ಸ್ಥಿತಿ ನಿರ್ವಣವಾಗಿದೆ.

    ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ನೆಂಬೋನಿ ಗ್ರಾಮದ ಸುಮಾರು 30 ಜನರು ಒಂದೂರಿನಿಂದ ಮತ್ತೊಂದು ಊರಿಗೆ ತೆರಳಿ ಅಲ್ಲಿ ನಡೆಯುವ ಜಾತ್ರೆಗಳಲ್ಲಿ ಅಂಗಡಿಗಳನ್ನು ಹಾಕುತ್ತಿದ್ದರು, ಜೋಕಾಲಿ ಸೇರಿ ಮತ್ತಿತರ ಆಟ ಪ್ರದರ್ಶಿಸುತ್ತಿದ್ದರು. ಮಾ. 14ರಂದು ಪಟ್ಟಣದ ಲಕ್ಷ್ಮೀಕನಕರಸಿಂಹ ಜಾತ್ರೆಗೆ ಆಗಮಿಸಿದ್ದ ಇವರು ಇಲ್ಲಿಯೇ ಉಳಿದುಕೊಂಡಿದ್ದಾರೆ. ಈಗ ಬೇರೆ ಕಡೆಗೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ.

    ದುಡಿಮೆ ಮೇಲೆಯೇ ಜೀವನ ನಡೆಸಿಕೊಂಡು ಹೋಗುತ್ತಿದ್ದ ಇವರಿಗೆ ಈಗ ವ್ಯಾಪಾರ ಬಂದ್ ಆಗಿರುವುದರಿಂದ ಪ್ರತಿದಿನದ ಊಟಕ್ಕೂ ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಪಟ್ಟಣದ ಪುರಸಭೆ ಸದಸ್ಯೆ ಸುಮಾ ಅಂದಪ್ಪ ಬಳ್ಳಾರಿ ಮತ್ತಿತರರು ಭಾನುವಾರ ಅವರಿಗೆ 30 ಕೆಜಿ ಅಕ್ಕಿ, 5 ಕೆಜಿ ಒಳ್ಳೆ ಎಣ್ಣಿ, 2 ಕೆಜಿ ಬೇಳೆ ಮೊದಲಾದ ಅಗತ್ಯ ಸಾಮಗ್ರಿ ವಿತರಿಸಿದರು. ಇನ್ನು ಕೆಲ ಸಾಮಾಜಿಕ ಕಾರ್ಯಕರ್ತರು ಬೆಳಗ್ಗೆ ಉಪಾಹಾರ ನೀಡಿದ್ದಾರೆ.

    ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ ಅವರು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಅಲೆಮಾರಿಗಳ ಲಿಸ್ಟ್​ನಲ್ಲಿ ಸೊಲ್ಲಾಪುರ ಜಿಲ್ಲೆಯಿಂದ ವ್ಯಾಪಾರಕ್ಕಾಗಿ ಆಗಮಿಸಿದ ಇವರುಗಳ ಹೆಸರನ್ನು ಸೇರಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts