More

    ಮಹಾಮಳೆಗೆ ಜನಜೀವನ ತತ್ತರ

    ಶಿರಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ತತ್ತರಿಸಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ಸಂಪರ್ಕ ಕಡಿತವಾಗಿದೆ.

    ತಾಲೂಕಿನ ಪಟ್ಟಣದ ಹೊಳೆ ಶತಮಾನದ ಇತಿಹಾಸದಲ್ಲಿ ಮೊದಲ ಬಾರಿಗೆ 24 ಗಂಟೆಗೂ ಹೆಚ್ಚು ಕಾಲ ಸೇತುವೆ ಮೇಲೆ ನೀರು ಹರಿದಿದೆ. ಶಾಲ್ಮಲಾ ನದಿ ನೀರು ಉಕ್ಕಿದ ಪರಿಣಾಮ ಕೆಂಗ್ರೆ, ಸೋಂದಾ, ದೇವರಹೊಳೆ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ. ಗಣೇಶಪಾಲ ಬಳಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತ ಆಗಿದೆ. ಕಕ್ಕಳ್ಳಿಗೆ ಸಾಗುವ ಮಾರ್ಗದ ಬಿಳೆಪಾಲ ಬಳಿ ಮರ ರಸ್ತೆಗೆ ಬಿದ್ದ ಕಾರಣ ಸಂಚಾರ ಕಡಿತಗೊಂಡಿದೆ. ನದಿ ಪಾತ್ರದ ಕೃಷಿ ಭೂಮಿಗಳು ಜಲಾವೃತವಾಗಿದ್ದು, ರೈತರಿಗೆ ನಷ್ಟ ಉಂಟಾಗಿದೆ.

    ವರದಾ ಪ್ರವಾಹ: ತಾಲೂಕಿನ ಪೂರ್ವ ಭಾಗದಲ್ಲಿ ವರದಾ ನದಿ ಪ್ರವಾಹ ಸೃಷ್ಟಿಯಾಗಿದ್ದು, ಮೊಗಳ್ಳಿ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಇದೇ ರೀತಿ ಮಳೆಯಾದರೆ ಗ್ರಾಮದಿಂದ ಜನರ ಸ್ಥಳಾಂತರ ಅನಿವಾರ್ಯವಾಗಲಿದೆ. ಸುಮಾರು 500 ಎಕರೆ ಭತ್ತದ ಕ್ಷೇತ್ರ ಸಂಪೂರ್ಣ ಜಲಾವೃತವಾಗಿದೆ. ಸಮೀಪದ ಅಜ್ಜರಣಿ ಸೇತುವೆ ಜಲಾವೃತವಾಗಿ ಬನವಾಸಿ- ಅಜ್ಜರಣಿ ಸಂಪರ್ಕ ಕಡಿತವಾಗಿದೆ.

    ಕುಸಿದು ಬಿದ್ದ ಕಟ್ಟಡ: ಭಾರಿ ಮಳೆ ಸುರಿಯುತ್ತಿರುವುದರಿಂದ ನಗರದ ಸಿ.ಪಿ. ಬಜಾರದ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದೆ. ಒಂದು ಬದಿಯ ಗೋಡೆ ನೀರಿನಿಂದ ನೆನೆದು ಕುಸಿದಿದೆ. ಚಿನ್ನು ರಾಯ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ. ಬಿದ್ದ ಕಟ್ಟಡಕ್ಕೆ ಹೊಂದಿಕೊಂಡಿರುವ ಬಟ್ಟೆ ಮಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳ ದಾಸ್ತಾನಿದೆ. ಸದ್ಯ ಕಟ್ಟಡದ ಅವಶೇಷ ತೆರವುಗೊಳಿಸುವ ಕೆಲಸ ಅಗ್ನಿಶಾಮಕ ದಳದ ಸಿಬ್ಬಂದಿ ಆರಂಭಿಸಿದ್ದಾರೆ. ಅಕ್ಕಪಕ್ಕದ ಮಳಿಗೆಗಳಲ್ಲಿರುವ ಸಾಮಗ್ರಿ ಸ್ಥಳಾಂತರ ಕಾರ್ಯ ನಡೆದಿದೆ.

    ಭರ್ತಿಯಾದ ಕೆರೆಗಳು: ಮಹಾಮಳೆಗೆ ನಗರದ ಕೋಟೆಕೆರೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ತಾಲೂಕಿನ ಬನದಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರದ ಕುಂಬಾರಕಟ್ಟೆ ಕೆರೆ ಭರ್ತಿಯಾಗಿದೆ. ಕೆಲವೆಡೆ ಕೆರೆ ಕಟ್ಟೆಗಳು ಒಡೆದಿದ್ದು, ನೀರು ಕೆಳಭಾಗದ ಕೃಷಿಭೂಮಿಗೆ ನುಗ್ಗಿದೆ. ಅಡಕೆ ತೋಟ, ಭತ್ತದ ಗದ್ದೆಗಳಿಗೆ ವ್ಯಾಪಕವಾಗಿ ನೀರು ಹರಿಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದರ ಜತೆ ಜಿಲ್ಲೆಯ ದೊಡ್ಡಕೆರೆ ಖ್ಯಾತಿಯ ಗುಡ್ನಾಪುರ ಕೆರೆ ಕೋಡಿ ಬಿದ್ದಿದೆ.

    ಜಿಲ್ಲಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಶಿರಸಿ ತಾಲೂಕಿನ ಗ್ರಾಮೀಣ ಭಾಗದ ವಾನಳ್ಳಿ ಪ್ರದೇಶದಲ್ಲಿ ಗುರುವಾರ ಒಂದೇ ದಿನ 16 ಇಂಚು (406.4ಮಿಮೀ) ಯಷ್ಟು ಮಳೆ ದಾಖಲಾಗಿದೆ. ಕಳೆದೆರಡು ವರ್ಷಗಳಿಂದ ಈ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿದ್ದು, 2019ರಲ್ಲಿ ಒಂದೇ ದಿನದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಪಡೆದ ಪ್ರದೇಶವೆಂದು ಗುರುತಿಸಲ್ಪಟ್ಟಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಮಳೆ ಸುರಿದಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ. ಅಲ್ಲದೇ ಈ ಪ್ರದೇಶ ಮುಖ್ಯ ಸಂಪರ್ಕಕೊಂಡಿಯಾದ ಪಟ್ಟಣದ ಹೊಳೆ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ಕಳೆದೆರಡು ದಿನಗಳಿಂದ ಸೇತುವೆಯ ಮೇಲೆ 10 ಅಡಿಗಿಂತಲೂ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ವಾನಳ್ಳಿ-ಕಕ್ಕಳ್ಳಿ , ಜಡ್ಡಿಗದ್ದೆ ಪ್ರದೇಶಗಳು ಸಂಪರ್ಕ ರಹಿತವಾಗಿದೆ.

    ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ

    ತಾಲೂಕಿನ ಕೋಟೆಕೊಪ್ಪದ ದೇವೇಂದ್ರ ಗೌಡ ಅವರ ಮನೆಯ ಗೋಡೆ ಕುಸಿದು 25 ಸಾವಿರ ರೂಪಾಯಿಗಳಷ್ಟು ಹಾನಿ, ಗೋಲಗೇರಿ ಓಣಿಯ ಪ್ರಕಾಶ ಜಾಧವ ಅವರ ಮನೆ ಬಿದ್ದು 80 ಸಾವಿರ ರೂಪಾಯಿ ಹಾನಿ, ಶ್ರೀರಾಮ ಕಾಲನಿಯ ಶ್ರೀನಿವಾಸ ಪೂಜಾರಿ ಅವರಿಗೆ ಸೇರಿದ ಶೌಚಗೃಹ ಬಿದ್ದು 15 ಸಾವಿರ ರೂಪಾಯಿಗಳಷ್ಟು ಹಾನಿಯಾಗಿದೆ. ಕರೆಗುಂಡಿ ರಸ್ತೆ ಸುಶೀಲಾ ರೇವಣಕರ ಅವರ ಮನೆ ಗೋಡೆ ಬಿದ್ದು 80 ಸಾವಿರ ಹಾನಿಯಾಗಿದೆ. ಸೋಂದಾದ ಸರಸ್ವತಿ ಶೆಟ್ಟಿ ಅವರ ಜಮೀನಿಗೆ ಧರೆ ಕುಸಿತದ ಜತೆ ನೀರು ನುಗ್ಗಿದ ಪರಿಣಾಮ ಅಪಾರ ಹಾನಿಯಾಗಿದೆ. ಬಾಳಗಾರ ಗ್ರಾಮದ ನಿರಂಜನ ಹೆಗಡೆ ಹಾಗೂ ಜಯಲಕ್ಷ್ಮಿ ಹೆಗಡೆ ಇವರ ಮನೆ ಅಘನಾಶಿನಿ ನದಿ ಪ್ರವಾಹದಲ್ಲಿ ಸಂಪೂರ್ಣ ಜಲಾವೃತವಾಗಿದ್ದು, ಕುಸಿಯುವ ಹಂತ ತಲುಪಿದೆ. ಈ ಎರಡು ಮನೆಯ 10 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

    ಮಹಿಷಾಸುರ ಮರ್ದಿನಿಗೂ ಎದುರಾದ ಜಲಕಂಟಕ

    ಸಿದ್ದಾಪುರ: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನೆ ಏರಿಕೆಯಾಗಿ ಸಿದ್ದಾಪುರ-ಶಿರಸಿ ತಾಲೂಕಿನ ಗಡಿಪ್ರದೇಶವಾದ ಸರಕುಳಿ ಜನತೆ ನೀರಿನ ಪ್ರವಾಹಕ್ಕೆ ಸಿಲುಕಿದ್ದಾರೆ.

    ಗುರುವಾರ ರಾತ್ರಿಯಿಂದ ಸರಕುಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಇದರಿಂದಾಗಿ ಸ್ಥಳೀಯ ಮಹಿಷಾಸುರ ಮರ್ದಿನಿ ದೇವಾಲಯದೊಳಗೆ ನೀರು ನುಗ್ಗಿದೆ. ಇಲ್ಲಿಯ ಶ್ರೀಧರ ನಾಯ್ಕ ಅವರ ಮನೆಯೊಳಗೆ ನೀರು ನುಗ್ಗಿದ್ದು, ಸ್ಥಳೀಯರ ಸಹಕಾರದಿಂದ ಸಾಮಾನು ಸರಂಜಾಮುಗಳನ್ನು ಹೊರಸಾಗಿಸಲಾಗಿದೆ. ಗಣಪತಿ ಶೆಟ್ಟಿ ಅವರ ಮನೆಯೊಳಗೆ ನೀರು ನುಗ್ಗಿದ್ದರಿಂದ ವಸ್ತುಗಳೆಲ್ಲ ಕೊಚ್ಚಿಹೋಗಿದೆ. ಅಘನಾಶಿನಿ ಪ್ರವಾಹದಿಂದಾಗಿ ಇಲ್ಲಿಯ ಕೆಲ ಮನೆಗಳ ನಿವಾಸಿಗಳು ಅನಿವಾರ್ಯವಾಗಿ ಮನೆಬಿಡುವಂತಾಗಿದೆ.

    ಸಿಲುಕಿದ ಅರ್ಚಕ: ಇಲ್ಲಿಯ ಮಹಿಷಾಸುರ ಮರ್ದಿನಿ ದೇವಾಲಯದ ಅರ್ಚಕ ಗಣಪತಿ ಭಟ್ಟ ದೇವಾಲಯದೊಳಗೆ ಸಿಲುಕಿದ್ದರಿಂದ ಸ್ಥಳೀಯರು ಆತಂಕಪಟ್ಟಿದ್ದರು. ದೇವಾಲಯದ ಆವರಣದಲ್ಲಿರುವ ಅವರ ಮನೆಯಲ್ಲಿ ಗಣಪತಿ ಭಟ್ಟ ಇದ್ದರು. ಕೆಲವೇ ಕ್ಷಣದಲ್ಲಿ ನೀರು ಏರಿಕೆ ಆಗಿದ್ದರಿಂದ ಅವರಿಗೆ ಹೊರಬರಲು ಸಾಧ್ಯ ಆಗಿಲ್ಲ. ಸ್ಥಳೀಯರು ರಕ್ಷಣೆಗಾಗಿ ತಾಲೂಕು ಆಡಳಿತವನ್ನು ಸಂರ್ಪಸಿದರೂ ಅವರು ಆಗಮಿಸುವುದು ತಡವಾಗಲಿದೆ ಎಂದು ಅರಿತ ಸ್ಥಳೀಯರು ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಧುಮುಕಿ ಈಜಿ ಗಣಪತಿ ಭಟ್ಟ ಅವರ ಮನೆಯ ಮಹಡಿ ಏರಿದ್ದಾರೆ. ನಂತರ ಮಹಡಿಯ ಹೆಂಚು ತೆಗೆದು ಗಣಪತಿ ಭಟ್ಟ ಅವರನ್ನು ರಕ್ಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts