More

    ಮಾರಿಕಾಂಬಾ ಜಾತ್ರೆಗೆ ಸಾಗರ ಸಜ್ಜು; ಇಂದು ದೇವಿಗೆ ಸೀರೆ, ಬಾಸಿಂಗ, ಆಭರಣ ತರುವ ಶಾಸ್ತ್ರ; 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ

    ಸಾಗರ: ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆ ಫೆ. 7ಕ್ಕೆ ಆರಂಭವಾಗಲಿದ್ದು 15ರವರೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.
    ಫೆ. 5ರಂದು ಬೆಳಗ್ಗೆ 10ಕ್ಕೆ ಶ್ರೀ ದೇವಿಗೆ ಸೀರೆ ತರುವುದು, ಬಾಸಿಂಗ ತರುವುದು, ಜಡೆ ತರುವುದು, ಆಭರಣ ತರುವ ಕಾರ್ಯಕ್ರಮವನ್ನು ಬಾಗಿನ ತೆಗೆದುಕೊಂಡು ಹೋಗುವ ಮೂಲಕ ನಡೆಸಲಾಗುತ್ತದೆ. 6ರಂದು ರಾತ್ರಿ 10ರಿಂದ ಮರುದಿನ ಬೆಳಗಿನ ಜಾವ 5 ಗಂಟೆವರೆಗೂ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.
    7ರ ಬೆಳಗ್ಗೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಾಂಗಲ್ಯ ಪೂಜೆ ಮಾಡಿಸಿ ತವರು ಮನೆ ದೇವಸ್ಥಾನಕ್ಕೆ ತರಲಾಗುತ್ತದೆ. ಬೆಳಗ್ಗೆ 5ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ದೇವಿಗೆ ದೃಷ್ಠಿ ಇಡುವುದು, ಮಾಂಗಲ್ಯ ಧಾರಣೆ ಮತ್ತು ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ನಂತರ ಮಹಾಪೂಜೆ ನಡೆಯಲಿದೆ. ರಾತ್ರಿ 10ಕ್ಕೆ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವಿಯ ದಂಡಿನ ಮೆರವಣಿಗೆ ಪ್ರಸಿದ್ಧ ಜಾನಪದ ಕಲಾತಂಡದೊಂದಿಗೆ ರಾಜಬೀದಿ ಉತ್ಸವದ ಮೂಲಕ ನಡೆಯಲಿದೆ. ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
    ಫೆ.8ರ ಬೆಳಗ್ಗೆ ಮಾರಿಕಾಂಬಾ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಫೆ.15ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುತ್ತದೆ. ಫೆ.7ರಿಂದ 15ರವರೆಗೂ ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಹಾಮಂಗಳಾರತಿ, ರಾತ್ರಿ 9.30ರವರೆಗೆ ಶ್ರೀದೇವಿಗೆ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಇರುತ್ತದೆ. ಶ್ರೀ ಮಾರಿಕಾಂಬಾ ಕಲಾ ವೇದಿಕೆ (ಗಂಡನ ಮನೆ)ಯಲ್ಲಿ ಪ್ರತಿ ದಿನ ಸಂಜೆ 5.30ರಿಂದ ವಿವಿಧ ಸಂಘಟನೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಫೆ.8ರಿಂದ 15ರವರೆಗೆ ಗಾಂಧಿ ಮೈದಾನದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಂಜೆ 5.30ರಿಂದ ಸ್ಥಳೀಯ ಹಾಗೂ ರಾಜ್ಯದ ಹೆಸರಾಂತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
    ಒಂಬತ್ತು ದಿನಗಳ ವೈವಿಧ್ಯಮಯ ಪೂಜಾ ವಿಧಾನಗಳ ನಂತರ ಫೆಬ್ರವರಿ 15ರ ರಾತ್ರಿ 10.30ಕ್ಕೆ ಪೋತರಾಜನಿಂದ ಚಾಟಿಸೇವೆ, ಅಮ್ಮನವರಿಗೆ ನೈವೇದ್ಯ ಮಹಾಪ್ರಸಾದ ವಿನಿಯೋಗ, ನಂತರ ರಾತ್ರಿ 12ರಿಂದ ಬೆಳಗ್ಗೆ 5ರವರೆಗೂ ಪ್ರಸಿದ್ಧ ಜಾನಪದ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಬಳಿಕ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಟ್ಟುಬರುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts