More

    ಮಾದರಿ ಸಂಗ್ರಹಕ್ಕೆ ಹೊರಗುತ್ತಿಗೆ ನೀಡಲು ನಾಡಾ ಚಿಂತನೆ ?

    ನವದೆಹಲಿ: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ಯುಎಇಯಲ್ಲಿ ಪ್ರತಿಷ್ಠಿತ ಲೀಗ್ ಆಯೋಜನೆಗೆ ವೇದಿಕೆ ಸಜ್ಜಾಗಿದೆ. ಇದೀಗ ಲೀಗ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ದೀಪನ ಮದ್ದು ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಮೊಟ್ಟಮೊದಲ ಬಾರಿಗೆ ಹೊರಗುತ್ತಿಗೆ ನೀಡುವ ಬಗ್ಗೆ ನಾಡಾ ಚಿಂತನೆ ನಡೆಸಿದೆ.
    ಟೂರ್ನಿಯು ಯುಇಎಯಲ್ಲಿ ನಡೆಯುತ್ತಿದೆ. ಅಲ್ಲಿಗೆ ನಾಡಾದ ಅಧಿಕಾರಿಗಳನ್ನು ರವಾನಿಸಿ, ಮಾದರಿಗಳನ್ನು ಸಂಗ್ರಹಿಸುವುದು ದುಬಾರಿ ಎಂಬ ಕಾರಣಕ್ಕಾಗಿ ಯುಎಇಯ ರಾಷ್ಟ್ರೀಯ ಉದ್ದೀಪನಮದ್ದು ನಿಗ್ರಹ ಸಂಸ್ಥೆಯ (ಎನ್‌ಎಡಿಒ) ಸೇವೆಯನ್ನು ಬಳಸಿಕೊಳ್ಳಲು ನಾಡಾ ತೀರ್ಮಾನಿಸಿದೆ. ಇಲ್ಲವಾದರೆ, ಕಳೆದ 12 ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಮೂತ್ರ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡುತ್ತಿರುವ ಸ್ವೀಡನ್‌ನ ಅಂತಾರಾಷ್ಟ್ರೀಯ ಡೋಪ್ ಟೆಸ್ಟ್ ಹಾಗೂ ಆಡಳಿತ (ಐಡಿಟಿಎಂ) ಸಂಪರ್ಕಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2019ರ ಆಗಸ್ಟ್ ತಿಂಗಳಿಂದ ರಾಷ್ಟ್ರೀಯ ಉದ್ದೀಪನ ನಿಗ್ರಹ ದಳದ (ನಾಡಾ) ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಮೊದಲ ಬಾರಿಗೆ ನಾಡಾ ವ್ಯಾಪ್ತಿಯಲ್ಲಿ ಐಪಿಎಲ್ ಆಟಗಾರರು ಪರೀಕ್ಷೆಗೆ ಒಳಪಡಲಿದ್ದಾರೆ. ಮಾರ್ಚ್ 29ರಿಂದ ಆರಂಭಗೊಳ್ಳಬೇಕಿದ್ದ 13ನೇ ಐಪಿಎಲ್ ಕರೊನಾ ವೈರಸ್ ಭೀತಿಯಿಂದ ಮುಂದೂಡಲಾಗಿತ್ತು. ಇದೀಗ ಯುಎಇಗೆ ಸ್ಥಳಾಂತರಿಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಸಿಗಬೇಕಿದೆ.
    ‘ಒಂದು ವಾರದಲ್ಲಿ ವೇಳಾಪಟ್ಟಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಬಳಿಕ ನಾಡಾಗೆ ಪಟ್ಟಿ ಕಳುಹಿಸಿಕೊಡಲಾಗುವುದು. ಮಾದರಿ ಸಂಗ್ರಹಣೆ ಹಾಗೂ ಸಾರಿಗೆ ವೆಚ್ಚವನ್ನು ಸಂಪೂರ್ಣ ಅವರೇ ಭರಿಸಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ನಾಡಾ ಡಿಜಿ ನವೀನ್ ಅಗರ್ವಾಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
    2019ರ ಐಪಿಎಲ್‌ವರೆಗೂ ಬಿಸಿಸಿಐ ಸ್ಯಾಂಪಲ್ ಕಲೆಕ್ಷನ್ ಹಾಗೂ ಪರೀಕ್ಷೆಗೆ ವೆಚ್ಚ ಭರಿಸುತ್ತಿತ್ತು. ವಿಶ್ವ ಉದ್ದೀಪನ ನಿಗ್ರಹ ದಳದಿಂದ (ವಾಡಾ) ಐಡಿಟಿಎಂ ಮಾನ್ಯತೆ ಹೊಂದಿದೆ. ಆದರೆ, ನಾಡಾ ಯಾವ ಕ್ರಮ ಆಯ್ಕೆ ಮಾಡಿಕೊಳ್ಳಲಿದೆ ಎಂಬುದು ಸ್ಪಷ್ಟವಾಗಿಲ್ಲ.

    * ಗೊಂದಲದಲ್ಲಿ ನಾಡಾ..!
    ಒಂದು ಎನ್‌ಎಡಿಒ ಮುಖಾಂತರ ಮಾದರಿ ಸಂಗ್ರಹಕ್ಕೆ ನಾಡಾ ನಿರ್ಧರಿಸಿದರೆ ಹೆಚ್ಚು ಹಣ ವ್ಯಯವಾಗುತ್ತದೆ. ಎನ್‌ಎಡಿಒ ಮಾದರಿ ಸಂಗ್ರಹಿಸಿ, ವಾಡಾ ಮಾನ್ಯತೆ ಹೊಂದಿರುವ ದೋಹಾದಲ್ಲಿರುವ ಪ್ರಯೋಗಾಲಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ನಾಡಾ ಮಾದರಿ ಕಳುಹಿಸಿಕೊಡುತ್ತಿದ್ದ ರಾಷ್ಟ್ರೀಯ ಉದ್ದೀಪನಾಮದ್ದು ನಿಗ್ರಹ ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್) ವಾಡಾದಿಂದ ಅಮಾನತುಗೊಂಡಿದೆ.
    ನಾಡಾ ಮುಂದಿರುವ ಮತ್ತೊಂದು ಆಯ್ಕೆ ಎಂದರೆ , ಆಟಗಾರರ ಮಾದರಿ ಸಂಗ್ರಹಕ್ಕಾಗಿ ಕನಿಷ್ಠ 3 ರಿಂದ 4 ಡೋಪ್ ಕಂಟ್ರೋಲ್ ಅಧಿಕಾರಿಗಳನ್ನು (ಡಿಸಿಒ) ತನ್ನ ಖರ್ಚಿನಲ್ಲಿ ಯುಎಇಗೆ ಕಳುಹಿಸಿಕೊಡಬೇಕು. ಆದರೆ, ಡಿಸಿಒಗಳು ಬಿಸಿಸಿಐ ನಿರ್ಮಿಸುವ ಜೈವಿಕ ಸುರಕ್ಷತಾ ವಾತಾವರಣದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಪರೀಕ್ಷೆಗಾಗಿ ಇಲ್ಲಿಂದ ಟ್ಯಾಪ್ ತೆಗೆದುಕೊಂಡು ಹೋಗಬೇಕು. ಇದಕ್ಕೂ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ. ಆದರೆ, ಕರೊನಾ ವೈರಸ್ ಭೀತಿಯಿಂದ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವುದರಿಂದ ವಾಡಾ ಸದ್ಯ ನಿಗದಿಪಡಿಸಿರುವ ಬಜೆಟ್‌ನಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗಾಗಿ ಐಪಿಎಲ್ ಆಟಗಾರರ ಪರೀಕ್ಷೆಗೆ ಅಷ್ಟೊಂದು ವೆಚ್ಚ ಮಾಡುವುದು ಅನಾವಶ್ಯಕ ಎಂಬುದು ತಜ್ಞರ ಅಭಿಪ್ರಾಯ. ಒಂದು ವೇಳೆ ಭಾರತದ ಕ್ರೀಡಾಪಟುಗಳು ಯುರೋಪ್ ಅಥವಾ ಯುಎಸ್‌ಎಯಲ್ಲಿ ತರಬೇತಿ ಪಡೆಯುತ್ತಿದ್ದರೆ ಅಲ್ಲಿಗೂ ಡಿಸಿಒಗಳನ್ನು ಕಳುಹಿಸಿಕೊಡಲು ಸಾಧ್ಯವೆ ಎಂಬುದು ಯಕ್ಷಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts