More

    ಮಾನವ ಸಂಪನ್ಮೂಲ ಸದ್ಬಳಕೆಯಿಂದ ಗ್ರಾಮೀಣಾಭಿವೃದ್ಧಿ ಕಾರ್ಯ ಯಶಸ್ಸು ಸಾಧ್ಯ

    ಹನಗೋಡು: ಗ್ರಾಮೀಣ ಭಾಗದ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡರೆ ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಅಭಿಪ್ರಾಯಪಟ್ಟರು.


    ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಯಶೋಧರಪುರ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರು, ವಿದ್ಯಾವಿಕಾಸ ಕಾನೂನು ಕಾಲೇಜು, ಮೈಸೂರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ಎಚ್.ಸಿ.ದಾಸಪ್ಪ ವಿಚಾರ ಸಂಸ್ಥೆ, ಮೈಸೂರು ಹಾಗೂ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


    ಗ್ರಾಮಗಳ ಅಭಿವೃದ್ಧಿಯಲ್ಲಿ ಯುವಜನತೆನ್ನು ತೊಡಗಿಸಿಕೊಳ್ಳುವುದು ಗಾಂಧೀಜಿಯವರ ಆಶಯವಾಗಿತ್ತು. ನಗರ ಪ್ರದೇಶದ ಯುವಜನರಿಗೆ ಗ್ರಾಮೀಣ ಭಾಗದ ಸಮಸ್ಯೆಗಳ ಅರಿವು ಇಲ್ಲದಿದ್ದರೂ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಅನುಭವ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಶಿಬಿರಾರ್ಥಿಗಳು ಅಪಾರ ಅನುಭವ ಹೊಂದಿದ್ದು, ಗ್ರಾಮೀಣ ಸಮಸ್ಯೆಗಳನ್ನು ಗ್ರಹಿಸುವ ವೈಚಾರಿಕ ಮನೋಭಾವ ಇಂತಹ ಶಿಬಿರಗಳಲ್ಲಿ ಸಿಗುತ್ತದೆ. ಗ್ರಾಮಗಳ ಕುಂದುಕೊರತೆಗಳನ್ನು ಬಗೆಹರಿಸಲು ತಕ್ಷಣದ ಪರಿಹಾರಾತ್ಮಕ ಮನೋಭಾವ ಶಿಬಿರಾರ್ಥಿಗಳಲ್ಲಿ ಮೂಡುತ್ತದೆ. ಈ ನಿಟ್ಟಿನಲ್ಲಿ ಗ್ರಾಮದ ಜನರನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸುವಂತೆ ರಾಷ್ಟ್ರೀಯ ಸೇವಾ ಶಿಬಿರಗಳು ಪ್ರೇರಪಿಸುತ್ತವೆ ಎಂದರು.


    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಪರಿಪಕ್ವವಾಗಿ ವ್ಯಕ್ತಿಯೊಬ್ಬ ಎಲ್ಲ ಆಯಾಮಗಳಲ್ಲೂ ಬೆಳೆಯಬೇಕಾದರೆ ಇಂತಹ ಶಿಬಿರಗಳು ಪೂರಕ ಪರಿಸರವನ್ನು ದೊರಕಿಸಿಕೊಡುತ್ತವೆ. ವ್ಯಕ್ತಿಯ ಬೆಳವಣಿಗೆ ಎಂದರೆ ಕೇವಲ ದೈಹಿಕ ಬೆಳವಣಿಗೆಯಲ್ಲ, ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ಬೆಳವಣಿಗೆ. ಜ್ಞಾನ ಸಂಪಾದನೆ ವ್ಯಕ್ತಿಯೊಬ್ಬನ ಸ್ವಹಿತಾಸಕ್ತಿಗೆ ಆಗಬಾರದು. ಜ್ಞಾನ ಸಂಪಾದಿತ ವ್ಯಕ್ತಿತ್ವ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು. ಅಂತಹ ವ್ಯಕ್ತಿಯಲ್ಲಿ ಮೌಲ್ಯಯುತವಾದ ಭಾವನೆಗಳು ಮೂಡಬೇಕು. ಅಂತಹ ಮೌಲ್ಯಗಳನ್ನು ಬೆಳೆಸಲು ಎನ್ನೆಸ್ಸೆಸ್ ಶಿಬಿರಗಳು ತರಬೇತಿ ಶಾಲೆಗಳಂತೆ ಕೆಲಸ ಮಾಡುತ್ತವೆ ಎಂದರು.


    ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವಾಸು ಮಾತನಾಡಿ, ಸೋಲಿಗ ಸಮಾಜದವರಿಗೆ ಆಧುನಿಕ ಜೀವನ ಕಲ್ಪಿಸಿಕೊಟ್ಟ ಯಶಸ್ಸು ಯಶೋದರಮ್ಮ ದಾಸಪ್ಪ ಅವರಿಗೆ ಸಲ್ಲುತ್ತದೆ. ಕಾಡಿನಲ್ಲಿ ವಾಸಿಸುತ್ತಿದ್ದ ಸೋಲಿಗ ಸಮಾಜವನ್ನು ಆಧುನಿಕ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಯಶೋದರಮ್ಮ ದಾಸಪ್ಪ ಅವರಲ್ಲಿ ಅಪಾರವಾದ ಸಾಮಾಜಿಕ ಕಳಕಳಿಯಿದ್ದು, ಗಾಂಧೀಜಿಯವರ ತತ್ವಾದರ್ಶಗಳಿಂದ ಪ್ರಭಾವಿತರಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಶ್ರಯ ಕೊಟ್ಟಂತಹ ಮೇರು ವ್ಯಕ್ತಿತ್ವ ಎಂದು ಬಣ್ಣಿಸಿದರು.


    ಮಾಜಿ ಶಾಸಕ ಡಿ.ಆರ್.ಪಾಟೀಲ್, ಎನ್ನೆಸ್ಸೆಸ್ ಪ್ರಾದೇಶಿಕ ನಿರ್ದೇಶಕ ಖಾದ್ರಿ ನರಸಿಂಹಯ್ಯ, ಸರೋಜಮ್ಮ ತುಳಸಿ ದಾಸಪ್ಪ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಮುಖ್ಯಸ್ಥ ನರೇಂದ್ರ, ಗಾಂಧಿ ಭವನದ ಉಪಾಧ್ಯಕ್ಷ ವಿಶುಕುಮಾರ್, ಹುಣಸೂರು ತಾಪಂ ಇಒ ಮನು, ಪಿಡಿಒ ಪ್ರದೀಪ್, ಗ್ರಾಮದ ಮುಖಂಡ ಕೃಷ್ಣಯ್ಯ, ಎನ್ನೆಸ್ಸೆಸ್ಸ್ ಶಿಬಿರದ ಅಧಿಕಾರಿಗಳು ಹಾಗೂ ಶಿಬಿರಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts