More

    ಮಹಿಳೆಯರು ಕೀಳರಿಮೆ ಬಿಡಲಿ ಎಂದ ಹಂಸಾಂಬಾ ಶಾರದಾಶ್ರಮದ ಮಾತಾ ಪ್ರಬೋಧಮಯಿ

    ಹೊಸಪೇಟೆ: ಹೆಣ್ಣು ಅತ್ಯಂತ ಶಕ್ತಿಶಾಲಿ. ಪ್ರತಿಯೊಂದು ಅವಕಾಶಗಳಲ್ಲಿ ಮೇಲುಗೈ ಸಾಧಿಸುವ ಛಲಗಾತಿ. ಆದರೆ, ಸಂಕೋಚದ ಮನೋಭಾವ, ಕೀಳರಿಮೆಯಿಂದ ಮಹಿಳೆ ಅಭಿವೃದ್ಧಿಯಿಂದ ಹಿನ್ನೆಡೆ ಅನುಭವಿಸುವಂತಾಗಿದೆ. ನಕಾರಾತ್ಮಕ ಅಂಶಗಳನ್ನು ಬದಿಗೊತ್ತಿ ಸ್ಪರ್ಧಾತ್ಮಕವಾಗಿ ಅಭಿವೃದ್ಧಿಯತ್ತ ಸಾಗಬೇಕು ಎಂದು ಹಂಸಾಂಬಾ ಶಾರದಾಶ್ರಮದ ಅಧ್ಯಕ್ಷೆ ಮಾತಾ ಪ್ರಬೋಧಮಯಿ ಕರೆ ನೀಡಿದರು.

    ಜನನಿ ಮಹಿಳಾ ಸಬಲೀಕರಣ ಸಮಿತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಈಗ ಕಾಲ ಮತ್ತು ಸಮಾಜ ಬದಲಾಗಿದೆ. ಅದಕ್ಕೆ ತಕ್ಕಂತೆ ಮಹಿಳೆಯರ ಆದ್ಯತೆಗಳೂ ಬದಲಾಗಿವೆ. ಪ್ರತಿಯೊಬ್ಬರೂ ಸ್ವಾವಲಂಬಿ ಜೀವನದತ್ತ ಗಮನ ಹರಿಸಬೇಕು. ಆರ್ಥಿಕವಾಗಿ ಸಶಕ್ತರಾಗುವುದರಿಂದ ಕುಟುಂಬವೂ ಸದೃಢವಾಗುತ್ತದೆ. ಪತಿಯ ತಂದೆ, ತಾಯಿಗಳನ್ನು ಗೌರವ ಪೂರ್ವಕವಾಗಿ ನೋಡಿಕುಳ್ಳುವುದರಿಂದ ನಿಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ ಎಂದರು.

    ಇತ್ತೀಚಿನ ದಿನಗಳಲ್ಲಿ ಬಹುತೇಕರು ಉದ್ಯೋಗಸ್ಥರಾಗಿದ್ದಾರೆ. ದೈಹಿಕ ಶ್ರಮ, ಕೆಲಸ ಕಾರ್ಯಗಳಿಲ್ಲದೇ ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡುವು ಸಿಕ್ಕಾಗ ಸರಳ ವ್ಯಾಯಾಮ, ನಡಿಗೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆ ವ್ಯವಸ್ಥಿತಗೊಂಡು, ಆರೋಗ್ಯ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ದಶಕಗಳ ಹಿಂದೆ ರಾಜ, ಮಹಾರಾಜರು ಸಂಸ್ಥಾನಗಳಿಗಾಗಿ ಯುದ್ಧ ನಡೆಸಿದರೆ, ಇಂದಿನ ಮಕ್ಕಳು ಪರೀಕ್ಷೆಯನ್ನು ಎದುರಿಸುವುದು ಯುದ್ಧಕ್ಕೆ ಸಮ ಎನ್ನುವಂತಾಗಿದೆ. ಇಂದಿನ ಮಕ್ಕಳಲ್ಲಿ ಸಣ್ಣ ಸೋಲು ಸಹಿಸುವಷ್ಟು ಧೈರ್ಯ, ಮನೋಬಲವಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ನೈತಿಕ ಮೌಲ್ಯಗಳು, ಸಂಸ್ಕಾರಗಳನ್ನು ಬೆಳೆಸಬೇಕು ಎಂದರು.

    ಸಾಧ್ಯ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಆರತಿ ಕೆ.ಬಿ.ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸದ್ಬಳಕೆಯಿಂದ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು. ಶಿಕ್ಷಣ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಮಹಿಳಾ ಸದಸ್ಯೆ, ಅಧ್ಯಕ್ಷರ ಅಧಿಕಾರವನ್ನು ಅವರ ಪತಿ, ಇಲ್ಲವೇ ಮಕ್ಕಳು ಚಲಾಯಿಸಿದ್ದು, ಅದಕ್ಕೆ ಅವಕಾಶ ನೀಡಬಾರದು. ರಾಜಕೀಯವಾಗಿ ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಸಮರ್ಪಕ ಆಡಳಿತ ನೀಡಬೇಕು ಎಂದು ಸಲಹೆ ನಿಡಿದರು.
    ಗಂಡು ಮಕ್ಕಳನ್ನು ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದರೆ, ಹೆಣ್ಣು ಮಕ್ಕಳಿಗೆ ಸರ್ಕಾರಿ ಕನ್ನಡ ಶಾಲೆಗೆ ಸೇರಿಸುವುದನ್ನು ನಿಲ್ಲಿಸಬೇಕು. ಭ್ರೂಣ ಹತ್ಯೆ, ಲಿಂಗತಾರತಮ್ಯ ಹೋಗಲಾಡಿಸಬೇಕು ಎಂದರು.

    ಪ್ರಸ್ತಾವಿಕವಾಗಿ ಮಾತನಾಡಿದ ಸಮಿತಿಯ ಪ್ರಮುಖರಾದ ಸ್ವಾತಿ ಸಿಂಗ್, ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ ಮಾಡಿಸಲು ಶ್ರಮಿಸುತ್ತಿದೆ. ಸುಮಾರು 80ಕ್ಕೂ ಹೆಚ್ಚು ಸದಸ್ಯೆಯರು ಈ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಪ್ರೋತ್ಸಾಹ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜನನಿ ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷೆ ಎನ್.ಹುಲಿಗೆಮ್ಮ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts