More

    ಮಾನವರ ಹೆಚ್ಚಳದಿಂದ ಅಸಮತೋಲನ – ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವಿಷಾದ – ವಿಶ್ವ ಜನಸಂಖ್ಯಾ ದಿನಾಚರಣೆ

    ದಾವಣಗೆರೆ: ಜಗತ್ತಿನಲ್ಲಿ ಆನೆ, ಹುಲಿ, ಜಿಂಕೆಗಳು, ಗಿಡ-ಮರಗಳ ಸಂಖ್ಯೆ ಹೆಚ್ಚಲಿಲ್ಲ. ಬದಲಾಗಿ ಏರಿಕೆಯಾಗುತ್ತಿರುವ ಮಾನವರ ಸಂಖ್ಯೆಯಿಂದಾಗಿ ಪ್ರಾಕೃತಿಕ ಅಸಮತೋಲನವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವಿಷಾದಿಸಿದರು.
    ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಕೃತಿಯಲ್ಲಿ ಮಾನವನಷ್ಟೇ ಪ್ರಾಣಿ, ಸಸ್ಯ ಸಂಕುಲಕ್ಕೂ ಬದುಕುವ ಹಕ್ಕಿದೆ. ಆದರೆ ಮನುಷ್ಯರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ವಾತಾವರಣ, ಜೈವಿಕ ಸಂಪನ್ಮೂಲ ಹಾಗೂ ಆಹಾರದ ಮೇಲೂ ದುಷ್ಪರಿಣಾಮವಾಗುತ್ತಿದೆ. ಇದನ್ನು ತಪ್ಪಿಸಲು ಜಾಗೃತಿ ಮೂಡಿಸುವ ಕಾರಣಕ್ಕೆ ವಿಶ್ವ ಜನಸಂಖ್ಯೆ ದಿನದ ಆಚರಣೆ ಉಳಿದೆಲ್ಲ ದಿನಾಚರಣೆಗಳಿಗಿಂತ ಮಹತ್ವ ಪಡೆದಿದೆ ಎಂದರು.
    ವೈದ್ಯಕೀಯ ಸೇವಾ ಸೌಲಭ್ಯಗಳು ಹೆಚ್ಚಿರುವ ಕಾರಣದಿಂದಾಗಿ ಶಿಶುಗಳು, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣ ತಗ್ಗಿದೆ. ಅಲ್ಲದೆ ಜನರ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ವೈದ್ಯಕೀಯ ಸೌಲಭ್ಯಗಳಿದ್ದಾಗ್ಯೂ ಜನಸಂಖ್ಯೆಯನ್ನು ಹದ್ದುಬಸ್ತಿನಲ್ಲಿ ಇಡಲಾಗಿಲ್ಲ. ಆರೋಗ್ಯ ವೃದ್ಧಿ ಹಾಗೂ ಮರಣ ಪ್ರಮಾಣ ಇಳಿಕೆಗಾಗಿ ಜನಸಂಖ್ಯೆ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
    ನಾವಿಬ್ಬರು, ನಮಗೊಂದು ಮಗು ಎಂಬ ನೀತಿಯನ್ನು ಎಲ್ಲರೂ ಪಾಲಿಸಬೇಕು. ಮದುವೆಯಾಗುವ ವಯಸ್ಸು ಹಾಗೂ ಮದುವೆ ನಂತರದಲ್ಲಿ ಮಕ್ಕಳನ್ನು ಹೊಂದುವ ಅಂತರ ಹೆಚ್ಚಬೇಕು. ಹಾಗಾದಾಗ ಮಾತ್ರ ಸಮತೋಲಿತ ಜೀವನ ಅಥವಾ ಪರಿಸರ ವ್ಯವಸ್ಥೆಯನ್ನು ನಿಭಾಯಿಸಬಹುದು ಎಂದರು.
    ಡಿಎಚ್‌ಒ ಡಾ.ಎಲ್.ನಾಗರಾಜ್ ಮಾತನಾಡಿ ವಿಶ್ವದಲ್ಲಿ ಇಂದು 750 ಕೋಟಿ ಜನಸಂಖ್ಯೆ ಇದ್ದು, ಇದು 2050ನೇ ಇಸವಿ ವೇಳೆಗೆ 1000 ಕೋಟಿ ದಾಟುವ ಅಂದಾಜಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಿದಂತೆಲ್ಲ ಸಾಮಾಜಿಕ, ಆರ್ಥಿಕ ಹಾಗೂ ಸಮಸ್ಯೆಗಳು ಉದ್ಭವಿಸಲಿವೆ ಎಂದು ಹೇಳಿದರು.
    ಜನಸಂಖ್ಯೆ ನಿಯಂತ್ರಣ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದ ಜಿಪಂ ಉಪಕಾರ್ಯದರ್ಶಿ ಕೃಷ್ಣಾನಾಯ್ಕ ಮಾತನಾಡಿ ಚೀನಾ ಹಿಂದಿಕ್ಕಿದ ಭಾರತ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ದೇಶವನ್ನು ಹೋಲಿಕೆ ಮಾಡುವುದು ಅರ್ಥಹೀನ. ಜನಸಂಖ್ಯೆ ನಿಯಂತ್ರಣದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
    ಉಪನ್ಯಾಸ ನೀಡಿದ ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಮಿಥುನ್, ಜನರ ಪ್ರಮಾಣ ಹೆಚ್ಚಿದಂತೆಲ್ಲ ಕುಡಿವ ನೀರು, ವಾಸ ಸ್ಥಳ, ಮೂಲ ಸೌಕರ್ಯಗಳ ಕೊರತೆ, ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ ಎಂದರು.
    ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ ಮಾತನಾಡಿ ಸಂತಾನ ಫಲವತ್ತತೆ ಪ್ರಮಾಣ ರಾಜ್ಯದಲ್ಲಿ ಶೇ.2.1ರಷ್ಟಿದ್ದರೆ ಜಿಲ್ಲೆಯಲ್ಲಿ ಶೇ.1.4ರಷ್ಟಿದೆ. ಜನಸಂಖ್ಯೆ ಹತೋಟಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳ ಪಾಲನೆಯಾಗಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಕುಷ್ಠರೋಗ ನಿವಾರಣಾಧಿಕಾರಿ ಡಾ. ಮುರಳೀಧರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ನರ್ಸಿಂಗ್, ಬಿಇಡಿ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರಿಂದ ಜಾಥಾ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts