More

    ಮಹಾಮಾಯಾ ದೇವರ ಜಾತ್ರೆ ಸಂಪನ್ನ

    ಕಾರವಾರ: ಕದ್ರಾದ ಪ್ರಸಿದ್ಧ ಮಹಾಮಾಯಾ ದೇವರ ಜಾತ್ರೆಯನ್ನು ಗುರುವಾರ ಶ್ರದ್ಧೆ, ಭಕ್ತಿಯಿಂದ ನೆರವೇರಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿ ಶಕ್ತಿ ಸ್ವರೂಪಿ ದೇವಿಗೆ ಪೂಜೆ ಸಲ್ಲಿಸಿದರು.

    ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಜಾತ್ರೆ ಆಯೋಜಿಸಲಾಗಿತ್ತು. ಹೊರಗಿನ ಊರುಗಳ ಜನರಿಗೆ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಬೆಳಗಿನಿಂದ ಸ್ಥಳೀಯ ಭಕ್ತರು ಸರದಿಯಲ್ಲಿ ನಿಂತು ಹಣ್ಣು ಕಾಯಿ ಮಾಡಿಸಿದರು. ರಾತ್ರಿಯ ಹೊತ್ತಿಗೆ ವಿವಿಧ ಹರಕೆ ಒಪ್ಪಿಸಿದರು. ಶಾಸಕಿ ರೂಪಾಲಿ ನಾಯ್ಕ ದೇವಿಯ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಶಿಂಗೇವಾಡಿಯ ದೇವಿ: ಕದ್ರಾದಿಂದ ಮೂರು ಕಿಮೀ ದೂರದಲ್ಲಿ ಕಾಡಿನಲ್ಲಿರುವ ಶಿಂಗೇವಾಡಿ ಮಹಾಮಾಯಾ ದೇವಸ್ಥಾನದಲ್ಲಿ ಬುಧವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಕಾಳಿ ನದಿಯಲ್ಲಿ ಅಭಿಷೇಕ ಮಾಡಲಾಯಿತು. ಗುರುವಾರ ಬೆಳಗಿನಜಾವ ಮಿರಾಶಿ ಕುಟುಂಬದವರು ಕದ್ರಾ ಮಾರುಕಟ್ಟೆ ಸಮೀಪದ ಜಾತ್ರೆ ಕಟ್ಟೆಗೆ ದೇವಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಭತ್ತದ ಕದಿರಿನಿಂದ ಅಲಂಕರಿಸಿದರು. ನಂತರ ಸಾರ್ವಜನಿಕ ದರ್ಶನ ಹಾಗೂ ಸೇವೆಗಳಿಗೆ ಅವಕಾಶ ನೀಡಲಾಯಿತು.

    ಶತಮಾನಗಳ ಹಿನ್ನೆಲೆ: ಶಿಂಗೇವಾಡಿ ಮಹಾಮಾಯಾ ದೇವಸ್ಥಾನಕ್ಕೆ ಶತಮಾನಗಳ ಹಿನ್ನೆಲೆ ಇದೆ. ಗೋವಾ ಮೂಲದ ದೇವಿ ಕದ್ರಾದಲ್ಲಿ ಬಂದು ನೆಲೆಸಿದಳು ಎಂಬ ಕಥೆ ಜನರಲ್ಲಿದೆ. ಮಿರಾಶಿ ಕುಟುಂಬದ ಹಿರಿಯರಿಗೆ ಕನಸಲ್ಲಿ ಬಂದ ದೇವಿ ಇಲ್ಲಿ ಗುಡಿ ಸ್ಥಾಪಿಸುವಂತೆ ಆದೇಶಿಸುತ್ತಾಳೆ. ಅದರಂತೆ ಆಕಳೊಂದಕ್ಕೆ ಗಂಟೆ ಕಟ್ಟಿ ಮೇಯಲು ಬಿಡಲಾಗುತ್ತದೆ. ಗಂಟೆ ಆಕಳ ಕತ್ತಿನಿಂದ ಉದುರಿ ಬಿದ್ದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಯಿತು ಎಂದು ಹಿರಿಯರು ಕಥೆ ಹೇಳುತ್ತಾರೆ. ದೇವಸ್ಥಾನಕ್ಕೆ ಹೊರ ರಾಜ್ಯಗಳ ಸಾಕಷ್ಟು ಭಕ್ತರೂ ನಡೆದುಕೊಳ್ಳುತ್ತಾರೆ. ಶಿಂಗೇವಾಡಿ ಮಹಾಮಾಯಾ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಪೂಜೆ ಸಲ್ಲುತ್ತದೆ. ಪ್ರತಿ ವರ್ಷ ಕಾರ್ತೀಕ ಶುದ್ಧ ಪಂಚಮಿಗೆ ಜಾತ್ರೆ ನಡೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts