More

    ಮಾರಿಕಾಂಬೆ ದರ್ಶನಕ್ಕೆ ಜನಸಾಗರ; ಪೊಲೀಸರು, ಸಮಿತಿ ಸದಸ್ಯರು ಹೈರಾಣ

    ಸಾಗರ: ಸುಡುವ ಬಿಸಿಲಿನ ಧಗೆಯಲ್ಲಿಯೂ ಮಾರಿಕಾಂಬೆಯ ದರ್ಶನಕ್ಕೆ ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಮೇಳೈಸಿದ್ದರು. ಪುಟ್ಟ ಕಂದಮ್ಮಗಳನ್ನು ದೇವಿಯ ತೊಡೆಯ ಮೇಲಿಟ್ಟು ಆಶೀರ್ವಾದ ಪಡೆಯುವ ದೃಶ್ಯಗಳು ಕಂಡುಬಂದವು.
    ಕುಂಕುಮಾರ್ಚನೆ ಮತ್ತು ಇತತ ಸೇವೆಗಳಿಗೆ ಸಮಿತಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಆದರೆ ಜನದಟ್ಟಣೆಯನ್ನು ತಡೆಗಟ್ಟಿ ವ್ಯವಸ್ಥಿತವಾಗಿ ಭಕ್ತರಿಗೆ ದೇವಿಯ ದರ್ಶನಕ್ಕೆ ಸಮಿತಿಯ ಸದಸ್ಯರು, ರಕ್ಷಣಾ ಇಲಾಖೆಯವರು ಹರಸಾಹಸಪಟ್ಟು ಅವಕಾಶ ಮಾಡಿಕೊಟ್ಟರು. ದೇವಿಯ ಮುಂಭಾಗದ ಸರದಿಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ರಕ್ಷಣೆಯ ಜತೆಯಲ್ಲಿ ತಾವೇ ಭಕ್ತರಿಗೆ ಪ್ರಸಾದ ಹಂಚಿ ಕಳುಹಿಸಿಕೊಡುತ್ತಿರುವುದು ಜನಮೆಚ್ಚುಗೆ ಗಳಿಸಿದೆ. ಪೊಲೀಸರು ವಾಹನಗಳನ್ನು ಜಾತ್ರೆ ನಡೆಯುವ ಪ್ರದೇಶದ ಒಳಗೆ ತರದಂತೆೆ ನಾಕಾಬಂದಿ ಮಾಡಿ ತಡೆದರು.
    ಪ್ರತಿದಿನ ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಜಾತ್ರೆಯಲ್ಲಿ ನಗೆ ಹುಟ್ಟಿಸುವ ಚಿತ್ರವಿಚಿತ್ರವಾದ ಮುಖವಾಡಗಳು ಭರಪೂರ ಖರೀದಿಯಾಗುತ್ತಿವೆ. ದಿನದಿಂದ ದಿನಕ್ಕೆ ಜಾತ್ರೆಯಲ್ಲಿ ಜನಸಂದಣಿ ಮತ್ತು ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಜಾತ್ರಾ ಸಮಿತಿಯವರು ಅಮ್ಮನಿಗೆ ಭಕ್ತರು ನೀಡುವ ಸೀರೆ ಮತ್ತು ಇತರ ವಸ್ತುಗಳ ಹರಾಜನ್ನು ಸ್ಥಳದಲ್ಲಿಯೇ ಪ್ರತಿದಿನವೂ ನಡೆಸುತ್ತಿರುವುದು ಅವುಗಳನ್ನು ಹರಾಜಿನಲ್ಲಿ ಹಿಡಿಯಲು ಭಕ್ತರು ಪ್ರತಿದಿನ ಪೈಪೋಟಿ ನಡೆಸುತ್ತಿದ್ದಾರೆ.
    ದೇವಿ ದರ್ಶನದಿಂದ ಪಾಪ ನಾಶ: ಶಕ್ತಿ ಸಂಪ್ರದಾಯದ ದೇವತೆಯ ಪೂಜೆ ಕರ್ನಾಟಕದ ಉದ್ದಗಲದಲ್ಲಿ ಪ್ರಚಲಿತವಾಗಿದ್ದು ಸಾಗರದ ಮಾರಿಕಾಂಬಾ ದೇವಿಯ ದರ್ಶನದಿಂದ ಎಲ್ಲ ಪಾಪಗಳು ವಿನಾಶವಾಗುತ್ತವೆ ಎಂದು ಮಳಲಿಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಶುಕ್ರವಾರ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಮಾರಿಕಾಂಬಾ ಜಾತ್ರೆ ಅತ್ಯಂತ ವೈಭವದಿಂದ ನಡೆಯುತ್ತಿರುವುದು, ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿರುವುದು ಅಮ್ಮನ ಶಕ್ತಿಯಿಂದ ಎಂದು ತಿಳಿಸಿದರು. ಭಾರತೀಯ ಪರಂಪರೆಯಲ್ಲಿ ಶಕ್ತಿಮಾತೆಯ ಪಾತ್ರ ಪ್ರಮುಖವಾಗಿದೆ. ಜಗತ್ತಿಗೆ ಸನ್ಮಂಗಳವನ್ನು ಬಯಸುವ ಜತೆಗೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿ ಪರಿವರ್ತನೆಗೊಳ್ಳಲು ಇಂತಹ ಉತ್ಸವ, ಜಾತ್ರೆಗಳು ಅಗತ್ಯ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts