More

    ಮಾಗಡಿ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು : ಪೌರಾಡಳಿತ ನಿರ್ದೇಶಕರು, ಡಿಸಿಗೆ ಪುರಸಭಾ ಅಧ್ಯಕ್ಷೆ ಪತ್ರ

    ಮಾಗಡಿ: ಮುಖ್ಯಾಧಿಕಾರಿ ಎ.ಭಾರತಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪುರಸಭಾ ಅಧ್ಯಕ್ಷೆ ಕೆ.ಆರ್. ವಿಜಯಲಕ್ಷ್ಮೀ ಪೌರಾಡಳಿತ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳಿಗೆ ಶನಿವಾರ ಪತ್ರ ಬರೆದಿದ್ದಾರೆ.
    ಭಾರತಿ ಅವರು ಎರಡೂವರೆ ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದು, ಅಂದಿನಿಂದ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಪ್ರತಿದಿನ ಬೆಂಗಳೂರಿನಿಂದ ಮಾಗಡಿಗೆ ಬಂದು ಹೋಗುತ್ತಾರೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಗೆ ಗೌರವ ಕೊಡದೆ ಎಲ್ಲ ವಿಚಾರಗಳಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಸದಸ್ಯರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವುದಿಲ್ಲ.

    ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದ ಕಾರಣ ಕಸ ವಿಲೇವಾರಿ ಮತ್ತು ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಬೇರೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಪುರಸಭೆ ಆಡಳಿತದ ಬಗ್ಗೆ ಅರಿವಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

    ನಗರೋತ್ಥಾನ 3ನೇ ಯೋಜನೆಯಡಿ ಬಿಡುಗಡೆಯಾಗಿದ್ದ ಹಣ ಬಳಕೆಯಾಗಿಲ್ಲ, ಪುರಸಭೆ ಅಂಗಡಿ ಮಳಿಗೆಗಳ ಅವಧಿ ಮುಗಿದಿದ್ದರೂ ಹರಾಜು ಪ್ರಕ್ರಿಯೆ ನಡೆಸಿಲ್ಲ, ಕುವೆಂಪು ವಾಣಿಜ್ಯ ಅಂಗಡಿಗಳು ಸುವಾರು ವರ್ಷಗಳಿಂದ ಖಾಲಿ ಇವೆ, ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳದೆ ಪುರಸಭೆ ಆದಾಯ ಕುಂಠಿತಗೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    15ನೇ ಹಣಕಾಸು ಯೋಜನೆಯ ಅನುದಾನ ಖರ್ಚಾಗದೆ ಉಳಿದಿದೆ. ಕಂದಾಯ ವಸೂಲಾತಿಯಲ್ಲಿ ಮಾಗಡಿ ಪುರಸಭೆ ಜಿಲ್ಲೆಯಲ್ಲಿಯೇ ಹಿಂದುಳಿದಿದೆ. ಶೇ.27ರಷ್ಟೂ ಕಂದಾಯ ವಸೂಲಾಗಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಕೂಡಲೇ ಬೇರೆ ಅಧಿಕಾರಿಯನ್ನು ನೇಮಿಸುವಂತೆ ಮನವಿ ವಾಡಿದ್ದಾರೆ.

    ಮುಖ್ಯಾಧಿಕಾರಿಗಳು ಅರ್ಧ ಗಂಟೆ ಬಂದು ತೆರಳುತ್ತಾರೆ. ಈ ಬಗ್ಗೆ ಕೇಳಿದರೆ, ನೀವ್ಯಾರು ಕೇಳುವುದಕ್ಕೆ ಎನ್ನುತ್ತಾರೆ. ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಾಕಷ್ಟು ಅನುದಾನವಿದ್ದು ಈ ಬಗ್ಗೆ ಚರ್ಚಿಸಲು ಫೆ.4ರಂದು ಕರೆದಿದ್ದ ಸಾಮಾನ್ಯ ಸಭೆಗೂ ಗೈರಾಗಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
    ರೆಹಮತ್, ಉಪಾಧ್ಯಕ್ಷ

    ಆತ್ಮಗೌರವ ಇಲ್ಲದೆ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ: ಈಗಾಗಲೇ ಕೆಲಸ ಮಾಡಿ ತೋರಿಸಿದ್ದೇನೆ. ಕೋವಿಡ್ ಇದ್ದರೂ ಕೆಲಸಗಳನ್ನು ಪೆಂಡಿಂಗ್ ಇಟ್ಟಿಲ್ಲ. ಫೆ.1, 2ರಂದು ಕೆಲ ಸದಸ್ಯರು ಆಗೌರವದಿಂದ ನಡೆದುಕೊಂಡಿದ್ದು ಬೇಸರ ತಂದಿದೆ. ಹಾಗಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಾಟ್ಸ್‌ಆ್ಯಪ್ ಮೂಲಕ ಪಿಡಿ ಅವರಿಗೆ ಸಂದೇಶ ಹಾಕಿದ್ದು, ಪತ್ರ ಬರೆದಿದ್ದೇನೆ. ಕೆಲಸ ಮಾಡಲು ಬೇಸರವಾದ ಕಾರಣ ಸಭೆಗೆ ಹೋಗಿಲ್ಲ. ಅಲ್ಲದೆ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಮಾಡಿದ್ದೇನೆ. ಈ ಹಿಂದೆ ಇದ್ದ ಅಧಿಕಾರಿಯೊಂದಿಗೂ ಇದೇ ರೀತಿ ವರ್ತಿಸಿದ್ದಾರೆ. ಹಾಗಿದ್ದರೂ ಬದಲಾವಣೆ ತರುವ ಆಶಯದೊಂದಿಗೆ ಬಂದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಸಹಕರಿಸುವ ಅಧಿಕಾರಿಗಳಿಂದ ಕೆಲಸ ವಾಡಿಸಿಕೊಳ್ಳಲಿ. ಚರಂಡಿ ಕೆಲಸ ವಾಡಿದರೂ ಆತ್ಮಗೌರವದಿಂದ ಬದುಕಬೇಕು, ಆತ್ಮಗೌರವ ಕಳೆದುಕೊಂಡು ಕೆಲಸ ವಾಡುವುದರಲ್ಲಿ ಅರ್ಥವಿಲ್ಲ, ಮತ್ತೆ ಇಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ ಎಂದು ಮಾಗಡಿ ಪುರಸಭೆ ಮುಖ್ಯಾಧಿಕಾರಿ ಎ.ಭಾರತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts