More

    ಮಳೆ ಹಾನಿ ಪರಿಹಾರಕ್ಕೆ 10 ಕೋಟಿ ಅನುದಾನ

    ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತದ ಸಹಾಯಕ್ಕೆ ಅಗ್ನಿಶಾಮಕ ದಳ ಹಾಗೂ ಎಸ್​ಡಿಆರ್​ಎಫ್ ತಂಡವನ್ನು ನಿಯೋಜಿಸಲಾಗುವುದು. ಮಳೆ ಹಾಗೂ ನೆರೆ ಹಾನಿ ಪರಿಹಾರ ಕಾರ್ಯಗಳಿಗಾಗಿ 10 ಕೋಟಿ ರೂ. ತುರ್ತು ಹಣವನ್ನು ಜಿಲ್ಲೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಡಳಿತದ ಬಳಿ ವಿಪತ್ತು ನಿರ್ವಹಣೆಗಾಗಿ 6.24 ಕೋಟಿ ಹಣವಿದೆ. ಶನಿವಾರ 5 ಕೋಟಿ ಹಣ ಬಿಡುಗಡೆಯಾಗಿದೆ. ಇನ್ನೂ 5 ಕೋಟಿ ರೂ. ಶೀಘ್ರ ಬರಲಿದೆ. ಅಗತ್ಯಬಿದ್ದರೆ ಮತ್ತಷ್ಟು ಅನುದಾನ ಒದಗಿಸಲಾಗುವುದು ಎಂದರು.

    ಕಳೆದ ಬಾರಿಯ ಪ್ರವಾಹದ ಆಧಾರದ ಮೇಲೆ ತುಂಗಭದ್ರಾ, ವರದಾ, ಧರ್ವ ನದಿ ಪಾತ್ರದ ಹಳ್ಳಿಗಳು ಸೇರಿದಂತೆ ಮಳೆ ಹಾಗೂ ನೆರೆಯಿಂದ ತೊಂದರೆಗೆ ಸಿಲುಕಬಹುದಾದ 144 ಹಳ್ಳಿಗಳನ್ನು ಗುರುತಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಗ್ರಾಮಗಳ ಜನ, ಜಾನುವಾರುಗಳ ರಕ್ಷಣೆಗೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.

    ಮಳೆಯಿಂದ ಹಾನಿಯಾದ ಬೆಳೆಗಳ ಪ್ರಾಥಮಿಕ ಸಮೀಕ್ಷೆ ಜೊತೆಗೆ ಮಣ್ಣು ಕೊಚ್ಚಿ ಹೋಗಿ ಭೂಮಿ ಹಾಳಾದ ಕುರಿತಂತೆ ಎರಡು ಮಾದರಿಯಲ್ಲಿ ಸಮೀಕ್ಷೆಗೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಅತಿವೃಷ್ಟಿಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಒಂದು ತಿಂಗಳ ಪಡಿತರ ನೀಡಲು ಸೂಚಿಸಲಾಗಿದೆ ಎಂದರು.

    ಮಳೆಯಿಂದ ಹಾನಿಯಾದ ಜಿಪಂ, ಪಿಡಬ್ಲ್ಯುಡಿ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು ಸರ್ವೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿದೆ. ಸಣ್ಣ ನೀರಾವರಿ ಮತ್ತು ಜಿಪಂ ಕೆರೆಗಳ ದಂಡೆಗಳನ್ನು ಪರಿಶೀಲಿಸಿ ಶಿಥಿಲಗೊಂಡಿರುವ ದಂಡೆಗಳನ್ನು ಭದ್ರಪಡಿಸಲು ಸೂಚಿಸಲಾಗಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಸಿಇಒ ರಮೇಶ ದೇಸಾಯಿ ಇತರರಿದ್ದರು.

    ಪರಿಹಾರ ವಿತರಣೆಯಲ್ಲಿ ತಪ್ಪೆಸಗದಿರಿ

    ಕಳೆದ ವರ್ಷದ ನೆರೆ ಹಾವಳಿ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿಯ ಮನೆಹಾನಿ ಸರ್ವೆಯಲ್ಲಿ ಮರುಕಳಿಸಬಾರದು. ತಪ್ಪು ಮರುಕಳಿಸಿದರೆ ಅಧಿಕಾರಿಗಳ ತಲೆದಂಡವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಎಲ್ಲ ತಹಸೀಲ್ದಾರ್​ಗಳು ನಿಯಂತ್ರಣ ಹೊಂದಬೇಕು. ಮನೆಹಾನಿಯಾದ ಪ್ರದೇಶಕ್ಕೆ ಆ ದಿನವೇ ಭೇಟಿ ನೀಡಿ ಪರಿಶೀಲನೆ ನಡೆಸಿ. ಮನೆ ಪರಿಹಾರ ವಿತರಣೆಯಲ್ಲಿ ಯಾವುದೇ ದೂರುಗಳು ಬರಬಾರದು. ತಹಸೀಲ್ದಾರ್​ಗಳಿಗೆ ನೀಡುವ ಲಾಗಿನ್​ಗಳನ್ನು ಕೆಳಹಂತದ ಸಿಬ್ಬಂದಿ ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು. ಏಜೆಂಟರ್ ಪಾತ್ರ ಕಂಡುಬಂದರೆ ಅಂತಹ ಅಧಿಕಾರಿಗಳನ್ನು ಖಂಡಿತ ಉಳಿಸುವುದಿಲ್ಲ ಎಂದು ಸಚಿವ ಬೊಮ್ಮಾಯಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts