More

    ಮಾದರಿ ಸರ್ಕಾರಿ ಶಾಲೆ ರೂಪಿಸಿ ; ಶಾಲೆ ವಿಲೀನಕ್ಕೆ ಸಹಕಾರ ನೀಡಲು ಕೆಡಿಪಿ ಸಭೆಯಲ್ಲಿ ಸಂಸದ ಸುರೇಶ್ ಸಲಹೆ

    ಕುಣಿಗಲ್: ಮಾದರಿ ಸರ್ಕಾರಿ ಶಾಲೆ ನಿರ್ಮಾಣ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂಜಾಗ್ರತಾ ಕ್ರಮ, ಆಟೋ ಚಾಲಕರು ಕ್ಯಾಬ್ ಚಾಲಕರು ಹಾಗೂ ವರ್ತಕರಿಗೆ ಕರೊನಾ ಪರೀಕ್ಷೆ ಹಾಗೂ ಹೂ, ಹಣ್ಣು, ತರಕಾರಿ ಬೆಳೆದ ರೈತರಿಗೆ ಕರೊನಾ ಪರಿಹಾರದ ಹಣ ನೀಡುವ ಬಗ್ಗೆ ಶನಿವಾರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಯಿತು.

    ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಮಾದರಿ ಸರ್ಕಾರಿ ಶಾಲೆ ರೂಪಿಸಲು ವರದಿ ಸಿದ್ಧಪಡಿಸುವಂತೆ ಬಿಇಒ ತಿಮ್ಮರಾಜು ಅವರಿಗೆ ಸಂಸದ ಡಿ.ಕೆ.ಸುರೇಶ್ ಸಭೆಯಲ್ಲಿ ಸೂಚಿಸಿದರು. ಶಾಲೆಗಳು ಪ್ರಾರಂಭವಾಗಿಲ್ಲ. ಶಿಕ್ಷಕರಿಗೆ ಕೆಲಸ ಇಲ್ಲ. ಈ ಸಂಬಂಧ ಶಿಕ್ಷಕರನ್ನು ಬಳಸಿಕೊಂಡು ತಾಲೂಕಿನಲ್ಲಿರುವ ಶಿಕ್ಷಣ ಇಲಾಖೆಯ ಜಾಗ ಎಷ್ಟಿದೆ? ಶಾಲೆಗಳು ಎಷ್ಟಿವೆ? ಶಿಕ್ಷಕ ಸಂಖ್ಯೆ ಸೇರಿ ಸಂಪೂರ್ಣ ಮಾಹಿತಿ ಒಳಗೊಂಡ ವರದಿ ಸಿದ್ಧಪಡಿಸಿ. ಅತೀ ಕಡಿಮೆ ಇರುವ ಶಾಲೆಗಳನ್ನು ಸಮೀಪದ ಹೆಚ್ಚು ಸಂಖ್ಯೆ ಇರುವ ಶಾಲೆಗೆ ವಿಲೀನ ಮಾಡಿ ಮಾದರಿ ಸರ್ಕಾರಿ ಶಾಲೆ ನಿರ್ಮಾಣ ಮಾಡೋಣ ಎಂದು ಸಂಸದ ಡಿ.ಕೆ.ಸುರೇಶ್ ನಿರ್ದೇಶಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧವಿರುವ ವಿದ್ಯಾರ್ಥಿಗಳಿಗೆ ಕರೊನಾ ಆತಂಕ ದೂರ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆ ಮಾಡಿ ಕರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

    ವಿದ್ಯಾರ್ಥಿಗಳು ಪರೀಕ್ಷೆಗೂ ಒಂದು ದಿನ ಮುನ್ನ ಪರೀಕ್ಷಾ ಕೇಂದ್ರಗಳಿಗೆ ತೆರಳಿ ನೋಂದಣಿ ಸಂಖ್ಯೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಪರೀಕ್ಷೆ ದಿನ ಥರ್ಮಲ್ ಸ್ಕ್ಯಾನಿಂಗ್ ಮಾಡಲು ತಾಲೂಕಿನ 36 ಗ್ರಾಪಂಗಳಲ್ಲಿಯೂ ಪ್ರತಿ ಗ್ರಾಪಂನಿಂದ 5 ಥರ್ಮಲ್ ಸ್ಕ್ಯಾನಿಂಗ್ ಉಪಕರಣ ಖರೀದಿ ಮಾಡಿ ಸಿದ್ಧತೆ ಮಾಡಿಕೊಳ್ಳುವಂತೆ ಇಒ ಶಿವರಾಜಯ್ಯಗೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳಿಗೆ ಮಕ್ಕಳು ಯಾವುದೇ ತೊಂದರೆ ಇಲ್ಲದೆ ಸಕಾಲಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮ್ಯಾನೇಜರ್‌ಗೆ ಸಂಸದರು ಸೂಚಿಸಿದರು.

    ಎಲ್ಲ ವೈದ್ಯರು, ವೈದ್ಯ ಸಿಬ್ಬಂದಿ ಪರೀಕ್ಷೆ ಮಾಡಿ: ತಾಲೂಕಿನ ಎಲ್ಲ ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿ ನಂತರ ಜನ ಸಂಪರ್ಕ ಹೆಚ್ಚು ಹೊಂದಿರುವ ವ್ಯಕ್ತಿಗಳಿಗೆ, ಅಂದರೆ ಆಟೋ, ಕ್ಯಾಬ್ ಚಾಲಕರು ಹಾಗೂ ವರ್ತಕರಿಗೆ ಪರೀಕ್ಷೆ ಮಾಡಿಸಿ ಎಂದು ಸಂಸದ ಡಿ.ಕೆ.ಸುರೇಶ್ ತಾಲೂಕು ವೈದ್ಯಾಧಿಕಾರಿ ಜಗದೀಶ್‌ಗೆ ಸೂಚಿಸಿದರು.

    230 ಮಂದಿಗೆ ಪರಿಹಾರದ ಹಣ: ಹೂ ಹಣ್ಣು ತರಕಾರಿ ಬೆಳೆದ ರೈತರಿಗೆ ಕರೊನಾ ಪರಿಹಾರದ ಹಣ ನೀಡಲು ದಾಖಲೆಗಳು ಅಡ್ಡಿಯಾಗಿವೆ. ಇಲ್ಲಿವರೆಗೆ 230 ಮಂದಿಗೆ ಪರಿಹಾರ ನೀಡಲಾಗಿದೆ. 436 ಮಂದಿಗೆ ಪರಿಹಾರದ ಹಣ ನೀಡಬೇಕಾಗಿದೆ. ಖಾತೆಗಳು ಇನ್ನೂ ಅವರ ತಾತನ ಹೆಸರಿನಲ್ಲೇ ಇರುವುದರಿಂದ ಆಧಾರ್ ನಂಬರ್ ಲಿಂಕ್ ಆಗದೇ ಪರಿಹಾರದ ಹಣ ನೀಡಲಾಗುತ್ತಿಲ್ಲ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ನಾಗರಾಜು ಮಾಹಿತಿ ನೀಡಿದರು. ತಹಸೀಲ್ದಾರ್ ಅವರಿಂದ ಅರ್ಹ ರೈತರನ್ನು ಗುರುತಿಸಿ ಪರಿಹಾರದ ಹಣ ನೀಡುವಂತೆ ಸಂಸದ ಡಿ.ಕೆ.ಸುರೇಶ್ ಸೂಚಿಸಿದರು.

    ಸೋಂಕಿತರಿಬ್ಬರಿಗೂ ಸೂಕ್ತ ಚಿಕಿತ್ಸೆ: ಕುಣಿಗಲ್ ತಾಲೂಕಿನಲ್ಲಿ ಇಲ್ಲಿವರೆಗೆ 2 ಕರೊನಾ ಪ್ರಕರಣ ಪತ್ತೆಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದ ತಾಲೂಕು ವೈದ್ಯಾಧಿಕಾರಿ ಜಗದೀಶ್, ಈ ಪೈಕಿ ಮಹಾರಾಷ್ಟ್ರದಿಂದ ಒಂದಿರುವ ವ್ಯಕ್ತಿ ಹಾಗೂ ಮಾಗಡಿ ತಾಲೂಕಿನಿಂದ ಬಂದಿರುವ ವ್ಯಕ್ತಿಗೆ ಕರೊನಾ ಇದೆ. ಇಬ್ಬರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಇಲ್ಲಿವರೆಗೆ 800 ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts