More

    ಮಳೆ ಹಾನಿ ತಡೆಗೆ ಸಿದ್ಧತೆ ಪೂರ್ಣಗೊಳಿಸಿ

    ಧಾರವಾಡ: ಕಳೆದ ವರ್ಷ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಮೂಲ ಸೌಕರ್ಯಗಳಿಗೆ ಹಾನಿಯಾಗಿತ್ತು. ಪ್ರಸಕ್ತ ವರ್ಷ ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಆಯಾ ಇಲಾಖೆ ಅಧಿಕಾರಿಗಳು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಾನ್ಸೂನ್ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಣ್ಣ ನೀರಾವರಿ, ಪಾಲಿಕೆ, ಲೋಕೋಪಯೋಗಿ, ಪಂಚಾಯತ್​ರಾಜ್ ಇಂಜಿನಿಯರಿಂಗ್ ವಿಭಾಗ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಆಡಳಿತ ಜಂಟಿಯಾಗಿ ಆಯಾ ತಾಲೂಕಿನಲ್ಲಿ ಅಧಿಕ ಮಳೆಯಿಂದಾಗಿ ಕಳೆದ ಸಾಲಿನಲ್ಲಿ ತೊಂದರೆಗೀಡಾದ ಪ್ರದೇಶಗಳನ್ನು ಗುರುತಿಸಬೇಕು. ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಮಳೆಯಾದರೆ ಜನರಿಗೆ ವ್ಯವಸ್ಥೆ ಕಲ್ಪಿಸಲು, ಹಾಸ್ಟೆಲ್, ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡುವುದು ಕಡ್ಡಾಯ ಎಂದರು.

    ಕುಂದಗೋಳ ಮತ್ತು ನವಲಗುಂದ ತಾಲೂಕುಗಳಲ್ಲಿ ಕಳೆದ ಬಾರಿ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದಿಂದ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ ಈ ಬಾರಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಅಳ್ನಾವರದ ಹುಲಿಕೆರೆ, ಧಾರವಾಡದ ನುಗ್ಗಿಕೇರಿ, ಕೆಲಗೇರಿ, ಹುಬ್ಬಳ್ಳಿಯ ಉಣಕಲ್ಲ, ರಾಮಾಪುರ, ಕಲಘಟಗಿಯ ಹಿರೇಹೊನ್ನಳ್ಳಿ ಕೆರೆಗಳಿಂದ ಅಪಾರ ಪ್ರಮಾಣದ ನೀರು ಬಂದು ಜನವಸತಿ ಪ್ರದೇಶಗಳಿಗೆ ಹಾನಿ ಉಂಟಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸುತ್ತಲಿನ ಪ್ರದೇಶಗಳಲ್ಲಿ ಕಾಲುವೆ, ಒಳಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕೆರೆಗಳ ವಿಸ್ತಾರದ ಕುರಿತು ವೆಬ್​ಸೈಟ್​ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಬೇಕು ಎಂದರು.

    ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾತನಾಡಿ, ಅವಳಿ ನಗರದಲ್ಲಿ ಮಳೆಯಿಂದ ತೊಂದರೆಗೀಡಾಗುವ 15 ಪ್ರದೇಶಗಳನ್ನು ಗುರುತಿಸಲಾಗಿದೆ. ನಾಲಾ, ಒಳಚರಂಡಿ ಸ್ವಚ್ಛತೆ ಆರಂಭಿಸಲಾಗಿದೆ ಎಂದರು.

    ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ ಶಿರಹಟ್ಟಿ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ವಿ.ಎನ್. ಪಾಟೀಲ್, ಪಂಚಾಯತ್​ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮನೋಹರ ಮಂಡೋಲಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ದೇವರಾಜ್ ಶಿಗ್ಗಾಂವಿ, ಅಗ್ನಿಶಾಮಕ ದಳ, ಆರೋಗ್ಯ, ಪಶುಪಾಲನೆ, ಕೃಷಿ, ಹೆಸ್ಕಾಂ, ಮಲಪ್ರಭಾ ಕಾಲುವೆ ಅಧಿಕಾರಿಗಳು, ತಹಸೀಲ್ದಾರರು,ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕೈಗೊಂಡ ಪೂರ್ವಸಿದ್ಧತೆಗಳನ್ನು ವಿವರಿಸಿದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿವೈಎಸ್​ಪಿ ರವಿ ನಾಯ್್ಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಧಾರವಾಡ ಜಿಲ್ಲಾ ಅಂಕಿ ಅಂಶಗಳ ಕೈಪಿಡಿ ಬಿಡುಗಡೆ

    ಧಾರವಾಡ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಪ್ರಕಟಿಸಿರುವ ಧಾರವಾಡ ಜಿಲ್ಲಾ ಅಂಕಿ ಅಂಶಗಳ ನೋಟ 2018- 19 ಕೈಪಿಡಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಗುರುವಾರ ಬಿಡುಗಡೆ ಮಾಡಿದರು. ತಾಲೂಕುಗಳ ನಕ್ಷೆ, ಭೂಬಳಕೆ ಮತ್ತು ಭೂಕವಚ, ಮಣ್ಣು, ಒಳಚರಂಡಿ ಮತ್ತು ಜಲಮೂಲಗಳು, ಡಾ. ಡಿ.ಎಂ. ನಂಜುಂಡಪ್ಪ ವರದಿ ಗುರುತಿಸಿದ ಹಿಂದುಳಿದ ತಾಲೂಕುಗಳ ಸೂಚಕಗಳಿಗೆ ಸಂಬಂಧಿಸಿದ ನಕ್ಷೆ, ಬಿತ್ತನೆ ಪ್ರದೇಶ, ಆಹಾರ ಧಾನ್ಯ ಬೆಳೆ ಪ್ರಮಾಣ, ತೋಟಗಾರಿಕೆ, ವಾಣಿಜ್ಯ ಬೆಳೆಗಳು, ರಸಗೊಬ್ಬರ, ಜಾನುವಾರುಗಳ ಘಟಕಗಳು, ಕೃಷಿಗೆ ಒದಗಿಸಲಾದ ಬ್ಯಾಂಕ್ ಸಾಲ, ಕಾರ್ವಿುಕರು, ಮಾರುಕಟ್ಟೆ, ಸಾಕ್ಷರತೆ, ಲಿಂಗಾನುಪಾತ, ಮೋಟಾರು ವಾಹನಗಳ ಸಂಖ್ಯೆ, ಪಡಿತರ ಚೀಟಿದಾರರು, ವಿಸ್ತೀರ್ಣ, ಜನಸಂಖ್ಯೆ, ಕೃಷಿ ಕಾರ್ವಿುಕರು, ಮಳೆ, ಕೈಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ವಿದ್ಯಾರ್ಥಿ- ಶಿಕ್ಷಕರ ಅನುಪಾತದಂಥ ಅಗತ್ಯ ಮಾಹಿತಿಯನ್ನು ಕಿರುಹೊತ್ತಿಗೆ ಒಳಗೊಂಡಿದೆ. ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಾರುತಿ ತಳವಾರ ಹಾಗೂ ಎಲ್ಲ ತಹಸೀಲ್ದಾರರು ಉಪಸ್ಥಿತರಿದ್ದರು.

    ಮಳೆಯಿಂದಾಗಿ ಹಾನಿ, ಅಪಾಯ ಉಂಟಾದಾಗ ತಕ್ಷಣ ನೆರವಿಗೆ ಬರಲು ಅಗ್ನಿಶಾಮಕದಳ, ಮಹಾನಗರ ಪಾಲಿಕೆ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಸುರಕ್ಷತೆ ಸಾಧನಗಳನ್ನು ಸಿದ್ಧವಾಗಿಡಬೇಕು. ಅದಕ್ಕಾಗಿ ಜಿಲ್ಲಾಡಳಿತದಿಂದ ಬೋಟ್, ಜೀವರಕ್ಷಕ ಜಾಕೆಟ್, ಬ್ಯಾಟರಿ, ಮರ ಕಡಿಯುವ ಸಾಧನ, ಇತರ ಅಗತ್ಯ ಉಪಕರಣಗಳನ್ನು ಪೂರೈಸಲಾಗುವುದು.

    | ದೀಪಾ ಚೋಳನ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts